ನವದೆಹಲಿ: 1980ರ ದಶಕದಲ್ಲಿ ದೂರದರ್ಶನದ ಖ್ಯಾತ ಸುದ್ದಿನಿರೂಪಕಿಯಾಗಿದ್ದ ಸರಳಾ ಮಹೇಶ್ವರಿ (71ವರ್ಷ) ಅವರು ಗುರುವಾರ (ಫೆ.12) ನಿಧನರಾಗಿದ್ದಾರೆ. ಈ ಬಗ್ಗೆ ದೂರದರ್ಶನ ನ್ಯಾಷನಲ್ ತನ್ನ ಎಕ್ಸ್ ಖಾತೆಯಲ್ಲಿ ಸುದ್ದಿಯನ್ನು ಹಂಚಿಕೊಂಡಿದ್ದು, ಸಂತಾಪ ಸೂಚಿಸಿದೆ.ತಮ್ಮ ಸರಳ ವ್ಯಕ್ತಿತ್ವ ಮತ್ತು ಸ್ಪಷ್ಟ ವಾರ್ತಾ ವಾಚನದಿಂದ ಗುರುತಿಸಿಕೊಂಡಿದ್ದ ಅವರು ಅಂದಿನ ಕಾಲದಲ್ಲಿ ತಮ್ಮ ಧ್ವನಿಯಿಂದಾಗಿ ಹಲವರಿಗೆ ಪ್ರೇರಣೆಯಾಗಿದ್ದರು. ಇಂದು ಸಂಜೆ 4ಗಂಟೆಗೆ ದೆಹಲಿಯ ನಿಗಮ್ ಬೋಧ ಘಾಟ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಸರಳಾ ಮಹೇಶ್ವರಿ ಅವರು 1976ರಿಂದ 2005ರವರೆಗೆ ದೂರದರ್ಶನದಲ್ಲಿ ನ್ಯೂಸ್ ಆಂಕರ್ ಆಗಿ ಕಾರ್ಯನಿರ್ವಹಿಸಿದ್ದರು. ಸುಮಾರು ಮೂರು ದಶಕಗಳ ಕಾಲ ವಾರ್ತಾ ವಾಚನದ ಮೂಲಕ ಮಹೇಶ್ವರಿ ಅವರು ಜನಪ್ರಿಯರಾಗಿದ್ದರು.ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, ಸರಳಾ ಮಹೇಶ್ವರಿ ಅವರು 1984ರವರೆಗೆ ದೂರದರ್ಶನದಲ್ಲಿ ನ್ಯೂಸ್ ಆಂಕರ್ ಆಗಿ ಕಾರ್ಯನಿರ್ವಹಿಸಿದ್ದು, ನಂತರ ಅವರು ಬ್ರಿಟನ್ ಗೆ ಸ್ಥಳಾಂತರಗೊಂಡಿದ್ದರು. ಅಲ್ಲಿ 1986ರವರೆಗೆ ಬಿಬಿಸಿ ನ್ಯೂಸ್ ರೀಡರ್ ಆಗಿದ್ದರು. ಬಳಿಕ ಪುತ್ರನ ಜನನದ ನಂತರ 1988ರಲ್ಲಿ ಭಾರತಕ್ಕೆ ಮರಳಿದ್ದು, ದೂರದರ್ಶನಕ್ಕೆ ನ್ಯೂಸ್ ಆಂಕರ್ ಆಗಿ ಸೇರ್ಪಡೆಗೊಂಡಿರುವುದಾಗಿ ವರದಿ ತಿಳಿಸಿದೆ.
ಸರಳಾ ಮಹೇಶ್ವರಿ ಅವರು ಪತಿ ಡಾ. ಪವನ್ ಮಹೇಶ್ವರಿ, ಪುತ್ರ ಡಾ.ಕವೀಶ್ ಮಹೇಶ್ವರಿ, ಪುತ್ರಿ ಹಿಮಾಂಶು ಮಹೇಶ್ವರಿ ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ. ದೆಹಲಿ ಯೂನಿರ್ವಸಿಟಿಯಲ್ಲಿ ಪಿಎಚ್ ಡಿ ಪದವಿ ಪಡೆದ ನಂತರ ಸರಳಾ ಮಹೇಶ್ವರಿ ಅವರು 1976ರಲ್ಲಿ ದೂರದರ್ಶನಕ್ಕೆ ಉದ್ಯೋಷಕಿಯಾಗಿ ಆಯ್ಕೆಯಾಗಿದ್ದರು. 1983ರಲ್ಲಿ ಪವನ್ ಮಹೇಶ್ವರಿ ಅವರ ಜತೆಗಿನ ಪರಿಚಯವಾಗಿದ್ದು, 1984ರಲ್ಲಿ ಇಬ್ಬರೂ ವಿವಾಹವಾಗಿದ್ದರು.
ಉಗ್ರರಿಂದ ಬೆದರಿಕೆ:
ಅಂದು ದೂರದರ್ಶನದಲ್ಲಿ ತಮ್ಮ ಧ್ವನಿ ಮತ್ತು ಸುದ್ದಿ ನಿರೂಪಣೆಯಿಂದ ಜನಪ್ರಿಯರಾಗಿದ್ದ ಸರಳಾ ಮಹೇಶ್ವರಿ ಅವರು ಪಂಜಾಬ್ ನಲ್ಲಿ ಸಿಖ್ ಬಂಡುಕೋರರ ಮತ್ತು ಉಗ್ರರ ಅಟ್ಟಹಾಸದ ಕುರಿತ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಕೊಲ್ಲುವುದಾಗಿ ಬೆದರಿಕೆಯನ್ನು ಎದುರಿಸಿದ್ದರು.1991ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ನಡೆದಾಗ ಇಡೀ ದೇಶದ ಜನತೆಗೆ ಈ ಸುದ್ದಿಯನ್ನು ಪ್ರಸಾರ ಮಾಡಿದ್ದು ಇದೇ ಸರಳಾ ಮಹೇಶ್ವರಿ. 1997ರಲ್ಲಿ ಮದರ್ ತೆರೇಸಾ ನಿಧನರಾದ ಸಂದರ್ಭದಲ್ಲಿ ಸರಳಾ ಮಹೇಶ್ವರಿ ಅವರು ಪಶ್ಚಿಮಬಂಗಾಳಕ್ಕೆ ತೆರಳಿ ಅಂತ್ಯ ಸಂಸ್ಕಾರದ ಸುದ್ದಿಯನ್ನು ಪ್ರಸಾರ ಮಾಡಿದ್ದರು.













































