ರಾಜಕಾರಣಿಗಳು ಸಂಘದ ಕಾರ್ಯಕ್ರಮಗಳಿಗೆ ಹೋಗಬಾರದು, ಸದನದಲ್ಲಿ ಅವರ ಮಂತ್ರ ಪಠಿಸಬಾರದು – ಖರ್ಗೆ, ಡಿಕೆಶಿಗೆ ಪ್ರಕಾಶ್ ರೈ ಮನವಿ

Picture of Savistara

Savistara

Bureau Report

ಮೈಸೂರು: ರಾಜಕಾರಣಿಗಳು, ಬುದ್ಧ ಬಸವ, ಅಂಬೇಡ್ಕರ್ ಬಗ್ಗೆ ಭಾಷಣ ಮಾಡುವುದು ಬೇಕಿಲ್ಲ. ಅವರು ಸಂಘಿಗಳ ಕಾರ್ಯಕ್ರಮಗಳಿಗೆ ಹೋಗಬಾರದು. ಸದನದಲ್ಲೂ ಅವರ ಮಂತ್ರಗಳನ್ನು ಪಠಿಸಬಾರದು ಎಂದು ಹಿರಿಯ ನಟ ಪ್ರಕಾಶ್ ರೈ ಹೇಳಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿರುವ ಬೌದ್ಧ ಸಮ್ಮೇಳನದ ಅಂಗವಾಗಿ ಅ. 15ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಕಾಶ್ ರಾಜ್ ಅವರು ಮಾತನಾಡಿದರು.

ಇತ್ತೀಚೆಗೆ, ಸಚಿವ ಪ್ರಿಯಾಂಕ್ ಖರ್ಗೆಯವರು ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯ (ಆರ್.ಎಸ್.ಎಸ್.) ಚಟುವಟಿಕೆಗಳನ್ನು ಕರ್ನಾಟಕದ ಸರ್ಕಾರಿ ಸ್ಥಳಗಳಲ್ಲಿ ನಡೆಸದಂತೆ ಕಡಿವಾಣ ಹಾಕಬೇಕು ಎಂದು ಸಿಎಂ ಸಿದ್ದರಾಮಯ್ಯನವರಿಗೆ ಬರೆದ ಪತ್ರ ವಿವಾದಕ್ಕೀಡಾಗಿದೆ. ಅದಕ್ಕೆ ತಿರುಗೇಟು ನೀಡಿದ್ದ ರಾಜ್ಯ ಬಿಜೆಪಿ, 2002ರಲ್ಲಿ ಬೆಂಗಳೂರಿನ ನಾಗವಾರದಲ್ಲಿ ನಡೆದಿದ್ದ ಆರೆಸ್ಸೆಸ್ ಶಿಬಿರಕ್ಕೆ ಆಗ ರಾಜ್ಯದ ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಭೇಟಿ ನೀಡಿದ್ದ ಫೋಟೋ ಹಾಕಿ, ಪ್ರಿಯಾಂಕ್ ಗಾಂಧಿಯವರಿಗೆ, ನಿಮ್ಮ ತಂದೆಯವರನ್ನೂ ನಿಷೇಧಿಸುತ್ತೀರಾ ಎಂದು ಕೇಳಿತ್ತು.

ಅ. 15ರಂದು ಮೈಸೂರಿನಲ್ಲಿ ಪ್ರಕಾಶ್ ರೈ ಅವರು, ರಾಜಕಾರಣಿಗಳು ಆರೆಸ್ಸೆಸ್ ಕಾರ್ಯಕ್ರಮಗಳಿಗೆ ಹೋಗಬಾರದು ಎಂದು ಹೇಳಿದ್ದು ಪರೋಕ್ಷವಾಗಿ ಇದೇ ಕಾರಣಕ್ಕೆ ಎಂದು ಭಾಸವಾಗುತ್ತದೆ. ಇನ್ನು, ಇತ್ತೀಚೆಗೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಸದನದಲ್ಲಿ ಆರೆಸ್ಸೆಸ್ ಧ್ಯೇಯ ಗೀತೆಯಾದ “ನಮಸ್ತೆ ಸದಾ ವತ್ಸಲೇ ಮಾತೃಭೂಮಿ” ಶ್ಲೋಕವನ್ನು ಹಾಡಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ಇದನ್ನು ಸಹ ತಮ್ಮ ಭಾಷಣದಲ್ಲಿ ‘ಇಂಥ ನಡೆಗಳು ಬೇಡ’ ಎಂದು ಪ್ರಕಾಶ್ ರೈ ಹೇಳಿದ್ದಾರೆ.

‘ಆ ಸಂಸ್ಥೆಗೆ ಇನ್ನೂ ಬುದ್ಧಿ ಬಂದಿಲ್ಲ’ಕತ್ತೆಗೆ ವಯಸ್ಸಾದರೂ ಬುದ್ಧಿ ಬರಲ್ಲ ಎಂಬಂತೆ, ಒಂದು ಸಂಸ್ಥೆಗೆ 100 ವರ್ಷ ತುಂಬಿದೆ. ಆದರೂ, ಆ ಸಂಸ್ಥೆಗೆ ಇನ್ನೂ ಬುದ್ಧಿ ಬಂದಿಲ್ಲ ಎಂದು ಹೇಳಿದ ಅವರು, “ಆ ಸಂಸ್ಥೆಯವರು ಮಾತೆತ್ತಿದರೆ ಹಿಂದೂ ಧರ್ಮ ಎನ್ನುತ್ತಾರೆ. ಆದರೆ ಅವರೇ ಆ ಧರ್ಮಕ್ಕೆ ಸೇರಿರುವುದಿಲ್ಲ. ಅವರ ಅಂಧ ಭಕ್ತನೊಬ್ಬ ಸಗಣಿ ರೀತಿಯ ಆಲ್ರೌಂಡರ್ ಇದ್ದಂತೆ. ಎಲ್ಲಿ ಯಾವ ಸಂದರ್ಭ ಇರುತ್ತದೋ ಹಾಗೆ ಬದಲಾಗುತ್ತಾರೆ. ಒಲೆಗೆ ಬಿದ್ದರೆ ಇಂಧನ, ಹೊಲಕ್ಕೆ ಬಿದ್ದರೆ ಗೊಬ್ಬರ, ತಲೆಗೆ ಬಿದ್ದರೆ ಅಂಧ ಭಕ್ತ” ಎಂದರು.“ಎಲ್ಲವನ್ನೂ ತುಳಿಯಬೇಕು ಎಂದುಕೊಂಡಿರುವ ನಿಮ್ಮದು ಕೇವಲ ಒಂದು ಶತಮಾನದ ಆಟವಷ್ಟೇ. ಆದರೆ, ಶತಶತಮಾನಗಳ ಬುದ್ಧ, ಬಸವ ಹಾಗೂ ಅವರನ್ನು ನಂಬಿದ್ದ ನಮ್ಮ ಅಂಬೇಡ್ಕರ್ – ಈ ಮೂವರೂ ನಮ್ಮಗಳ ಹಿಂದಿದ್ದಾರೆ. ಆ ಮೂವರ ಮುಂದೆ ನೀವು ನಿಲ್ಲಲಾರಿರಿ. ಅಸಮಾನತೆಯನ್ನು ಪ್ರತಿಪಾದಿಸುವ ನಿಮಗೆ ಧರ್ಮದೇಟು ಕೊಡಬೇಕು” ಎಂದು ಹೇಳಿದರು. “ರಾಕ್ಷಸರ ಜಗತ್ತಿನಲ್ಲಿ ಕರುಣೆ, ಪ್ರೀತಿಯಿಂದಷ್ಟೇ ಅಲ್ಲ. ಹೋರಾಟದಿಂದ ಮಾತ್ರ ಗೆಲ್ಲಲು ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಂಘಟಿತರಾಗಬೇಕು” ಎಂದು ಪ್ರಕಾಶ್ ರೈ ಅವರು ಸಲಹೆ ನೀಡಿದರು.

[t4b-ticker]
error: Content is protected !!