ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಮಂಗಳೂರು ಮೂಡುಬಿದಿರೆ ನಡುವೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಚತುಷ್ಪಥ ಕಾಮಗಾರಿ ಕೈಗೊಂಡಿದ್ದು, ಎಡಪದವಿನ ಮಚೂರು ಕ್ರಾಸ್ ಬಳಿ ಭಾರಿ ವಾಹನಗಳ ಸಂಚಾರದಿಂದ ಹೆದ್ದಾರಿ ಬಿರುಕು ಬಿಟ್ಟು, ಅಲ್ಲಲ್ಲಿ ಕುಸಿದಿದೆ. ಇದರ ದುರಸ್ತಿಗಾಗಿ ಇದೇ 12ರಿಂದ ಮಾರ್ಚ್ 13ರವರೆಗೆ ಈ ಹೆದ್ದಾರಿಯಲ್ಲಿ ವಾಹನ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ.
ಮಾರ್ಗ ಬದಲಾವಣೆಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕರು ಸಹಕರಿಸ ಬೇಕು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಕೋರಿದ್ದಾರೆ.ಮೂಡುಬಿದಿರೆ ಕಡೆಯಿಂದ ಮಂಗಳೂರು ಕಡೆಗೆ ಬರುವ ಲಾರಿಗಳು ವಿದ್ಯಾಗಿರಿ ಮೂಲ್ಕಿ ತಿರುವಿನಲ್ಲಿ ಬಲಕ್ಕೆ ತಿರುಗಿ ಕಿನ್ನಿಗೋಳಿ ಮಾರ್ಗವಾಗಿ ಸಂಚರಿಸಿ ಪಕ್ಷಿಕೆರೆ ತಿರುವಿನಲ್ಲಿ ಬಲಕ್ಕೆ ತಿರುಗಿ ಮೂಲ್ಕಿ ಜಂಕ್ಷನ್ – ಸುರತ್ಕಲ್ ಮೂಲಕ ಮಂಗಳೂರು ಕಡೆಗೆ ಸಂಚರಿಸಬಹುದು. ಮಂಗಳೂರು ಕಡೆಯಿಂದ ಮೂಡುಬಿದಿರೆ ಕಡೆಗೆ ಸಂಚರಿಸುವ ಲಾರಿಗಳು ಇದೇ ಮಾರ್ಗವನ್ನು ಅನುಸರಿಸಬಹುದು.ಮೂಡುಬಿದಿರೆ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಲಘುವಾಹನಗಳು ವಿದ್ಯಾಗಿರಿ ಮೂಲ್ಕಿ ಕ್ರಾಸ್‌ನಲ್ಲಿ ಬಲಕ್ಕೆ ತಿರುಗಿ ಕಿನ್ನಿಗೋಳಿ ರಸ್ತೆಯಲ್ಲಿ ಸಂಚರಿಸಿ ಮೂರುಕಾವೇರಿ- ಕಟೀಲು-ಪೆರ್ಮುದೆ-ಬಜಪೆ- ಮೂಲಕ ಅಥವಾ ಪಕ್ಷಿಕೆರೆ ತಿರುವಿನಲ್ಲಿ ಎಡಕ್ಕೆ ತಿರುಗಿ ಹಳೆಯಂಗಡಿ- ಸುರತ್ಕಲ್ ಮೂಲಕ ಮಂಗಳೂರು ಕಡೆಗೆ ಸಂಚರಿಸಬಹುದು. ಮಂಗಳೂರು ಕಡೆಯಿಂದ ಮೂಡುಬಿದಿರೆ ಕಡೆಗೆ ಸಂಚರಿಸುವ ಲಘುವಾಹನಗಳು ಇದೇ ಮಾರ್ಗವನ್ನು ಬಳಸಬಹುದು.
ಮೂಡುಬಿದಿರೆ ಕಡೆಯಿಂದ ಮಂಗಳೂರು ಕಡೆಗೆ ಬರುವ ಸಾರ್ವಜನಿಕ ಬಸ್‌ಗಳು ಮತ್ತು ಸ್ಥಳೀಯರ ಲಘು ವಾಹನಗಳು ಮಾತ್ರ ದಡ್ಡಿ ತಿರುವಿನ ಬಳಿ ಬಲಕ್ಕೆ ತಿರುಗಿ – ಪುಮಾರ್ ಪದವು ತಿರುವು – ಮಂಜನಕಟ್ಟೆ ತಿರುವು – ಅರ್ಜುನಕೋಡಿ – ಈಶ್ವರಕಟ್ಟೆ ತಿರುವು- ಮುಚೂರು ತಿರುವಿನ ಬಳಿ ಬಲಕ್ಕೆ ತಿರುಗಿ ಕೈಕಂಬ ಗುರುಪುರ ಮೂಲಕ ಮಂಗಳೂರು ಕಡೆಗೆ ಸಂಚರಿಸಬಹುದು.ಮಂಗಳೂರು ಕಡೆಯಿಂದ ಗುರುಪುರ-ಕೈಕಂಬ ಮೂಲಕ ಮೂಡುಬಿದಿರೆ ಕಡೆಗೆ ಹೋಗುವ ಸಾರ್ವಜನಿಕ ಬಸ್‌ಗಳು ಮತ್ತು ಸ್ಥಳೀಯರ ಲಘು ವಾಹನಗಳು ಗಂಜಿಮಠದಿಂದ ಮುಂದೆ ಮುಚೂರು ತಿರುವಿನ ಬಳಿ ಎಡಕ್ಕೆ ತಿರುಗಿ ಈಶ್ವರಕಟ್ಟೆ ಕ್ರಾಸ್-ಅರ್ಜುನಕೋಡಿ – ಮಂಜನ ಕಟ್ಟೆ ತಿರುವು-ಪುಮಾರ್ ಪದವು ತಿರುವು- ದಡ್ಡಿ ತಿರುವಿನ ಬಳಿ ಎಡಕ್ಕೆ ಸಂಚರಿಸಿ ಮೂಡುಬಿದಿರೆ ಕಡೆಗೆ ಸಂಚರಿಸಬಹುದು.ಮಂಗಳೂರು ಕಡೆಯಿಂದ ಮೂಡುಬಿದಿರೆ ಮಾರ್ಗವಾಗಿ ಕಾರ್ಕಳ ಕಡೆಗೆ ಸಂಚರಿಸುವ ಎಲ್ಲಾ ಲಾರಿಗಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುರತ್ಕಲ್- ಮೂಲ್ಕಿ-ಪಡುಬಿದ್ರೆ ಮಾರ್ಗವನ್ನು ಬಳಸಬಹುದು ಎಂದು ಪೊಲೀಸ್ ಕಮಿಷನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













































