ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದಚುನಾವಣೆಯಲ್ಲಿ ತಮ್ಮ ಆಪ್ತ ಹಾಗೂ ಪಕ್ಷದ 5ನೇ ಅಭ್ಯರ್ಥಿ ವಿನಯ್ ಕಾರ್ತಿಕ್ ಅವರನ್ನು ಬಿಜೆಪಿ-ಜೆಡಿಎಸ್ ಪಕ್ಷಗಳ ಅಡ್ಡಮತದಾನಗಳಿಂದ ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ಪ್ರಾಬಲ್ಯ ಮೆರೆದಿರುವ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ವಿಪಕ್ಷಗಳನ್ನು “ಟೆಸ್ಟ್ ಡೋಸ್’ನಲ್ಲೇ ಛಿದ್ರಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವುಗಳಿಗೆ ಮತ್ತಷ್ಟು ಶಾಕ್ ಕೊಡುವುದಕ್ಕೆ ಭೂಮಿಕೆ ಸಿದ್ಧವಾಗಿದೆ.ಪರಿಷತ್ತಿನ ಚುನಾವಣೆಯ ಫಲಿತಾಂಶದಿಂದ ಆಡಳಿತಾರೂಢ ಕಾಂಗ್ರೆಸ್ ಗೆಲುವಿನ ಸಂಭ್ರಮದಲ್ಲಿದ್ದರೆ, ಪ್ರತಿಪಕ್ಷಗಳಾದ ಬಿಜೆಪಿ -ಜೆಡಿಎಸ್‌ನಲ್ಲಿ ಸೂತಕ ಮನೆ ಮಾಡಿದೆ. ಬಿಜೆಪಿಯ ಇಬ್ಬರು ಅಧಿಕೃತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೂ ಬಿಜೆಪಿ ಅಭ್ಯರ್ಥಿಗಳಿಗೆ ಹಂಚಿಕೆಯಾಗಿದ್ದ ಮತಗಳೆಲ್ಲವೂ ಬೀಳದೆ ಇರುವುದು ಹಾಗೂ ಬಿಜೆಪಿ ಹೆಚ್ಚುವರಿ ಮತಗಳು ಜೆಡಿಎಸ್‌ಗೆ ವರ್ಗಾವಣೆ ಆಗದಿರುವುದು ಬಿಜೆಪಿ ನಾಯಕತ್ವವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಜತೆಗೆ ಈ ಫಲಿತಾಂಶದಿಂದ ಜೆಡಿಎಸ್‌ಗಿಂತಲೂ ಬಿಜೆಪಿ ತೀವ್ರ ಮುಜುಗರಕ್ಕೆ ಒಳಗಾಗಿದೆ.
ಒಂದೇ ಕಲ್ಲಿಗೆ 2 ಹಕ್ಕಿ:
ಬಿಜೆಪಿ- ಜೆಡಿಎಸ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಅವಲೋಕಿಸಿದರೆ, ಇದು ಬಿಜೆಪಿಗೆ “ಶಾಕ್ ಟ್ರೇಟೆಂಟ್’ ಆಗಿದ್ದರೆ ಜೆಡಿಎಸ್‌ನದು ಒಂದು ರೀತಿ ನಿರೀಕ್ಷಿತ ಫಲಿತಾಂಶ. ಈ ಫಲಿತಾಂಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಅವರ ನಾಯಕತ್ವಕ್ಕೆ ಪೆಟ್ಟು ಬೀಳುವ ಸಾಧ್ಯತೆಗಳಿವೆ. ಗೆಲುವಿಗೆ ಸಂಖ್ಯಾಬಲದ ಕೊರತೆ ಇದ್ದರೂ “ಆತ್ಮಸಾಕ್ಷಿ’ ಮತಗಳನ್ನು ನಂಬಿ ತಮ- ಅಭ್ಯರ್ಥಿ ಗೋವಿಂದರಾಜು ಅವರನ್ನು ಕಣಕ್ಕಿಳಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರು ತೀವ್ರ ಮುಜುಗರಕ್ಕೆ ಗುರಿಯಾಗಿದ್ದಾರೆ. ವಿಶೇಷವಾಗಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿರುದ್ಧ ಟೀಕೆಗಳ ಸುರಿಮಳೆಗರೆಯುತ್ತಿದ್ದ ಕುಮಾರಸ್ವಾಮಿಗೆ ಡಿಕೆಶಿ ರೂಪಿಸಿದ ತಂತ್ರ ಫಲ ಕೊಟ್ಟಿದೆ. ಹೀಗಾಗಿ ಮುಖ್ಯಮಂತ್ರಿಯವರು ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದುರುಳಿಸಿದ್ದಾರೆ. ಬಿಜೆಪಿ- ಜೆಡಿಎಸ್ ಪಕ್ಷಗಳ ನಡುವಿನ ಮೈತ್ರಿ ಭವಿಷ್ಯವೂ ಈಗ ಹಲವು ಬಗೆಯ ಚರ್ಚೆಗೆ ಗ್ರಾಸವಾಗಿದೆ.
15 ದಿನದಲ್ಲೇ ವಿಪಕ್ಷ ಬೇಟೆ :
ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ 15 ದಿನಗಳಲ್ಲೇ ಡಿ. ಕೆ. ಶಿವಕುಮಾರ್ ಅವರು ವಿಪಕ್ಷಗಳನ್ನು ಬೇಟೆಯಾಡಿದ್ದಾರೆ. ತಮ್ಮ ಬಳಿ ಇದ್ದ 140 ಮತಗಳ ಜತೆಗೆ ಹೆಚ್ಚುವರಿಯಾಗಿ 11 ಮತಗಳನ್ನು ಬಿಜೆಪಿ- ಜೆಡಿಎಸ್‌ನಿಂದ ಪಡೆಯುವ ಮೂಲಕ ಕಾಂಗ್ರೆಸ್‌ನ ಐವರು ಅಭ್ಯರ್ಥಿಗಳನ್ನು ಭರ್ಜರಿಯಾಗಿ ಗೆಲ್ಲಿಸಿಕೊಂಡಿದ್ದಾರೆ. ಜತೆಗೆ ತಮ್ಮ ಪಕ್ಷದ ಒಂದೇ ಒಂದು ಮತವೂ ಅಡ್ಡಮತವಾಗದಂತೆ ಜತೆಗೆ ಅನರ್ಹಗೊಳ್ಳದಂತೆಯೂ ರೂಪಿಸಿದ್ದ “ಶಿಸ್ತು ಬದ್ಧ’ ತಂತ್ರಗಾರಿಕೆ ಕೂಡ ಅವರ ರಾಜಕೀಯ ಅನುಭವವನ್ನು ಒರೆಗೆ ಹಚ್ಚಿದೆ. ಇದರಿಂದಾಗಿ ತಮ್ಮ ನಾಯಕತ್ವಕ್ಕೆ ಮತ್ತಷ್ಟು ಶಕ್ತಿ ಬಂದಿದ್ದು ಮಾತ್ರವಲ್ಲ ಒಕ್ಕಲಿಗರ ಪ್ರಾಬಲ್ಯವಿರುವ ಜಿಲ್ಲೆಗಳಿಗೆ ಒಂದು ಸಂದೇಶವೂ ರವಾನೆಯಾದಂತೆ ಆಗಿದೆ. ತಾವು “ಟ್ರಬಲ್ ಶೂರ್ಟ’ ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸುವ ಮೂಲಕ ಪಕ್ಷದಲ್ಲಿ ಮೇಲುಗೈ ಸಾಧಿಸಿದ್ದಾರೆ. ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದಾರೆ. ಇದೊಂದು ರೀತಿ ಸಿಎಂ ಡಿ.ಕೆ.ಶಿವಕುಮಾರ್‌ಗೆ “ಆರಂಭಿಕ ಮುನ್ನಡೆ’ ಎಂದೇ ಪಕ್ಷ ಹಾಗೂ ಹೈಕಮಾಂಡ್ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಭಯ ಪಕ್ಷಗಳಿಗೆ ಶಾಕ್ ಮೇಲೆ ಶಾಕ್ ಕಾದಿದೆ ಎಂದು ಹೇಳಲಾಗುತ್ತಿದೆ.
ಡಿಕೆಶಿ ಸೀಕ್ರೆಟ್ ಆಪರೇಷನ್:
ಮೊದಲ ಯತ್ನದಲ್ಲೇ ಒಂದೇ ಕಲ್ಲಿನಲ್ಲಿ ವಿಪಕ್ಷಗಳ ಮನೆಯಲ್ಲಿ ಕಂಪನ ಸೃಷ್ಟಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡೆಸಿದ “ಸಿಕ್ರೇಟ್ ಆಪರೇಷನ್’ನಿಂದಾಗಿ ಈಗ ಬಿಜೆಪಿ- ಜೆಡಿಎಸ್ ಪಕ್ಷಗಳು ಪರಸ್ಪರ ದೋಷಾರೋಪಣೆಯಲ್ಲಿ ನಿರತವಾಗಿವೆ. ಜತೆಗೆ ತಮ್ಮಿಂದ ಯಾರು ಅಡ್ಡಮತದಾನ ಮಾಡಿರಬಹುದು ಎಂಬ ಗುಮಾನಿ ತನಿಖೆ ಕೆಲಸ ಶುರುವಾಗಿದೆ. ಜತೆಗೆ ಮೈತ್ರಿ ಭವಿಷ್ಯದ ಮೇಲೂ ಪರಿಣಾಮ ಬೀರಿದೆ. ತಮ್ಮ 5ನೇ ಅಭ್ಯರ್ಥಿ ಗೆಲುವಿಗೆ ಬೇಕಾದ ಅಗತ್ಯ ಮತಗಳಿಗಿಂತಲೂ ಹೆಚ್ಚುವರಿ ಮತಗಳನ್ನು (21 + 11 = 32) ಪಡೆಯುವುದಕ್ಕೆ ರೂಪಿಸಿದ್ದ ತಂತ್ರಗಾರಿಕೆಯು ಸಿಎಂ ಡಿ.ಕೆ.ಶಿವಕುಮಾರ್ ಅವರೊಬ್ಬರಿಗೆ ಅಥವಾ ಒಂದಿಬ್ಬರಿಗೆ ಮಾತ್ರ ಗೊತ್ತಿತ್ತು. ಸ್ವತಃ ಅಭ್ಯರ್ಥಿಗೂ ತಮಗೆ ಎಲ್ಲಿಂದ ಮತಗಳ ಬರುತ್ತವೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ. ಅಷ್ಟರ ಮಟ್ಟಿಗೆ ಸಿಎಂ ಸೀಕ್ರೆಟ್ ಆಪರೇಷನ್ ಮಾಡಿದ್ದರು. ಈಗ ಈ ಆಪರೇಷನ್‌ನಿಂದ ಮಿತ್ರಪಕ್ಷಗಳು ಆತಂಕಕ್ಕೊಳಗಾಗಿವೆ.
–ಎಂ.ಎನ್.ಗುರುಮೂರ್ತಿ












































