ಕೇರಳ ಕಾಂಗ್ರೆಸ್‌ನಲ್ಲಿ ತಿರುವನಂತಪುರಂ ಸಂಸದ ಶಶಿ ತರೂರ್ ಅವರ ನಿಲುವುಗಳ ಬಗ್ಗೆ ತೀವ್ರ ಅಸಮಾಧಾನ ಭುಗಿಲೆದ್ದಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸುವುದು ಮತ್ತು ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ಹೇಳಿಕೆಗಳನ್ನು ನೀಡುತ್ತಿರುವ ಕಾರಣ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚುತ್ತಿದೆ. ಈ ಕುರಿತು ಮಾತನಾಡಿರುವ ಕೇರಳ ಕಾಂಗ್ರೆಸ್ ಘಟಕದ ಹಿರಿಯ ನಾಯಕ ಕೆ. ಮುರುಳಿಧರನ್, “ಶಶಿ ತರೂರ್ ತಮಗ್ಮ ನಿಲುವು ಬದಲಾಯಿಸುವವರೆಗೆ ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸುವುದಿಲ್ಲ” ಎಂದು ಘೋಷಿಸಿದ್ದಾರೆ.
ತಿರುವನಂತಪುರಂ: ಪಕ್ಷದ ವಿರುದ್ಧ ನಿರಂತರವಾಗಿ ವಾಕ್ಸಮರದಲ್ಲಿ ನಿರತರಾಗಿರುವ ತಿರುವನಂತಪುರಂ ಸಂಸದ ಶಶಿ ತರೂರ್ ವಿರುದ್ಧ, ಕೇರಳ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ದಿನನಿತ್ಯ ಪಕ್ಷದ ಉನ್ನತ ನಾಯಕತ್ವ ಮತ್ತು ಸಿದ್ಧಾಂತವನ್ನು ಟೀಕಿಸುತ್ತಿರುವ ಶಶಿ ತರೂರ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಡ ಕೇಳಿಬಂದಿದೆ.
ಶಶಿ ತರೂರ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್, “ರಾಷ್ಟ್ರೀಯ ಭದ್ರತಾ ವಿಷಯದ ಬಗ್ಗೆ ಮತ್ತು ಪ್ರಧಾನಿ ಮೋದಿ ಹೊಗಳಿಕೆ ಕುರಿತ ತಮ್ಮ ನಿಲುವು ಬದಲಾಯಿಸುವವರೆಗೆ ರಾಜ್ಯ ರಾಜಧಾನಿಯಲ್ಲಿ ನಡೆಯುವ ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಶಶಿ ತರೂರ್ ಅವರನ್ನು ಆಹ್ವಾನಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರೂ ಆಗಿರುವ ಶಶಿ ತರೂರ್ ಅವರನ್ನು, ಇನ್ನು ಮುಂದೆ ನಮ್ಮಲ್ಲಿ ಒಬ್ಬರು ಎಂದು ಪರಿಗಣಿಸಲಾಗುವುದಿಲ್ಲ. ಕಾಂಗ್ರೆಸ್ ಸಂಸದರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕೆಂಬುದನ್ನು, ಪಕ್ಷದ ರಾಷ್ಟ್ರೀಯ ನಾಯಕತ್ವ ನಿರ್ಧರಿಸುತ್ತದೆ” ಎಂದು ಮುರಳೀಧರನ್ ಗುಡುಗಿದ್ದಾರೆ.
“ಅವರು ( ಶಶಿ ತರೂರ್) ತಮ್ಮ ನಿಲುವು ಬದಲಾಯಿಸುವವರೆಗೆ, ತಿರುವನಂತಪುರದಲ್ಲಿ ನಡೆಯುವ ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ನಾವು ಅವರನ್ನು ಆಹ್ವಾನಿಸುವುದಿಲ್ಲ. ಅವರು ನಮ್ಮೊಂದಿಗಿಲ್ಲ, ಆದ್ದರಿಂದ ಅವರು ಕಾರ್ಯಕ್ರಮವನ್ನು ಬಹಿಷ್ಕರಿಸುವ ಪ್ರಶ್ನೆಯೇ ಇಲ್ಲ” ಎಂದುಮುರಳೀಧರನ್ಆಕ್ರೋಶಭರಿತರಾಗಿ ಹೇಳಿದರು.
ಶಶಿ ತರೂರ್ ಹೇಳಿದ್ದೇನು?”ರಾಷ್ಟ್ರ ಮೊದಲು ಮತ್ತು ಪಕ್ಷಗಳು ದೇಶವನ್ನು ಉತ್ತಮಗೊಳಿಸುವ ಸಾಧನಗಳಾಗಿವೆ” ಎಂಬ ಹೇಳಿಕೆಯ ಒಂದು ದಿನ ಬಳಿಕ, ಕೇರಳ ಕಾಂಗ್ರೆಸ್ ಘಟಕವು ಶಶಿ ತರೂರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವುದು ದೇಶದ ಗಮನ ಸೆಳೆದಿದೆ.
ದೇಶ ಮತ್ತು ಗಡಿಯಲ್ಲಿ ಇತ್ತೀಚೆಗೆ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ, ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸರ್ಕಾರವನ್ನು ಬೆಂಬಲಿಸುವ ತಮ್ಮ ನಿಲುವಿನಿಂದಾಗಿ, ಬಹಳಷ್ಟು ಜನರು ತಮ್ಮನ್ನು ತೀವ್ರವಾಗಿ ಟೀಕಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದರು ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.ರಾಷ್ಟ್ರ ಮೊದಲು ಸಿದ್ಧಾಂತ ಎಲ್ಲಾ ರಾಜಕೀಯ ಪಕ್ಷಗಳ ಆದ್ಯತೆಯಾಬೇಕು ಎಂದಿದ್ದ ಶಶಿ ತರೂರ್, ರಾಷ್ಟ್ರೀಯ ಹಿತಾಸಕ್ತಿ ವಿಚಾರವಾಗಿ ಎಲ್ಲಾ ರಾಜಕೀಯ ಪಕ್ಷಗಳು ಒಂದೇ ಧ್ವನಿಯಲ್ಲಿ ಮಾತನಾಡಬೇಕು ಎಂದು ಆಗ್ರಹಿಸಿದ್ದರು. ಅಲ್ಲದೇ ರಾಷ್ಟ್ರಕ್ಕೆ ನಿಷ್ಠೆ ತಾವು ನಂಬಿದ ಸಿದ್ಧಾಂತವಾಗಿದೆ ಎಂದು ಮಾರ್ಮಿಕವಾಗಿ ಹೇಳಿದ್ದರು.
“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮತ್ತು ಸ್ಪರ್ಧೆ ಸಹಜ. ಆದರೆ ರಾಷ್ಟ್ರದ ಪ್ರಶ್ನೆ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ಒಂದೇ ಶ್ವನಿಯಲ್ಲಿ ಮಾತನಾಡಬೇಕು ಎಂಬುದು ನಾನು ನಂಬಿರು ಸಿದ್ಧಾಂತ. ಪಹಲ್ಗಾಮ್ ಭಯೋತ್ಪಾದಕ ದಾಳಿ ಅಂತದ್ದೊಂದು ಸಂದರ್ಭವನ್ನು ಸೃಷ್ಟಿಸಿದ್ದರಿಂದಲೇ, ನಾನು ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪರಮಾತನಾಡುತ್ತಿದ್ದೇನೆ. ನಾನು ಅಸಲಿಗೆ ಭಾರತದ ಧ್ವನಿಯಾಗಿ ಮಾತನಾಡಿದ್ದೇನೆ” ಎಂದು ಶಶಿ ತರೂರ್ ಸ್ಪಷ್ಟಪಡಿಸಿದ್ದಾರೆ.
“ನಿಮ್ಮ ಮೊದಲ ನಿಷ್ಠೆ ಯಾವುದು? ನನ್ನ ಅಭಿಪ್ರಾಯದಲ್ಲಿ, ರಾಷ್ಟ್ರವು ನಮ್ಮ ಮೊದಲ ಆದ್ಯತೆಯಾಗಬೇಕು. ರಾಜಕೀಯ ಪಕ್ಷಗಳು ರಾಷ್ಟ್ರವನ್ನು ಉತ್ತಮಗೊಳಿಸುವ ಒಂದು ಸಾಧನ. ಆದ್ದರಿಂದ ನನ್ನ ಅಭಿಪ್ರಾಯದಲ್ಲಿ, ನೀವು ಯಾವುದೇ ಪಕ್ಷಕ್ಕೆ ಸೇರಿದವರಾಗಿದ್ದರೂ, ಆ ಪಕ್ಷದ ಉದ್ದೇಶವು ತನ್ನದೇ ಆದ ರೀತಿಯಲ್ಲಿ ಉತ್ತಮ ಭಾರತವನ್ನು ರಚಿಸುವುದಾಗಿರಬೇಕು” ಎಂದು ಕಾಂಗ್ರೆಸ್ ನಾಯಕ ಸೂಚ್ಯವಾಗಿ ಹೇಳಿದರು.
“ಭಾರತಕ್ಕಾಗಿ ಒಂದಾಗಬೇಕು””ರಾಜಕೀಯ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಸಹಜ. ಉತ್ತಮ ಭಾರತವನ್ನು ನಿರ್ಮಿಸುವ ಅತ್ಯುತ್ತಮ ಮಾರ್ಗದ ಬಗ್ಗೆ ಭಿನ್ನಾಭಿಪ್ರಾಯ ಹೊಂದಲು ಎಲ್ಲ ಪಕ್ಷಗಳಿಗೂ ಹಕ್ಕಿದೆ. ಕೆಲವರಿಗೆ ಬಂಡವಾಳಶಾಹಿ ಪದ್ದತಿ ಇಷ್ಟವಾದರೆ ಮತ್ತೆ ಕೆಲವರಿಗೆ ಸಮಾಜವಾದಿ ಮಾರ್ಗ ಇಷ್ಟವಾಗುತ್ತದೆ. ಆದರೆ ದೇಶದ ವಿಚಾರ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳೂ ಒಂದೇ ಧ್ವನಿಯಲ್ಲಿ ಮಾತನಾಡಬೇಕು. ಅಂತಿಮವಾಗಿ ನಾವು ಜನರ ಯೋಗಕ್ಷೇಮವನ್ನು ಪೋಷಿಸುವ ಭಾರತಕ್ಕೆ ಬದ್ಧರಾಗಿರಬೇಕು ಇದೇ ನನ್ನ ಬದ್ಧತೆ” ಎಂದು ಶಶಿ ತರೂರ್ ನುಡಿದರು.
“ನಮ್ಮ ಸಂಸತ್ತಿನಲ್ಲಿ ಇಂದು 46 ರಾಜಕೀಯ ಪಕ್ಷಗಳಿವೆ. ಅವರೆಲ್ಲರೂ ಒಂದೇ ಧ್ವನಿಯಲ್ಲಿ ಮಾತನಾಡಲು ಸಾಧ್ಯವಾಗುವಂತಹ ಒಂದಾದರೂ ಸಮಸ್ಯೆ ಎದುರಾಗಲೇಬೇಕು. ಪಹಲ್ಗಾಮ್ ದಾಳಿ ಅಂತದ್ದೊಂದು ಸಂದರ್ಭ ಎಂದು ನನಗೆ ಅನಿಸಿದ್ದರಿಂದಲೇ ನಾನು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಪರವಾಗಿ ಮಾತನಾಡಿದ್ದೇನೆ. ನನ್ನ ಎಲ್ಲಾ ಹೇಳಿಕೆಗಳಿಗೆ ನಾನೂ ಈಗಲೂ ಮತ್ತು ಮುಂದೆಯೂ ಬದ್ಧನಾಗಿರುತ್ತೇನೆ ಎಂದು ತಿರುವನಂತರಪುರಂ ಸಂಸದರು ಘೋಷಿಸಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಭಾರತದ ಪ್ರತಿದಾಳಿ ಹಾಗೂ “ಆಪರೇಷನ್ ಸಿಂಧೂರ” ಸೇನಾ ಕಾರ್ಯಾಚಣೆ ನಂತರ, ನವದೆಹಲಿಯ ನಿಲುವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಶಶಿ ತರೂರ್ ಪ್ರತಿನಿಧಿಸುತ್ತಿದ್ದಾರೆ. ಅವರ ತೀಕ್ಷ್ಣವಾದ ಹೇಳಿಕೆಗಳು ಅವರ ವಿಮರ್ಶಕರಿಗೂ ಇಷ್ಟವಾಗುವಂತೆ ಮಾಡಿವೆ. ಭಾರತದ ಸರ್ವಪಕ್ಷ ನಿಯೋಗದಲ್ಲಿ ಶಶಿ ತರೂರ್ ಪಾತ್ರವನ್ನು ಪ್ರಧಾನಿ ಮೋದಿ ಕೂಡ ಹೊಗಳಿರುವುದನ್ನು ಇಲ್ಲಿ ಸ್ಮರಿಸಬಹುದು.
ಆದರೆ ಶಶಿ ತರೂರ್ ಮಾತೃ ಪಕ್ಷವಾದ ಕಾಂಗ್ರೆಸ್ ಅವರ ಹೇಳಿಕೆಗಳಿಂದ ಕೆಂಡಾಮಂಡಲವಾಗಿದೆ. ಶಶಿ ತರೂರ್ ಕೇಂದ್ರ ಸರ್ಕಾರವನ್ನೂ ಮತ್ತು ಪ್ರಧಾನಿ ಮೋದಿ ಅವರನ್ನೂ ಹೊಗಳುತ್ತಿರುವುದು ಕಾಂಗ್ರೆಸ್‌ಗೆ ಪಥ್ಯವಾಗುತ್ತಿಲ್ಲ. ಇತ್ತೀಚಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಅವರು ಶಶಿ ತರೂರ್ ಅವರ ಹೇಳಿಕೆಗಳನ್ನು ಟೀಕಿಸುತ್ತಾ, “ಕಾಂಗ್ರೆಸ್‌ಗೆ ದೇಶ ಮೊದಲಾದರೆ ಕೆಲವರಿಗೆ ಪ್ರಧಾನಿ ಮೊದಲು” ಎಂದು ಗುಡುಗಿದ್ದರು.













































