ಮುಕ್ಕೂರು, ಜೂ. 21: ನೇಸರ ಯುವಕ ಮಂಡಲ ಹಾಗೂ ನೇಸರ ಯುವತಿ ಮಂಡಲ ಮುಕ್ಕೂರು ಇದರ ಜಂಟಿ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ರವಿವಾರ ಮುಕ್ಕೂರು ಶಾಲಾ ವಠಾರದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಪತಂಜಲಿ ಯೋಗ ಶಿಕ್ಷಣ ಕೇಂದ್ರ ಬೆಳ್ಳಾರೆ ಇದರ ಯೋಗ ಶಿಕ್ಷಕ ಕೆ. ಗಣಪಯ್ಯ ವನಶ್ರೀ ದೀಪ ಬೆಳಗಿಸಿ ಉದ್ಘಾಟಿಸಿ ಯೋಗ ತರಬೇತಿ ನೀಡುತ್ತಾ ಮಾತನಾಡಿದ ಅವರು, ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಅದು ದೇಹ, ಮನಸ್ಸು ಹಾಗೂ ಆತ್ಮದ ಸಮತೋಲನ ಸಾಧಿಸುವ ಜೀವನ ಪದ್ಧತಿಯಾಗಿದೆ ಎಂದು ಹೇಳಿದರು.

ನಿಯಮಿತ ಯೋಗಾಭ್ಯಾಸದಿಂದ ದೈಹಿಕ ಆರೋಗ್ಯ ವೃದ್ಧಿಯಾಗುವುದರ ಜತೆಗೆ ಮಾನಸಿಕ ಒತ್ತಡ ಕಡಿಮೆಯಾಗಿ ಆತ್ಮವಿಶ್ವಾಸ ಹೆಚ್ಚುತ್ತದೆ.

ಇಂದಿನ ವೇಗದ ಜೀವನಶೈಲಿಯಲ್ಲಿ ಪ್ರತಿಯೊಬ್ಬರೂ ಯೋಗವನ್ನು ತಮ್ಮ ದಿನಚರಿಯ ಭಾಗವಾಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಕೇಂದ್ರ ಬೆಳ್ಳಾರೆ ಇದರ ಯೋಗ ಶಿಕ್ಷಕ ಕೆ.ಗಣಪಯ್ಯ, ಸದಸ್ಯರಾದ ಯಶೋಧ ಪೆರುವಾಜೆ, ದೀಕ್ಷಿತ್ ಆಚಾರ್ಯ ಯೋಗಾಸನಗಳು ಮತ್ತು ಪ್ರಾಣಾಯಾಮಗಳ ಪ್ರಾತ್ಯಕ್ಷಿಕೆ ನೀಡಿ, ಭಾಗವಹಿಸಿದವರಿಗೆ ಮಾರ್ಗದರ್ಶನ ನೀಡಿದರು.ಉದ್ಘಾಟನಾ ವೇದಿಕೆಯಲ್ಲಿ ನೇಸರ ದಶಪ್ರಣತಿ ಸಮಿತಿ-2026 ಸಂಚಾಲಕ ಕುಂಬ್ರ ದಯಾಕರ ಆಳ್ವ, ಪ್ರಗತಿಪರ ಕೃಷಿಕ ರಾಮಚಂದ್ರ ಕೋಡಿಬೈಲು ಹಾಗೂ ನಿವೃತ್ತ ಬ್ಯಾಂಕ್ ಉದ್ಯೋಗಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ನೇಸರ ಯುವಕ ಮಂಡಲದ ಅಧ್ಯಕ್ಷ ರಕ್ಷಿತ್ ಗೌಡ ಕಾನಾವು, ಪ್ರಧಾನ ಕಾರ್ಯದರ್ಶಿ ತೇಜಸ್ವಿತ್ ಅಡ್ಯತಕಂಡ ಉಪಸ್ಥಿತರಿದ್ದರು. ನೇಸರ ಯುವತಿ ಮಂಡಲ ಅಧ್ಯಕ್ಷೆ ಬೃಂದಾ ಮುಕ್ಕೂರು ನಿರೂಪಿಸಿದರು.











































