ಆರೋಗ್ಯ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಧಾರವಾಡ: ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಕಡ್ಡಾಯ ವೈದ್ಯರನ್ನು ಆದಷ್ಟು ಬೇಗ ತುಂಬಿಕೊಳ್ಳಲು ನಾಳೆ ಅಥವಾ ನಾಡಿದ್ದು ನೋಟಿಫಿಕೇಶನ್ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.ಇಂದು ಬೆಳಗಾವಿ ಮಟ್ಟದ ಆರೋಗ್ಯ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಅಷ್ಟೇ ಅಲ್ಲ, ನಗರದ ಹುದ್ದೆಗಳನ್ನೂ ಕೂಡ ಭರ್ತಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ಎಲ್ಲಿಲ್ಲಿ ಖಾಲಿ ಹುದ್ದೆಗಳಿವೆಯೇ ಅಲ್ಲೆಲ್ಲ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.ಸದ್ಯ ಎರಡು ಸಾವಿರ ವೈದ್ಯರು ಇರಬಹುದು. ಅದರಲ್ಲಿ ಸ್ಪೆಷಲಿಸ್ಟ್ ಗಳು 1700 ಇರಬಹುದು. ಸದ್ಯಕ್ಕೆ ನೀಟ್ ಪರೀಕ್ಷೆ ಇರುವ ಕಾರಣ ಆಗಸ್ಟ್ ಮೂರರವರೆಗೆ ವೈದ್ಯರು ಬರಬಹುದು. ಎಂಎಚ್‌ಎಂ ಅಡಿಯಲ್ಲಿ ನಾವು ವೇತನ ಕೂಡ ಹೆಚ್ಚಿಸಿದ್ದೇವೆ. ಸದ್ಯ ಸ್ಪೆಷಲಿಸ್ಟ್ ವೈದ್ಯರಿಗೆ 1.40 ಲಕ್ಷ ರೂ ವೇತನ ಹೆಚ್ಚಿಸಿದ್ದೇವೆ. ಎರಡು ಲಕ್ಷದವರೆಗೂ ವೇತನ ಕೊಡುತ್ತಿದ್ದೇವೆ. ಮುಂದಿನ ತಿಂಗಳಲ್ಲಿ ಎಲ್ಲ ವೈದ್ಯರ ಭರ್ತಿ ಆಗಲಿದೆ. ಸಿಬ್ಬಂದಿ ಭರ್ತಿಗೂ ಕೂಡ ಅನುಮತಿ ಕೊಡ್ತೇವೆ ಎಂದರು.
ನ್ಯಾಷನಲ್ ಹೆಲ್ತ್ ಮಿಷನ್ ಅಡಿಯಲ್ಲಿ ಯಾರನ್ನೂ ತೆಗೆಯುತ್ತಿಲ್ಲ. ಮೌಲ್ಯಮಾಪನ ಮಾಡುತ್ತಿದ್ದೇವೆ. ಯಾರು ಕೆಲಸ ಮಾಡ್ತಾರೋ ಅವರನ್ನು ನೋಡಿಕೊಂಡು ಕೆಲಸ ತಗೋತೇವೆ. ಯಾರು ಕೆಲಸ ಮಾಡುತ್ತಿಲ್ಲವೋ ಅವರಿಗೆ ಮೂರು ತಿಂಗಳ ಸಮಯ ಕೊಡ್ತೇವೆ. ಅವರು ಸರಿ ಕೆಲಸ ಮಾಡಿದರೆ ಸಾಕು ಎಂದು ತಿಳಿಸಿದರು.
ರಾಜ್ಯದಲ್ಲೆಡೆ ಆರೋಗ್ಯ ಇಲಾಖೆ ಸಿಬ್ಬಂದಿಯ ವರ್ಗಾವಣೆ ವಿಚಾರವಾಗಿ ಮಾತನಾಡಿದ ಸಚಿವರು, ಕೆಲವರಿಗೆ ಇದ್ದಲ್ಲಿ ಇದ್ದು ಅಭ್ಯಾಸ ಆದೆ. ವರ್ಗಾವಣೆಗೆ ಹೆಚ್ಚು ಅಸಮಾಧಾನ ಆಗಿರುವುದು ಬೆಂಗಳೂರಿನಲ್ಲಿ. 15ರಿಂದ 20 ವರ್ಷ ಅಲ್ಲೇ ಇದ್ದವರಿಗೆ ನಾವು ಈಗ ಹೊರಗೆ ಹಾಕಿದ್ದೇವೆ. ಸದ್ಯ ಯಾರ ಶಿಫಾರಸು ಇಲ್ಲದೇ ಕೆಲವರಿಗೆ ಬೆಂಗಳೂರಿಗೆ ಬರುವ ಅವಕಾಶ ಸಿಕ್ಕಿದೆ. ಪಾರದರ್ಶಕತೆ ಇರಬೇಕು, ಪ್ರಥಮ ಬಾರಿಗೆ ಕೌನ್ಸೆಲಿಂಗ್ ಥ್ರೂ ಮಾಡಿದ್ದಕ್ಕೆ ಸ್ವಲ್ಪ ಅಡೆತಡೆ ಆಗಿದೆ. ಮುಂದಿನ ವರ್ಷ ಸರಿಯಾಗಲಿದೆ. ಕೆಲವರು ಮುಂದಿನ ವರ್ಷ ವರ್ಗಾವಣೆ ಆಗೇ ಆಗಲಿದೆ ಎಂದು ಮಾನಸಿಕವಾಗಿ ತಯಾರಿ ಆಗ್ತಾರೆ. ಕೆಲವರು ಸುಪ್ರೀಂ ಕೋರ್ಟ್ ವರೆಗೂ ಕೂಡ ಹೋದ್ರು. ಆದರೆ ಅವರಿಗೆ ಅಲ್ಲಿ ಜಯ ಸಿಕ್ಕಿಲ್ಲ ಎಂದು ಅನಿವಾರ್ಯವಾಗಿ ಹೋದರು ಎಂದು ಹೇಳಿದರು.ಇನ್ನು, ಹೃದಯಾಘಾತ ಮೊದಲಿನಷ್ಟೇ ಇವೆ, ಏನೂ ವ್ಯತ್ಯಾಸ ಆಗಿಲ್ಲ. ಅದಕ್ಕೆ ಹಲವು ಕಾರಣಗಳಿವೆ. ಹಾಸನದಲ್ಲಿ ಹೆಚ್ಚು ಹೃದಯಾಘಾತ ಆಗುತ್ತಿದೆ ಎಂದು ತಪ್ಪು ಮಾಹಿತಿ ಇತ್ತು. ಅದಕ್ಕೆ ನಾವು ಸ್ಪಷ್ಟನೆ ಕೊಟ್ಟಿದ್ದೇವೆ. ಕೆಲಸದ ಒತ್ತಡ, ಜೀವನ ಶೈಲಿ, ಅಭ್ಯಾಸಗಳು ಇದಕ್ಕೆ ಕಾರಣವಾಗಿರಬಹುದು. ಅದಕ್ಕಾಗಿ ಆರೋಗ್ಯ ಪರೀಕ್ಷೆ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.












































