ಅಯೋಧ್ಯೆ: ರಾಮಮಂದಿರದ ದೇಣಿಗೆ ಹಣದ ದುರುಪಯೋಗದ ಆರೋಪದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್, ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (SIT) ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಯಾರೇ ತಪ್ಪಿತಸ್ಥರಾಗಿದ್ದರೂ ಅವರನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.ಅಯೋಧ್ಯೆಯ ರುದೌಲಿ ತಹಸಿಲ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಅವ್ಯವಾಹರಕ್ಕೆ ಸಂಬಂಧಿಸಿದ ದಾಖಲೆ ಅಥವಾ ಸಾಕ್ಷಿಗಳಿದ್ದಲ್ಲಿ ತನಿಖಾ ತಂಡಕ್ಕೆ ಹಸ್ತಾಂತರಿಸುವಂತೆ ಆಗ್ರಹಿಸಿದರು. 15 ದಿನಗಳಲ್ಲಿ ಸತ್ಯ ಹೊರಬರಲಿದೆ. 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ. ಅಯೋಧ್ಯೆಯ ಹೆಸರಿಗೆ ಕಳಂಕ ತರುವ ಪ್ರಯತ್ನಗಳನ್ನು ಮಾಡಬಾರದು ಎಂದು ಹೇಳಿದರು.
ಅಯೋಧ್ಯೆ ಘಟನೆಯ ಬಗ್ಗೆ ಪತ್ರಿಕೆಗಳ ವರದಿ ಬಳಿಕ ತನಿಖೆಗೆ ಎಸ್‌ಐಟಿಯನ್ನು ರಚಿಸಲಾಗಿದೆ. ತನಿಖೆಯಲ್ಲಿ ಸತ್ಯ ಹೊರಬರಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಎಸ್‌ಐಟಿ ವರದಿ ಬರುವವರೆಗೆ ರಾಮ ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಬಾರದು. ಯಾರ ಬಳಿಯಾದರೂ ದಾಖಲೆಗಳಿದ್ದರೆ ಅದನ್ನು ಎಸ್‌ಐಟಿಗೆ ಸಲ್ಲಿಸಿ ಎಂದು ಹೇಳಿದರು.ದೇಣಿಗೆ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಬಗ್ಗೆ ತನಿಖೆ ನಡೆಸಲು ದೇವಸ್ಥಾನದ ಟ್ರಸ್ಟ್ ಮನವಿ ಮಾಡಿದ ನಂತರ ಉತ್ತರ ಪ್ರದೇಶ ಸರಕಾರ SITಯನ್ನು ರಚಿಸಿತ್ತು.











































