ರೈತನ ಆತ್ಮಹತ್ಯೆ ಬಗ್ಗೆ ಸುಳ್ಳು ಸುದ್ದಿ ಹಬ್ಬಿದ ಪ್ರಕರಣ, ಸುಪ್ರೀಂನಿಂದ ರಾಜ್ಯ ಸರಕಾರದ ಮೇಲ್ಮನವಿ ವಜಾ
ಹೊಸದಿಲ್ಲಿ: ರೈತನ ಆತ್ಮಹತ್ಯೆಗೆ ಸಂಬಂಧಿಸಿ ಸುಳ್ಳು ಸುದ್ದಿಹರಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದು ಮಾಡಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದ್ದು, ರಾಜ್ಯ ಸರಕಾರಕ್ಕೆ ದಂಡವನ್ನೂ ವಿಧಿಸಿದೆ. ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ| ಬಿ.ಆರ್. ಗವಾಯಿ ಮತ್ತು ನ್ಯಾ| ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ, ನಿಮ್ಮ ರಾಜಕೀಯ ಹೋರಾಟವನ್ನು ಚುನಾವಣೆಯಲ್ಲಿ ನಡೆಸಿ ಎಂದು ತಪರಾಕಿ ನೀಡಿದ್ದು, ಕೋರ್ಟ್‌ನಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿ ಕರ್ನಾಟಕ ಸರಕಾರಕ್ಕೆ ದಂಡ ವಿಧಿಸುವ ಮೂಲಕ ಅರ್ಜಿಯನ್ನು ವಜಾಗೊಳಿಸಿತು.
ಈ ಪ್ರಕರಣಕ್ಕೆ ಸಂಬಂಧಿಸಿ ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ಈ ಹಿಂದೆ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಕರ್ನಾಟಕ ಹೈಕೋರ್ಟ್‌ನ ನ್ಯಾಯಪೀಠ ವಜಾಗೊಳಿಸಿತ್ತು. ಅಲ್ಲದೆ ಈ ಪ್ರಕರಣದಲ್ಲಿ ತನಿಖೆ ಮಾಡಲು ಏನೂ ಇಲ್ಲ. ಇಂತಹ ಸಮಯದಲ್ಲಿ ಕ್ರಿಮಿನಲ್ ವಿಚಾರಣೆಗೆ ಅವಕಾಶ ನೀಡುವುದು ಕಾನೂನಿನ ದುರುಪಯೋಗವಾಗುತ್ತದೆ ಎಂದು ಹೈಕೋರ್ಟ್ ಹೇಳಿತ್ತು.
ಏನಿದು ಪ್ರಕರಣ?
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ ಅವರು, 2024ರ ನ. 7ರಂದು ರೈತನ ಆತ್ಮಹತ್ಯೆಗೆ ಸಂಬಂಧಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ತಮ್ಮ ಜಮೀನಿನ ಪಹಣಿಯಲ್ಲಿ ವಕ್ಸ್ ಆಸ್ತಿ ಎಂದು ನಮೂದಾಗಿದ್ದರಿಂದ ಮನನೊಂದು ಹಾವೇರಿಯ ಹರನಗಿ ಗ್ರಾಮದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದರು. ಇಂತಹ ಯಾವುದೇ ಪ್ರಕರಣ ನಡೆದಿಲ್ಲ ಎಂದು ಎಸ್‌ಪಿ ಅವರು ಸ್ಪಷ್ಟನೆ ನೀಡಿದ ಬಳಿಕ ಪೋಸ್ಟ್ ಅನ್ನು ಅಳಿಸಿ ಹಾಕಿದ್ದರು.
ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ತೇಜಸ್ವಿ ಸೂರ್ಯ ಅವರ ವಿರುದ್ಧ ಹಾವೇರಿಯ ಸೆನ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ- 2023ರ (ಬಿಎನ್‌ಎಸ್) ಕಲಂ 353ರ (2) (ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುವ ಸುಳ್ಳು ಸುದ್ದಿ ಹರಡಿದ ಆರೋಪ) ಅಡಿ ಎಫ್‌ಐಆರ್ ದಾಖಲಾಗಿತ್ತು.ನನ್ನ ವಿರುದ್ಧದ ದ್ವೇಷ ರಾಜಕಾರಣ ಮುಂದುವರಿಸಿದ ಕರ್ನಾಟಕ ಸರಕಾರಕ್ಕೆ ಹಿನ್ನಡೆಯಾಗಿದೆ. ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ್ದರೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿತ್ತು. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ್ದಷ್ಟೇ ಅಲ್ಲದೆ ರಾಜ್ಯ ಸರಕಾರಕ್ಕೆ ದಂಡ ವಿಧಿಸಿದೆ. ಬಹಳ ಹಿಂದಿನಿಂದಲೂ ನನ್ನ ವಿರುದ್ಧ ಕಾಂಗ್ರೆಸ್ ಸುಳ್ಳು ಹರಡುತ್ತಲೇ ಇದೆ. – ತೇಜಸ್ವಿ ಸೂರ್ಯ, ಸಂಸದ













































