ಬಿಜೆಪಿ ವಿರುದ್ಧ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರವಾಲ್, ಪಂಜಾಬ್ ಸಿಎಂ ಮಾನ್ ವಾಗ್ದಾಳಿ
ನವದೆಹಲಿ/ ಚಂಡೀಗಢ: ಆಮ್ ಆದ್ಮ ಪಕ್ಷವನ್ನುತೊರೆಯುವುದಾಗಿ ಘೋಷಿಸಿದ ಬಳಿಕ ರಾಜ್ಯಸಭಾ ಸಂಸದರಾದ ರಾಘವ್ ಚಡ್ಡಾ, ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಶುಕ್ರವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿಯಾಗಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.ರಾಘವ್ ಚಡ್ಡಾ ಸೇರಿ ಏಳು ಮಂದಿ ರಾಜ್ಯಸಭಾ ಸಂಸದರು ಎಎಪಿ (ಆಮ್ ಆದ್ಮ ಪಕ್ಷ ) ತೊರೆದು ಬಿಜೆಪಿಗೆ ಸೇರ್ಪಡೆ ವಿಚಾರ ಘೋಷಿಸಿದ ಬಳಿಕ ಬಿಜೆಪಿ ಕಚೇರಿಗೆ ಆಗಮಿಸಿದ ಮೂವರು ರಾಜ್ಯಸಭಾ ಸದಸ್ಯರಾದ ರಾಘವ್ ಚಡ್ಡಾ, ಅಶೋಕ್ ಮಿತ್ತಲ್ ಮತ್ತು ಸಂದೀಪ್ ಪಾಠಕ್ ಅವರನ್ನು ಅಧ್ಯಕ್ಷ ನಿತಿನ್ ಹೂಗುಚ್ಛ, ಸಿಹಿ ನೀಡಿ ಸ್ವಾಗತಿಸಿದರು. ಇನ್ನುಳಿದ ನಾಲ್ವರು ಸಂಸದರಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಸ್ವಾತಿ ಮಲಿವಾಲ್, ರಾಜೀಂದರ್ ಗುಪ್ತಾ ಹಾಗೂ ವಿಕ್ರಮ್ ಸಾಕ್ಷಿ ಬಿಜೆಪಿಗೆ ಶೀಘ್ರವೇ ಸೇರ್ಪಡೆಯಾಗಲಿದ್ದಾರೆ.
ಚಡ್ಡಾ ಸಹಿತ 7 ಮಂದಿ ಬಿಜೆಪಿಗೆ:
ಬಿಜೆಪಿ ಸೇರ್ಪಡೆಗಿಂತ ಮೊದಲು ಆಮ್ ಆದ್ಮ ಪಕ್ಷದ ರಾಜ್ಯಸಭಾ ಸದಸ್ಯರಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್ ಸೇರಿದಂತೆ ಪಕ್ಷದ ಏಳು ಸದಸ್ಯರು ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಶುಕ್ರವಾರ ಘೋಷಿಸಿದ್ದಾರೆ. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಚಡ್ಡಾ, ಎಎಪಿಯ 10 ಮಂದಿ ರಾಜ್ಯಸಭಾ ಸದಸ್ಯರಲ್ಲಿ ಏಳು ಮಂದಿ ಬಿಜೆಪಿ ಸೇರಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ದಿಢೀರ್ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಆಮ್ ಆದ್ಮ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಬಿಜೆಪಿ ಮತ್ತೊಮ್ಮೆ ಪಂಜಾಬಿಗಳಿಗೆ ದ್ರೋಹ ಬಗೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಕ್ಷ ಒಡೆಯಲು ಬಿಜೆಪಿ ಪ್ರಯತ್ನ: ಸಿಎಂ ಮಾನ್ಆಮ್ ಆದ್ಮ ಪಕ್ಷವನ್ನು (ಆಪ್) ತೊರೆದು ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಘೋಷಿಸಿದ ರಾಜ್ಯಸಭಾ ಸದಸ್ಯರು ದ್ರೋಹಿಗಳು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶುಕ್ರವಾರ ಟೀಕಿಸಿದ್ದಾರೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಮಾನ್, ಆಮ್ ಆದ್ಮ ಪಕ್ಷವನ್ನು ಒಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಪಂಜಾಬ್ ಜನತೆಗೆ ದ್ರೋಹ ಬಗೆದಿದೆ ಎಂದು ಆರೋಪಿಸಿದ್ದಾರೆ.’ಭಗವಂತ್ ಮಾನ್ ವಿರುದ್ಧ ಅವರಿಗೆ ಏನೂ ಸಿಗದಿದ್ದಾಗ, ಅವರು ಆಪ್ ಪಕ್ಷವನ್ನು ಒಡೆಯಲು ಪ್ರಯತ್ನಿಸಿದರು’ ಎಂದು ಹೇಳಿದ್ದಾರೆ. ಪಂಜಾಬ್‌ಗೆ ಹೂಡಿಕೆಗಳ ಆಕರ್ಷಿಸಲು ನೆದರ್ಲ್ಯಾಂಡ್ಸ್ ಮತ್ತು ಫಿನ್ಸೆಂಡ್‌ಗೆ ಒಂದು ವಾರ ಪ್ರವಾಸ ಕೈಗೊಂಡಿದ್ದ ಮಾನ್ ಶುಕ್ರವಾರ ಮರಳಿದ್ದಾರೆ.’ಪಂಜಾಬ್‌ನ ಜನ ಆಪ್ ಜೊತೆಗಿದ್ದಾರೆ. ಅವರು ಪಕ್ಷದ ಪರವಾಗಿ ದೃಢವಾಗಿ ನಿಂತಿದ್ದಾರೆ. ವ್ಯಕ್ತಿಗಿಂತ ಪಕ್ಷ ದೊಡ್ಡದು. ಪಕ್ಷ ತೊರೆದ 6-7 ಮಂದಿ ಇಡೀ ಪಂಜಾಬ್ ಆಗಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.ಎಎಪಿಯ ಪಂಜಾಬ್‌ನ ಮುಖ್ಯ ವಕ್ತಾರ ಬಲ್ಲೇಜ್ ಪನ್ನೂ, ಅರವಿಂದ ಕೇಜ್ರವಾಲ್ ನೇತೃತ್ವದ ಸಂಘಟನೆಯ ಶಕ್ತಿ ಕುಂದಿಸಲು, ಸಂಸತ್ತಿನಲ್ಲಿ ಅದರ ಧ್ವನಿಯನ್ನು ಅಡಗಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಘವ್ ಚಡ್ಡಾ ಮೂಲಕ ಎಎಪಿ ಸಂಸದರ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.











































