ಬೆಂಗಳೂರು: ಇಂದು ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ, ಸರ್ಕಾರಿ ಆಸ್ತಿಗಳಲ್ಲಿ ಯಾವುದೇ ಖಾಸಗಿ ಸಂಘಟನೆಗಳು ಚಟುವಟಿಕೆ ನಡೆಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಪರೋಕ್ಷವಾಗಿ ಆರ್‌ಎಸ್‌ಎಸ್‌ಗೆ ಕುಟುಕಿರುವ ಸರ್ಕಾರ, ಕ್ಯಾಬಿನೆಟ್ ಚರ್ಚೆಯಲ್ಲಿ ಅಂಕುಶ ಹಾಕಿದೆ.ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪಥಸಂಚಲನದ ಬಗ್ಗೆ ಮೊದಲು ಧ್ವನಿ ಎತ್ತಿದ ಸಚಿವ ಪ್ರಿಯಾಂಕ್ ಖರ್ಗೆ, ಪತ್ರದ ಮುಖೇನ ರಾಜ್ಯ ಸರ್ಕಾರಕ್ಕೆ ದೂರು ನೀಡಿದ್ದರು. ಆರ್‌ಎಸ್‌ಎಸ್ ಸಂಘಟನೆಯನ್ನು ಬ್ಯಾನ್ ಮಾಡುವಂತೆ ಸೂಚಿಸಿದ್ದರು. ಈ ಕುರಿತಾಗಿ ಇಂದಿನ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ರಾಜ್ಯ ಸರ್ಕಾರ, ಎಲ್ಲಿಯೂ ಆರ್‌ಎಸ್ ಎಸ್ ಹೆಸರನ್ನು ಉಲ್ಲೇಖಿಸದೆ, ಯಾವ ಖಾಸಗಿ ಸಂಘಟನೆಗಳು ಸರ್ಕಾರಿ ಜಾಗಗಳಲ್ಲಿ ತನ್ನ ಚಟುವಟಿಕೆ ನಡೆಸುವಂತಿಲ್ಲ ಎಂದು ಹೇಳುವ ಮೂಲಕ ಕಟ್ಟುನಿಟ್ಟಿನ ನಿಮಯವನ್ನು ಜಾರಿಗೊಳಿಸಿದೆ.ಸರ್ಕಾರಕ್ಕೆ ಸಂಬಂಧಿಸಿದ ಅಂದರೆ, ಸರ್ಕಾರಿ ಶಾಲಾ-ಕಾಲೇಜು, ಇಲಾಖೆಗೆ ಸೇರಿದ ಆವರಣಗಳು ಮತ್ತು ಸ್ವತ್ತುಗಳಿಗೆ ಸೇರಿದ ಜಾಗಗಳನ್ನು ಬಳಿಸಿಕೊಳ್ಳುವಂತಿಲ್ಲ. ಇದು ಕಡ್ಡಾಯ ಎಂದು ಉಲ್ಲೇಖಿಸಲಾಗಿದೆ. ಯಾವುದೇ ಖಾಸಗಿ ಸಂಘಟನೆಗಳು ಸಭೆ, ರ್ಯಾಲಿ ಅಥವಾ ಇನ್ನಿತರ ಚಟುವಟಿಕೆಗಳನ್ನು ಸರ್ಕಾರಿ ಆಸ್ತಿಗಳಲ್ಲಿ ಆಯೋಜಿಸುವಂತಿಲ್ಲ. ಹಾಗೇನಾದರೂ ಇದ್ದರೆ
ಸ್ಥಳೀಯ ಪೊಲೀಸರ ಮತ್ತು ಸಂಬಂಧಿತ ಇಲಾಖೆಯ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಒತ್ತಿ ಹೇಳಲಾಗಿದೆ. ಅಕಸ್ಮಾತ್ ಈ ನಿಮಯವನ್ನು ಉಲ್ಲಂಘಿಸಿದರೆ, ಶಿಸ್ತಿನ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಲಾಗಿದೆ.