RSS ವಿಜಯದಶಮಿ ಪಥಸಂಚಲನ ನಿಷೇಧಿಸಲು ಹೋಗಿ ಮುಖಭಂಗ ಅನುಭವಿಸಿದ್ದ ಎಂಕೆ ಸ್ಟಾಲಿನ್

Picture of Savistara

Savistara

Bureau Report

ಬೆಂಗಳೂರು : ಕಳೆದ ವಾರ, ಕರ್ನಾಟಕದ ಹಲವು ಭಾಗಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಜಯದಶಮಿ ಪಥಸಂಚಲನದ ನಂತರ, ಆರ್‌ಎಸ್‌ಎಸ್‌ ಚಟುವಟಿಕೆಗಳನ್ನು ಸರ್ಕಾರೀ ಜಾಗದಲ್ಲಿ ನಿಷೇಧಿಸಬೇಕು ಎನ್ನುವ ಒತ್ತಾಯವನ್ನು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾಡಿದ್ದರು. ಜೊತೆಗೆ, ಸಿಎಂಗೆ ಪತ್ರವನ್ನು ಬರೆದಿದ್ದರು.ಖರ್ಗೆ ಪತ್ರಕ್ಕೆ ಕೂಡಲೇ ಸ್ಪಂದಿಸಿದ್ದ ಸಿಎಂ ಸಿದ್ದರಾಮಯ್ಯ, ತಮಿಳುನಾಡಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಿಗೆ ಯಾವ ರೀತಿ ನಿಷೇಧ ಹೇರಲಾಗಿದೆ ಎನ್ನುವುದನ್ನು ತಿಳಿದುಕೊಳ್ಳಿ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದರು. ಇಂದು (ಅ. 16) ನಡೆಯಲಿರುವ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಈ ಸಂಬಂಧ, ಚರ್ಚೆಯಾಗುವ ಸಾಧ್ಯತೆಯಿದೆ. ಇದೇ, ತಮಿಳುನಾಡು ಸರ್ಕಾರ, ಸಂಘದ ಕಾರ್ಯಕ್ರಮವನ್ನು ನಿಷೇಧಿಸಲು ಹೊರಟು, ಹಿಂದೊಮ್ಮೆ ಮುಖಭಂಗವನ್ನು ಎದುರಿಸಿತ್ತು.ಸರ್ಕಾರದ ಒಡೆತನದ ಯಾವುದೇ ಸ್ಥಳ, ಆವರಣ ಅಥವಾ ಶೈಕ್ಷಣಿಕ ಸಂಸ್ಥೆಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಚಟುವಟಿಕೆಗಳನ್ನು ತಮಿಳುನಾಡು ಸರ್ಕಾರ ನಿಷೇಧಿಸಿತ್ತು. ಆ ಮೂಲಕ, ಹೊಸ ಹೆಜ್ಜೆಯನ್ನು ಇಟ್ಟಿದ್ದ ಎಂಕೆ ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ, ಕೆಲವೊಂದು ಷರತ್ತುಗಳನ್ನು ಸಂಘಕ್ಕೆ ವಿಧಿಸಿತ್ತು.ಅದೇನಂದರೆ, ರಾಜ್ಯದ ಯಾವುದೇ ಮೂಲೆಯಲ್ಲಿರುವ ಸಾರ್ವಜನಿಕ ಸ್ಥಳಗಳು, ಸರ್ಕಾರೀ ಆಸ್ತಿಗಳಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಕಾರ್ಯಕ್ರಮವನ್ನು ಆಯೋಜಿಸುವುದಾದರೆ, ಅದಕ್ಕೆ ಪೊಲೀಸ್ ಇಲಾಖೆಯ ಅನುಮತಿ ಕಡ್ಡಾಯ ಎನ್ನುವ ಷರತ್ತನ್ನು ಸ್ಟಾಲಿನ್ ಸರ್ಕಾರ ಹಾಕಿತ್ತು. ಈ ನಿಯಮವನ್ನು ಸಿದ್ದರಾಮಯ್ಯ, ಕರ್ನಾಟಕದಲ್ಲೂ ಜಾರಿಗೆ ತರುವ ಸಾಧ್ಯತೆಯಿದೆ.ಸ್ಟಾಲಿನ್ ಸರ್ಕಾರದ ನಿಯಮದಂತೆ, ದಸರಾ ಹಬ್ಬದ ವಿಜಯದಶಮಿಯ ವೇಳೆ, ರಾಜ್ಯದ ವಿವಿದೆಡೆ ಪಥಸಂಚಲನ ನಡೆಸಲು ಅನುಮತಿಯನ್ನು ನೀಡುವಂತೆ, ರಾಷ್ಟ್ರೀಯ ಸ್ವಯಂಸೇವಕ ಸಂಘ, ತಮಿಳುನಾಡು ಪೊಲೀಸರಿಗೆ ಅರ್ಜಿಯನ್ನು ಸಲ್ಲಿಸಿತ್ತು. ಆದರೆ, ಅನುಮತಿಯನ್ನು ಕೊಡಲು ಸ್ಟಾಲಿನ್ ಸರ್ಕಾರ ಸುತರಾಂ ಒಪ್ಪಿರಲಿಲ್ಲ.ಸಂಘವು, ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ, ಕೋರ್ಟ್ ಮೆಟ್ಟಲೇರಿತ್ತು. ಅನುಮತಿಯನ್ನು ನೀಡುವಂತೆ, ಮದ್ರಾಸ್ ಹೈಕೋರ್ಟ್ ಸ್ಟಾಲಿನ್ ಸರ್ಕಾರಕ್ಕೆ ನಿರ್ದೇಶನವನ್ನು ನೀಡಿತ್ತು. ಜಿ.ಜಯಚಂದ್ರನ್ ಅವರಿದ್ದ ಪೀಠ, ಸತತವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳಿಗೆ ನೀವು ತಡೆಯೊಡ್ಡುತ್ತಿದ್ದೀರಿ. ನೀವು ಕೊಡುತ್ತಿರುವ ಕಾರಣಗಳು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕಳೆದ ಬಾರಿಯೂ, ಕೋರ್ಟ್ ಆದೇಶಕ್ಕೆ ವಿರುದ್ದವಾಗಿ ನಡೆದಿದ್ದೀರಿ. ನ್ಯಾಯಾಂಗ ನಿಂದನೆ ಎದುರಿಸಬೇಕಾದೀತು ಎಂದು ಮದ್ರಾಸ್ ಹೈಕೋರ್ಟ್, ತಮಿಳುನಾಡು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿತ್ತು.ಆದಾಗ್ಯೂ, ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ದ ಮೇಲ್ಮನವಿಯನ್ನು ಸ್ಟಾಲಿನ್ ಸರ್ಕಾರ, ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿತ್ತು. ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆಯಾಗುತ್ತದೆ ಎನ್ನುವ ಕಾರಣವನ್ನು, ತಮಿಳುನಾಡು ಪೊಲೀಸರು ನೀಡಿದ್ದರು. ಮದ್ರಾಸ್ ಹೈಕೋರ್ಟ್ ತೀರ್ಪಿಗೆ ತಡೆ ನೀಡಲು ಸುಪ್ರೀಂಕೋರ್ಟ್ ಒಪ್ಪದೇ ಇದ್ದಿದ್ದರಿಂದ, ಅಕ್ಟೋಬರ್ 6, 2024ರ ಪಥಸಂಚಲನಕ್ಕೆ ಸುಪ್ರೀಂಕೋರ್ಟ್ ಅನುಮತಿಯನ್ನು ನೀಡಿತ್ತು.ಪದೇಪದೇ, ತಮಿಳುನಾಡಿನಲ್ಲಿ ಆರ್‌ಎಸ್‌ಎಸ್‌ ಸಂಸ್ಥೆಯನ್ನು ಬಲಿಪಶುವಾಗುವಂತೆ ಮಾಡಬೇಡಿ. ವಾಕ್, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಬೇಡಿ, ಶಾಂತಿಯುತವಾಗಿ ಸಭೆ, ಮೆರವಣಿಗೆ ನಡೆಸುವುದು ಎಲ್ಲರ ಹಕ್ಕು. ಸಂಘದ ಪಥಸಂಚನಕ್ಕೆ ಬೇಕಾದ ಪೊಲೀಸ್ ಭದ್ರತೆಯನ್ನು ಕೊಡಿ ಎಂದು ಸ್ಟಾಲಿನ್ ಸರ್ಕಾರದ ಕಿವಿಯನ್ನು ಸುಪ್ರೀಂಕೋರ್ಟ್ ಹಿಂಡಿತ್ತು.ಸರ್ವೋಚ್ಚ ನ್ಯಾಯಾಲಯದ ಆದೇಶದ ಪರಿಣಾಮವಾಗಿ, ಆರ್‌ಎಸ್‌ಎಸ್ ತಮಿಳುನಾಡಿನ ವಿವಿಧ ಕಡೆಗಳಲ್ಲಿ ಮತ್ತು ಸಾರ್ವಜನಿಕ ರಸ್ತೆಗಳಲ್ಲೂ ಮೆರವಣಿಗೆಗಳನ್ನು ನಡೆಸಲು ಅವಕಾಶವನ್ನು ಪಡೆದುಕೊಂಡಿತು. ಇದು, ಸಂಘದ ಚಟುವಟಿಕೆಗಳನ್ನು ನಿರ್ಬಂಧಿಸುವ ಸ್ಟಾಲಿನ್ ಸರ್ಕಾರಕ್ಕೆ ಆದ ಹಿನ್ನಡೆಯಾಗಿತ್ತು. ಅವರದ್ದೇ ಪಕ್ಷ ಅಧಿಕಾರದಲ್ಲಿದ್ದರೂ, ಪ್ರಜಾಪ್ರಭುತ್ವ ಹಕ್ಕುಗಳನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿತ್ತು.ತಮಿಳುನಾಡು ರಾಜ್ಯದ ಮಾದರಿಯಂತೆ, ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳು, ಮುಜರಾಯಿ ವ್ಯಾಪ್ತಿಯ ದೇವಾಲಯಗಳಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ಪತ್ರದ ಮೂಲಕ, ಸಿಎಂ ಸಿದ್ದರಾಮಯ್ಯನವರನ್ನು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದರು. ಇನ್ನೊಂದು ಪತ್ರವನ್ನು ಬರೆದು, ಸರ್ಕಾರೀ ಸಿಬ್ಬಂದಿಗಳೂ, ಸಂಘದ ಚಟುವಟಿಕೆಯಲ್ಲಿ ಭಾಗವಹಿಸದಂತೆ ಸುತ್ತೋಲೆ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

[t4b-ticker]
error: Content is protected !!