ದ.ಕ. ಜಿಲ್ಲೆಯಲ್ಲಿ ಕೋವಿ ಮತ್ತು ರಿವಾಲ್ವಾರ್ ಬಳಕೆದಾರರು ತಮ್ಮ ಆಯುಧಗಳ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದಾಗ ಸಕಾರಣ ನೀಡದೆ ಅರ್ಜಿಯನ್ನು ತಿರಸ್ಕರಿಸುತ್ತಿದ್ದು, ಇದರಿಂದ ಕೋವಿ ಡೆಪಾಸಿಟ್ ಇಡುವ ಸನ್ನಿವೇಶ ನಿರ್ಮಾಣವಾಗಿದೆ. ಅಗತ್ಯವುಳ್ಳ ಅರ್ಹ ಬಳಕೆದಾರರ ಪರವಾನಿಗೆಯನ್ನು ನವೀಕರಿಸಬೇಕೆಂದು ಒತ್ತಾಯಿಸಿ ದ.ಕ. ಜಿಲ್ಲಾಧಿಕಾರಿಯವರಿಗೆ ಫೆ. 9 ರಂದು ಬಳಕೆದಾರರ ನಿಯೋಗ ಶಾಸಕಿ ಕು. ಭಾಗೀರಥಿ ಮುರುಳ್ಯರ ಜೊತೆಗೂಡಿ ಮನವಿ ನೀಡಲಾಯಿತು. ಕೃಷಿಕರಿಗೆ ನೀಡುವ ಕೋವಿ ಸಹಿತ ಆಯುಧ ಪರವಾನಿಗೆಯ ನವೀಕರಣ ಮತ್ತು ಹೊಸ ಪರವಾನಿಗೆ ಮಂಜೂರಾತಿಯ ವಿಳಂಬ ಮತ್ತು ನಿರಾಕರಣೆಯ ವಿಚಾರವಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಪರವಾನಿಗೆದಾರರು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.ಯವರ ಜತೆ ಮಾತುಕತೆ ನಡೆಸಿದರು.ಕೃಷಿಕರು ಕಾಡು ಪ್ರಾಣಿಗಳ ಉಪಟಳದಿಂದ ಕಂಗಾಲಾಗಿದ್ದಾರೆ. ಆದರೆ ಅವರ ಕೋವಿ ಹಾಗೂ ಇತರ ಆಯುಧಗಳಿಗೆ ನೀಡಲಾದ ಪರವಾನಿಗೆಗಳನ್ನು ನವೀಕರಿಸುತ್ತಿಲ್ಲ ಎಂದು ಪರವಾನಿಗೆದಾರರು ದೂರಿದರು.*ರೈತರ ಪರ ಕ್ರಮಕ್ಕೆ ಸೂಚನೆ : ಶಾಸಕಿ ಭಾಗೀರಥಿ ಮುರುಳ್ಯ*ರೈತರಿಗೆ ಯಾವುದೆ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದೇವೆ. ಅರ್ಹರಿಗೆ ಪರವಾನಿಗೆ ನಿರಾಕರಿಸಬಾರದು. ತಂದೆಯಿಂದ ಮಗನಿಗೆ ಪರವಾನಿಗೆ ವರ್ಗಾವಣೆ ಸಂದರ್ಭದಲ್ಲಿಯೂ ನಿರಾಕರಣೆ ಮಾಡುವುದು ಸರಿಯಲ್ಲ. ವಿಳಂಬ ಮಾಡದೆ ನೀಡಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದೇನೆ. ಜಿಲ್ಲಾಧಿಕಾರಿಯವರು ಕೃಷಿಕರ ಅಹವಾಲು ಆಲಿಸಿದ್ದಾರೆ. 15 ದಿನಗಳ ಒಳಗಾಗಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.*ದ.ಕ ಜಿಲ್ಲೆಯಲ್ಲಿ ಮಾತ್ರ ಸಮಸ್ಯೆ : ಜಯಪ್ರಸಾದ್ ಜೋಶಿ*ದ.ಕ ಜಿಲ್ಲೆಯಲ್ಲಿ ಮಾತ್ರ ಈ ಸಮಸ್ಯೆ ಇದೆ. ಬೇರೆ ಜಿಲ್ಲೆಗಳಲ್ಲಿ ಇಲ್ಲ. ಬೆಳೆಹಾನಿ ಪರಿಹಾರ ಪಡೆದ ಪ್ರಮಾಣಪತ್ರ ನೀಡಿದವರ ಆಯುಧಗಳ ಪರವಾನಿಗೆಯನ್ನು ಮಾತ್ರ ನವೀಕರಿಸಲಾಗುತ್ತಿದೆ. ನಿಯಮ ಪ್ರಕಾರ ಪರವಾನಿಗೆಗೆ ಇದು ಕಡ್ಡಾಯವಲ್ಲ. ಬ್ರಿಟಿಷರ ಕಾಲದಿಂದಲೂ ಇದ್ದ ಪರವಾನಿಗೆಯನ್ನು ಕ್ಷುಲ್ಲಕ ಕಾರಣ ನೀಡಿ ತಿರಸ್ಕರಿಸುತ್ತಿದ್ದಾರೆ. ತಾಲೂಕು ಪರವಾನಿಗೆ ನವೀಕರಣ ಆಗುತ್ತಿದೆ. ಜಿಲ್ಲಾಡಳಿತ ಮಾತ್ರ ನಿರಾಕರಿಸುತ್ತಿದ್ದಾರೆ” ಎಂದು ದ.ಕ ಜಿಲ್ಲಾ ಕೋವಿ ಪರವಾನಿಗೆದಾರರ ಒಕ್ಕೂಟದ ಸಂಚಾಲಕ ಜಯಪ್ರಸಾದ್ ಜೋಷಿ ಹೇಳಿದರು. *ಸಕಾರಣದಿಂದ ನಿರಾಕರಣೆ : ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.* ಕೋವಿ ಪರವಾನಿಗೆ ನವೀಕರಣದ ಸಂದರ್ಭದಲ್ಲಿ ನಿಯಮಾನುಸಾರ ಪೊಲೀಸ್ ವರದಿಯ ಆಧಾರದಲ್ಲಿ ನಿರಾಕರಿಸಲಾಗಿದೆ. ನಮ್ಮ ಆದೇಶದ ವಿರುದ್ಧ ಅಪೀಲು ಹೋಗಲು ಬಳಕೆದಾರರಿಗೆ ಅವಕಾಶವಿದೆ. ಕೆಲವು ಪರವಾನಿಗೆಗಳನ್ನು ಮಾತ್ರ ನಿರಾಕರಿಸಲಾಗಿದೆ. ಬಾಕಿ ಇರುವ ಪರವಾನಿಗೆಗಳ ಕಡೆಗೆ ಗಮನ ಹರಿಸಿ ಒಂದು ತಿಂಗಳೊಳಗೆ ಕಂದಾಯ, ಪೊಲೀಸ್ ಮತ್ತು ಅರಣ್ಯ ಇಲಾಖೆಯ ವರದಿ ಪಡೆದುಕೊಳ್ಳಲಾಗುತ್ತಿದೆ. ಪರವಾನಿಗೆ ಅವಧಿ ಮುಗಿದು ತುಂಬಾ ಸಮಯದ ಬಳಿಕ ಅರ್ಜಿ ಸಲ್ಲಿಸಿದವರೂ ಇದ್ದಾರೆ. ನವೀಕರಣವನ್ನು ಆನ್ ಲೈನ್ ಮೂಲಕ ಮಾಡುವ ಬಗ್ಗೆ ಚಿಂತನೆ ಇದೆ. ತಿಂಗಳೊಳಗೆ ಅರ್ಜಿ ವಿಲೇವಾರಿ ಮಾಡುವುದು ನಮ್ಮ ಉದ್ದೇಶವಾಗಿದೆ ” ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಪ್ರತಿಕ್ರಿಯಿಸಿದ್ದಾರೆ.ದ.ಕ ಜಿಲ್ಲಾ ಕೋವಿ ಪರವಾನಿಗೆದಾರರ ಒಕ್ಕೂಟದ ಸಂಚಾಲಕ ಜಯಪ್ರಸಾದ್ ಜೋಶಿ ಬೆಳ್ಳಾರೆ, ಸುಳ್ಯ ಬಿಜೆಪಿ ಮಾಜಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿ, ಬಿಜೆಪಿ ಮುಖಂಡ ರಾಕೇಶ್ ರೈ ಕೆಡೆಂಜಿ, ಡಾ. ಪಿ. ರಾಮಚಂದ್ರ ಭಟ್, ಕೈಲಾರು ಈಶ್ವರ ಭಟ್, ಸುಬ್ರಹ್ಮಣ್ಯ ತಿಪ್ಪನಕಜೆ, ಕುಂಬ್ರ ದಯಾಕರ ಆಳ್ವ, ಕೇಶವ ಭಟ್ ಮುಳಿಯ, ನರಸಿಂಹ ತೇಜಸ್ವಿ ಕಾನಾವು, ರಮೇಶ್ ಕೋಟೆ, ಶರತ್ ಶುಂಠಿಪ್ಪಾಡಿ ಸೇರಿದಂತೆ ಹಲವು ಮಂದಿ ಕೋವಿ ಬಳಕೆದಾರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದ.ಕ. ಜಿಲ್ಲೆಯಲ್ಲಿ ಕೋವಿ ಪರವಾನಿಗೆ ನವೀಕರಣದ ಸಮಸ್ಯೆ | ದ.ಕ ಜಿಲ್ಲಾ ಕೋವಿ ಬಳಕೆದಾರರು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರ ಜೊತೆ ಜಿಲ್ಲಾಧಿಕಾರಿ ಭೇಟಿ
Savistara
Bureau Report
[t4b-ticker]












































