ಬೆಂಗಳೂರು-ತುಮಕೂರು ನಡುವೆ ಚತುಷ್ಪಥ ರೈಲು ಮಾರ್ಗ: 5 ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭ ಎಂದ ಕೇಂದ್ರ ಸಚಿವ ಸೋಮಣ್ಣ

Picture of Savistara

Savistara

Bureau Report

ಬೆಂಗಳೂರು ಮತ್ತು ತುಮಕೂರು ನಡುವೆ ದಿನನಿತ್ಯ ರೈಲಿನಲ್ಲಿ ಸಂಚರಿಸುವ ಸಾವಿರಾರು ಪ್ರಯಾಣಿಕರ ಬಹುದಿನಗಳ ಕನಸು ನನಸಾಗುವ ಕಾಲ ಹತ್ತಿರ ಬಂದಿದೆ.ಉಭಯ ನಗರಗಳ ನಡುವಿನ ಪ್ರಯಾಣವನ್ನು ಅತ್ಯಂತ ವೇಗ ಮತ್ತು ಸುಲಭಗೊಳಿಸಲು ಶೀಘ್ರದಲ್ಲೇ ಚತುಷ್ಪಥ (ನಾಲ್ಕು ಪಥದ ರೈಲು ಮಾರ್ಗ ಕಾಮಗಾರಿ ಆರಂಭವಾಗಲಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಸದ್ಯದ ಹಳಿಗಳ ಕೊರತೆಗೆ ಮುಕ್ತಿ

ಪ್ರಸ್ತುತ ಬೆಂಗಳೂರು ಮತ್ತು ತುಮಕೂರು ನಡುವೆ ಕೇವಲ ಎರಡು ಪಥಗಳ ರೈಲ್ವೆ ಹಳಿ ಇರುವುದರಿಂದ ರೈಲುಗಳ ಸಂಚಾರದಲ್ಲಿ ನಿರಂತರ ವಿಳಂಬವಾಗುತ್ತಿದೆ. ಕ್ರಾಸ್ಸಿಂಗ್ ಹಾಗೂ ಸಿಗ್ನಲ್‌ಗಳಿಗಾಗಿ ರೈಲುಗಳು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಇದನ್ನು ಮನಗಂಡು, ಈ ಮಾರ್ಗವನ್ನು ನಾಲ್ಕು ಪಥಗಳ ರೈಲು ಮಾರ್ಗವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಡಿಪಿಆರ್‌ಗೆ ತಾಂತ್ರಿಕ ಸಮಿತಿ ಒಪ್ಪಿಗೆ: ಅಂತಿಮ ಹಂತದಲ್ಲಿ ಪ್ರಕ್ರಿಯೆ

ಈ ಉದ್ದೇಶಿತ ಬೃಹತ್ ಯೋಜನೆಗಾಗಿ ಈಗಾಗಲೇ ವಿಸ್ತ್ರತ ಯೋಜನಾ ವರದಿಯನ್ನು (DPR) ಸಿದ್ಧಪಡಿಸಿ ಸಲ್ಲಿಸಲಾಗಿದೆ. ರೈಲ್ವೆ ಇಲಾಖೆಯ ಅತ್ಯುನ್ನತ ತಾಂತ್ರಿಕ ಸಮಿತಿಯು ಈ ವರದಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಈಗಾಗಲೇ ತನ್ನ ಅನುಮೋದನೆಯನ್ನು ನೀಡಿದೆ. ಸದ್ಯ ಈ ಪ್ರಕ್ರಿಯೆಯು ರೈಲ್ವೆ ಮಂಡಳಿಯ ಅಂತಿಮ ಒಪ್ಪಿಗೆಯ ಹಂತದಲ್ಲಿದ್ದು ಬೋರ್ಡ್ ಮುದ್ರೆ ಬೀಳುತ್ತಿದ್ದಂತೆ ಯೋಜನೆ ಅಧಿಕೃತವಾಗಿ ಕಾರ್ಯರೂಪಕ್ಕೆ ಬರಲಿದೆ.

6,000 ಕೋಟಿ ರೂ. ವೆಚ್ಚ ಶೀಘ್ರದಲ್ಲೇ ಭೂಸ್ವಾಧೀನ ಪ್ರಕ್ರಿಯೆ

ಈ ಬೃಹತ್ ಮೂಲಸೌಕರ್ಯ ಕಾಮಗಾರಿಯನ್ನು ಅಂದಾಜು 6,000 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಯೋಜನೆಗೆ ಅಗತ್ಯವಿರುವ ಹೆಚ್ಚುವರಿ ಭೂಮಿಯನ್ನು ಗುರುತಿಸುವ ಕಾರ್ಯ ಈಗಾಗಲೇ ಭರದಿಂದ ಸಾಗುತ್ತಿದೆ. ಮುಂದಿನ ಐದಾರು ತಿಂಗಳುಗಳ ಅವಧಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯು ಸಹ ಅಧಿಕೃತವಾಗಿ ಆರಂಭವಾಗಲಿದೆ ಎಂದು ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.

ಅರ್ಧಕ್ಕರ್ಧ ಕಡಿಮೆ ಆಗಲಿದೆ ಪ್ರಯಾಣದ ಸಮಯ!

ಈ ನಾಲ್ಕು ಪಥಗಳ ಮಾರ್ಗ ಪೂರ್ಣಗೊಂಡರೆ ಎಕ್ಸ್‌ಪ್ರೆಸ್, ಸೂಪರ್‌ಫಾಸ್ಟ್ ಹಾಗೂ ಪ್ಯಾಸೆಂಜರ್ ರೈಲುಗಳು ಯಾವುದೇ ಸಿಗ್ನಲ್ ಕಾಯುವಿಕೆಯಿಲ್ಲದೆ ಮುಕ್ತವಾಗಿ ಸಂಚರಿಸಬಹುದಾಗಿದೆ. ಇದರಿಂದಾಗಿ ಬೆಂಗಳೂರು-ತುಮಕೂರು ನಡುವಿನ ಪ್ರಯಾಣದ ಸಮಯ ಅರ್ಧಕ್ಕರ್ಧ ಕಡಿಮೆ ಆಗಲಿದ್ದು, ಉದ್ಯೋಗಿಗಳು, ವಿದ್ಯಾರ್ಥಿಗಳು ಮತ್ತು ದೈನಂದಿನ ಪ್ರಯಾಣಿಕರಿಗೆ ದೊಡ್ಡ ಮಟ್ಟದ ವರದಾನವಾಗಲಿದೆ.

[t4b-ticker]
error: Content is protected !!