ವೆನ್ಲಾಕ್ ಕ್ಯಾಥ್‌ಲ್ಯಾಬ್ ಸಿದ್ದಹೃದ್ರೋಗ ಚಿಕಿತ್ಸೆ ಬಡವರಿಗೆ ಉಚಿತ, ಎಪಿಎಲ್‌ಗೆ ವಿಶೇಷ ರಿಯಾಯಿತಿ

Picture of Savistara

Savistara

Bureau Report

ಮಂಗಳೂರು: ದ.ಕ. ಜಿಲ್ಲಾಸ್ಪತ್ರೆ ವೆನ್ಲಾಕ್ನಲ್ಲಿ ಹೃದಯ ಸಂಬಂಧಿ ತುರ್ತು ಚಿಕಿತ್ಸೆಗೆ ಪೂರಕ ಕ್ಯಾಥ್‌ಲ್ಯಾಬ್ ಸಿದ್ಧಗೊಂಡಿದೆ.ಕೆಎಂಸಿ ಆಸ್ಪತ್ರೆ ಸಹಯೋಗದಲ್ಲಿ ಕಾರ್ಯಾಚರಿಸುತ್ತಿರುವ ವೆನ್ಹಾಕ್ ಹೊಸ ತುರ್ತು ಚಿಕಿತ್ಸಾ ವಿಭಾಗದ ನೆಲಮಹಡಿಯಲ್ಲಿ ಸುಮಾರು 5 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಈ ಕ್ಯಾಥ್‌ಲಾಬ್ ಸಿದ್ಧಗೊಂಡಿದೆ. ಕೆಎಂಸಿ ಆಸ್ಪತ್ರೆಯಿಂದ ತಜ್ಞ ವೈದ್ಯರು ಸಹಿತ ವೈದ್ಯಕೀಯ ಸಿಬ್ಬಂದಿ ನೇಮಕ ಈಗಾಗಲೇ ಪೂರ್ಣಗೊಂಡಿದೆ.ಅಂಜಿಯೋಪ್ಲಾಸ್ಟಿ ಹಾಗೂ ಆ್ಯಂಜಿಯೋಗ್ರಾಂ ಮೊದಲಾದ ಹೃದಯ ಸಂಬಂಧಿ ಚಿಕಿತ್ಸೆಯಲ್ಲಿ ಬಳಕೆಯಾಗುವ ವೈದ್ಯಕೀಯ ಸಲಕರಣೆಗಳು, ಔಷಧ ವೆನ್ಲಾಕ್ ಆಸ್ಪತ್ರೆಯಿಂದ ಒದಗಿಸಲಾಗುತ್ತದೆ. ಬಿಪಿಎಲ್ ಪಡಿತರ ಚೀಟಿದಾರರಿಗೆ ಇಲ್ಲಿ ಉಚಿತ ಚಿಕಿತ್ಸೆ ಲಭ್ಯವಾಗಲಿದ್ದು, ಎಪಿಎಲ್ ಕಾರ್ಡುದಾರರಿಗೂ ಆಯುಷ್ಮಾನ್‌ ನಡಿ ಚಿಕಿತ್ಸೆ ದರ ನಿಗದಿಪಡಿಸಲಾಗಿದೆ.1848ರಿಂದ ಅಸ್ತಿತ್ವದಲ್ಲಿರುವ ವೆಸ್ಲಾಕ್ ಆಸ್ಪತ್ರೆಯಲ್ಲಿ ಬಹುತೇಕ ಎಲ್ಲ ಚಿಕಿತ್ಸೆಗಳು ಬಡ ರೋಗಿಗಳಿಗೆ ಉಚಿತವಾಗಿ ನೀಡಲಾಗುತ್ತಿದೆ. ರಾಜ್ಯ ಸುಮಾರು 9 ಹಾಗೂ ನೆರೆಯ ಉತ್ತರ ಕೇರಳದ ಸುಮಾರು 3 ಜಿಲ್ಲೆಗಳ ಬಡ ರೋಗಿಗಳು ಗರಿಷ್ಠ ಸಂಖ್ಯೆಯಲ್ಲಿ ಈ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.ಹೃದ್ರೋಗಕ್ಕೆ ಸಂಬಂಧಿಸಿದ ಚಿಕಿತ್ಸೆಗಳು ಇಲ್ಲಿ ದೊರೆಯುತ್ತವೆಯಾದರೂ, ಹೃದಾಯಾಘಾತ ವೇಳೆ ಅಂಜಿಯೋಪ್ಲಾಸ್ಟಿ ಹಾಗೂ ಆ್ಯಂಜಿಯೋಗ್ರಾಂ ಮೊದಲಾದ ಶಸ್ತ್ರಚಿಕಿತ್ಸೆಗಾಗಿ ಇತರ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ಕೆಎಂಸಿ ಆಸ್ಪತ್ರೆ ಜತೆ ಒಡಂಬಡಿಕೆಯಡಿ ಕಾರ್ಯ ನಿರ್ವಹಿಸುತ್ತಿರುವ

ವೆನ್ಲಾಕ್ ನಲ್ಲಿ ಹೃದಯಾಘಾತಕ್ಕೆ ಸಂಬಂಧಿಸಿ ಬಡ ರೋಗಿಗಳನ್ನು ಆಯುಷ್ಮಾನ್ ಯೋಜನೆಯಡಿ ಕೆಎಂಸಿಗೆ ಕಳುಹಿಸಲಾಗುತ್ತಿತ್ತು. ಇದೀಗ ಖಾಸಗಿ ಆಸ್ಪತ್ರೆಗಳಲ್ಲಿ ಹೃದ್ರೋಗಕ್ಕೆ ಸಂಬಂಧಿಸಿ ಆಯುಷ್ಮಾನ್ ಸೌಲಭ್ಯ ದೊರೆಯುತ್ತಿಲ್ಲ.ಪೂರಕ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ಇಲಾಖೆ ಹಂತದಲ್ಲಿ ಫೈಲ್ ಇತ್ಯರ್ಥಕ್ಕೆ ಬಾಕಿ ಇದೆ. ತಿಂಗಳೊಳಗೆ ಹೊಸ ವ್ಯವಸ್ಥೆ ಕಾರ್ಯಾರಂಭನಿರೀಕ್ಷಿಸಬಹುದು. ಆ.1ರಂದು ಆರೋಗ್ಯ ಸಚಿವರ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಕ್ಯಾಥ್‌ಲ್ಯಾಬ್ ಕಾರ್ಯಾರಂಭ ಹಾಗೂ ಇತರ ವಿಷಯಗಳ ಬಗ್ಗೆ ಅಂತಿಮ ತೀರ್ಮಾನವಾಗಲಿದೆ ಎಂದು ವೆನ್ಲಾಕ್ ಆಸ್ಪತ್ರೆ ಅಧೀಕ್ಷಕ ಡಾ.ಶಿವಪ್ರಕಾಶ್ ತಿಳಿಸಿದ್ದಾರೆ.

ಕೆಎಂಸಿಯಿಂದ ಕ್ಯಾಥ್‌ಲ್ಯಾಬ್‌ಗೆ 7 ಮಂದಿ ಹೃದಯ ರೋಗ ತಜ್ಞರು, ನಾಲ್ವರು ಟೆಕ್ನಿಶೀಯನ್‌ಗಳು, 12 ಮಂದಿ ಸ್ಟಾಫ್ ನರ್ಸ್‌ಗಳನ್ನು ಒದಗಿಸಲಾಗಿದೆ. ಉಳಿದಂತೆ ಔಷಧ ಹಾಗೂ ಶಸ್ತ್ರಚಿಕಿತ್ಸೆ ಸಂಬಂಧ ರೋಗಿಗೆ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಆಸ್ಪತ್ರೆಯಿಂದ ಒದಗಿಸಲಾಗುತ್ತದೆ. ಬಿಪಿಎಲ್ ಕಾರ್ಡ್‌ನವರಿಗೆ ಉಚಿತ ಚಿಕಿತ್ಸೆ ಲಭ್ಯವಾಗಲಿದ್ದು, ಎಪಿಎಲ್‌ನವರಿಗೆ ಇತರ ಕಡೆಗಳಲ್ಲಿ ಇರುವ ದರಕ್ಕಿಂತ ಮೂರನೇ ಒಂದು ಭಾಗದಷ್ಟು ಖರ್ಚು ಬೀಳಬಹುದು.

| ಡಾ. ಶಿವಪ್ರಕಾಶ್ ಅಧೀಕ್ಷಕರು, ವೆನ್ಲಾಕ್ ಆಸ್ಪತ್ರೆ

24 ತಾಸು ಸೇವೆ ಲಭ್ಯ

ಹೃದಯಾಘಾತಕ್ಕೆ ಸಂಬಂಧಿಸಿ ತುರ್ತು ಚಿಕಿತ್ಸೆ ಒದಗಿಸುವ ಪ್ರಯೋಗಾಲಯ ಇದಾಗಿದ್ದು ದಿನದ 24 ಗಂಟೆಯೂ ಐಸಿಯು ಮಾದರಿಯಲ್ಲಿ ಕಾರ್ಯ ನಿರ್ವಹಿಸಲಿದೆ. ಇಲ್ಲಿ ಹೃದ್ರೋಗ ತಜ್ಞರ ತಂಡ, ರೇಡಿಯಾಲಜಿ ತಂತ್ರಜ್ಞರು ಹಾಗೂ ದಾದಿಯರು ಸದಾ ಸೇವೆಯಲ್ಲಿರುತ್ತಾರೆ. ಹೃದಯದ ರಕ್ತನಾಳಗಳಲ್ಲಿ ಕಂಡುಬರುವ ಅಡಚಣೆ ಪತ್ತೆ ಹಚ್ಚಲು ಕರೋನರಿ ಅಂಜಿಯೋಗ್ರಾಂ ಮತ್ತು ಅಡಚಣೆ ನಿವಾರಣೆಗೆ ಸ್ಟಂಟ್ ಅಳವಡಿಸಲು ಅಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗಳನ್ನು ಈ ಕ್ಯಾಥ್‌ಲ್ಯಾಬ್‌ನಲ್ಲಿ ನಿವರ್ಹಿಸಲಾಗುತ್ತದೆ

[t4b-ticker]
error: Content is protected !!