ನವದೆಹಲಿ: ಸೋಮವಾರ (Monday) ನಡೆದ ಅರಾವಳಿ (Aravali) ಪರ್ವತ ಶ್ರೇಣಿ ವಿಚಾರಣೆಯ ವ್ಯಾಖ್ಯಾನವನ್ನು ಮರುವ್ಯಾಖ್ಯಾನಿಸಿ ಕಳೆದ ತಿಂಗಳು ಹೊರಡಿಸಲಾಗಿದ್ದ ಆದೇಶವು ಪರಿಸರದ (Environment) ದೃಷ್ಟಿಯಿಂದ ಗಂಭೀರ ಪರಿಣಾಮಗಳನ್ನುಂಟುಮಾಡುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಗಮನಿಸಿದೆ. ಈ ಆದೇಶವು ದುರ್ಬಲ ಪರಿಸರ ವ್ಯವಸ್ಥೆಗಳನ್ನು ಅಕ್ರಮ ಮತ್ತು ಅನಿಯಂತ್ರಿತ ಗಣಿಗಾರಿಕೆಗೆ (Mining) ತೆರೆದಿಡಬಹುದು ಎಂಬ ಆತಂಕವನ್ನು ಪರಿಸರ ಕಾರ್ಯಕರ್ತರು ಮತ್ತು ವಿಜ್ಞಾನಿಗಳು (Scientist) ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅರಾವಳಿ ಪರ್ವತ ಶ್ರೇಣಿಯ ಭವಿಷ್ಯಕ್ಕೆ ಸಂಬಂಧಿಸಿದ ಮಹತ್ವದ ವಿಚಾರಣೆಯಲ್ಲಿ, ಸುಪ್ರೀಂ ಕೋರ್ಟ್ ತನ್ನದೇ ಆದ ಹಿಂದಿನ ಆದೇಶ ತಾತ್ಕಾಲಿಕವಾಗಿ ತಡೆಹಿಡಿದಿದೆ. ಈ ಕುರಿತು ನ್ಯಾಯಾಲಯ ನೀಡಿದ ತೀರ್ಪಿನ ಕುರಿತು ತಿಳಿಯೋಣ ಬನ್ನಿ.
ಹೊಸ ತಜ್ಞರ ಸಮಿತಿ ರಚನೆಯಾಗುವವರೆಗೆ ತಡೆಯಾಜ್ಞೆ!
ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ, ಹೊಸ ತಜ್ಞರ ಸಮಿತಿ ರಚನೆಯಾಗುವವರೆಗೆ ಹಿಂದಿನ ಆದೇಶವನ್ನು ಜಾರಿಗೊಳಿಸದಂತೆ ತಡೆ ನೀಡಿತು. ಸಮಿತಿಯ ಶಿಫಾರಸುಗಳು ಹಾಗೂ ಈ ನ್ಯಾಯಾಲಯದ ನಿರ್ದೇಶನಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವುದು ಅಗತ್ಯವೆಂದು ನಾವು ಪರಿಗಣಿಸುತ್ತೇವೆ. ಹೊಸ ಸಮಿತಿ ರಚನೆಯಾಗುವವರೆಗೆ ಈ ತಡೆಯಾಜ್ಞೆ ಜಾರಿಯಲ್ಲಿರುತ್ತದೆ, ಎಂದು ಪೀಠ ಸ್ಪಷ್ಟಪಡಿಸಿದೆ.
ಸಂಬಂಧಪಟ್ಟ ನಾಲ್ಕು ರಾಜ್ಯಗಳಿಗೆ ನೋಟಿಸ್ ಜಾರಿ!
ಈ ಬೆಳವಣಿಗೆಯ ನಂತರ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಸಂಬಂಧಪಟ್ಟ ನಾಲ್ಕು ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿತು. ಜೊತೆಗೆ, ವಿಷಯವನ್ನು ಪುನಃ ಪರಿಶೀಲಿಸಲು ಸ್ವತಂತ್ರ ಮತ್ತು ತಟಸ್ಥ ತಜ್ಞರನ್ನೊಳಗೊಂಡ ಹೊಸ ಸಮಿತಿ ರಚಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 21ಕ್ಕೆ ನಿಗದಿಪಡಿಸಲಾಗಿದೆ.
ಪ್ರಕರಣದ ಹಿನ್ನೆಲೆ!
ಅರಾವಳಿ ವಿವಾದದ ಮೂಲ ಕಾರಣವೆಂದರೆ, ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ಪರ್ವತ ಶ್ರೇಣಿಯ ಹೊಸ ವ್ಯಾಖ್ಯಾನ. ಈ ವ್ಯಾಖ್ಯಾನವನ್ನು ಸಾಕಷ್ಟು ವೈಜ್ಞಾನಿಕ ಮೌಲ್ಯಮಾಪನ ಅಥವಾ ಸಾರ್ವಜನಿಕ ಸಮಾಲೋಚನೆಯಿಲ್ಲದೆ ರೂಪಿಸಲಾಗಿದೆ ಎಂದು ಪರಿಸರ ತಜ್ಞರು ಆರೋಪಿಸಿದ್ದಾರೆ. ಈ ಹೊಸ ವ್ಯಾಖ್ಯಾನವು ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿನ ಅರಾವಳಿ ಶ್ರೇಣಿಯ ದೊಡ್ಡ ಭಾಗಗಳನ್ನು ಗಣಿಗಾರಿಕೆಯ ಅಪಾಯಕ್ಕೆ ತಳ್ಳಬಹುದು ಎಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಜನಾಂದೋಲನ ಪ್ರಾರಂಭವಾಗಿತ್ತು.
ತುಷಾರ್ ಮೆಹ್ತಾ ಹೇಳಿದ್ದೇನು?
ಈ ವರ್ಷದ ನವೆಂಬರ್‌ನಲ್ಲಿ, ಅರಾವಳಿ ಪ್ರದೇಶದಲ್ಲಿ ಯಾವುದೇ ಹೊಸ ಗಣಿಗಾರಿಕೆ ಚಟುವಟಿಕೆಗಳಿಗೆ ಅವಕಾಶ ನೀಡುವ ಮೊದಲು ಸುಸ್ಥಿರ ಗಣಿಗಾರಿಕೆಗಾಗಿ ಸಮಗ್ರ ಯೋಜನೆಯನ್ನು ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇತ್ತೀಚಿನ ವಿಚಾರಣೆಯಲ್ಲಿ ಕೇಂದ್ರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನ್ಯಾಯಾಲಯವು ಕಳೆದ ತಿಂಗಳು ಆ ಸಮಗ್ರ ಯೋಜನೆಯನ್ನು ಒಪ್ಪಿಕೊಂಡಿದೆ ಎಂದು ಪೀಠದ ಗಮನಕ್ಕೆ ತಂದರು. ಆದರೆ, ಈ ವಾದವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಸ್ಪಷ್ಟವಾಗಿ ತಿರಸ್ಕರಿಸಿದರು. ಸಮಿತಿಯ ವರದಿ ಮತ್ತು ಈ ನ್ಯಾಯಾಲಯದ ಅವಲೋಕನಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ನಾವು ನಂಬುತ್ತೇವೆ. ಕೆಲವು ವಿಷಯಗಳಲ್ಲಿ ಸ್ಪಷ್ಟೀಕರಣ ಅಗತ್ಯವಿದೆ. ಯಾವುದೇ ಅನುಷ್ಠಾನಕ್ಕೂ ಮುನ್ನ ನಿಷ್ಪಕ್ಷಪಾತ, ತಟಸ್ಥ ಮತ್ತು ಸ್ವತಂತ್ರ ತಜ್ಞರ ಅಭಿಪ್ರಾಯ ಪರಿಗಣಿಸಬೇಕು, ಎಂದು ಅವರು ಹೇಳಿದ್ದಾರೆ.
ನ್ಯಾಯಾಲಯದ ಹಸ್ತಕ್ಷೇಪ ಅಗತ್ಯ!
ಮುಂದುವರೆದು ಮಾತನಾಡಿದ ಸಿಜೆಐ, ಹೊಸ ವ್ಯಾಖ್ಯಾನವು ಅರಾವಳಿ ಅಲ್ಲದ ಪ್ರದೇಶಗಳ ವ್ಯಾಪ್ತಿಯನ್ನು ವಿಸ್ತರಿಸಿದ್ದೇ ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿದರು. ಇದರಿಂದಾಗಿ ಅನಿಯಂತ್ರಿತ ಗಣಿಗಾರಿಕೆಗೆ ಅವಕಾಶ ಕಲ್ಪಿಸಿರುವುದೇ ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸುವುದು ಅಗತ್ಯ ಎಂದು ಅವರು ಒತ್ತಿಹೇಳಿದರು. ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಯ ನಡುವಿನ ಸಮತೋಲನ ಕಾಯ್ದುಕೊಳ್ಳಲು ನ್ಯಾಯಾಲಯದ ಈ ಹಸ್ತಕ್ಷೇಪ ಅಗತ್ಯವಾಗಿದೆ ಎಂಬ ಸಂದೇಶವೂ ಈ ಆದೇಶದಿಂದ ಹೊರಬಿದ್ದಿದೆ. ಆದ್ದರಿಂದ ಅರಾವಳಿ ಪರ್ವತ ಶ್ರೇಣಿಯ ರಕ್ಷಣೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೆಗೆದುಕೊಂಡ ಈ ತಾತ್ಕಾಲಿಕ ತಡೆ, ಪರಿಸರ ಸಂರಕ್ಷಣೆಯ ಪರವಾದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.













































