ಸಕ್ಕರೆ, ಉಪ್ಪು ಮತ್ತು ಸ್ಯಾಚುರೇಟೆಡ್ ಕೊಬ್ಬಿನಂಶ ಹೆಚ್ಚಿರುವ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ (Packaged Foods) ಮೇಲೆ ಮುಂಭಾಗದ ಎಚ್ಚರಿಕೆ ಲೇಬಲ್ (Front-of-pack warning labels) ಅಳವಡಿಸಲು ವಿಳಂಬ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಿದೆ.
ಸಾರ್ವಜನಿಕರ ಆರೋಗ್ಯದ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವ ನ್ಯಾಯಮೂರ್ತಿಗಳಾದ ಜಿ. ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು, ಅಂತಿಮ ನಿರ್ಧಾರ ಕೈಗೊಳ್ಳಲು ಒಕ್ಕೂಟ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದೆ. ಈ ಅವಧಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯವೇ ಮುಂದಿನ ನಿರ್ದೇಶನಗಳನ್ನು ನೀಡಲಿದೆ ಎಂದು ಸ್ಪಷ್ಟಪಡಿಸಿದೆ.
ಸಂವಿಧಾನದ ವಿಧಿ 21 ರ ಅಡಿಯಲ್ಲಿ ಆಹಾರ ಸುರಕ್ಷತೆ, ಪೋಷಕಾಂಶ ಹಾಗೂ ಸ್ಪಷ್ಟ ಮಾಹಿತಿಯನ್ನು ಪಡೆಯುವ ಹಕ್ಕು ನಾಗರಿಕರ ಜೀವಿಸುವ ಮತ್ತು ಆರೋಗ್ಯದ ಹಕ್ಕಿನ ಭಾಗವಾಗಿದೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ. ಭಾರತದಲ್ಲಿ ಅತಿಯಾಗಿ ಸಂಸ್ಕರಿಸಿದ ಆಹಾರಗಳ (Ultra-processed foods) ಬಳಕೆ ಹಾಗೂ ಬೊಜ್ಜಿನ ಸಮಸ್ಯೆ ಗಂಭೀರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕಾನೂನು ಹೋರಾಟ ಪ್ರಾಮುಖ್ಯತೆ ಪಡೆದುಕೊಂಡಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ಪ್ರಕಾರ, ಶೇಕಡ 24 ರಷ್ಟು ಮಹಿಳೆಯರು ಮತ್ತು ಶೇಕಡ 23 ರಷ್ಟು ಪುರುಷರು ಅತಿಯಾದ ತೂಕ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗ್ರಾಹಕರು ಪ್ಯಾಕ್ ಹಿಂಭಾಗದಲ್ಲಿರುವ ಸಂಕೀರ್ಣ ಪೋಷಕಾಂಶಗಳ ಪಟ್ಟಿಯನ್ನು ಓದಿ ಅರ್ಥೈಸಿಕೊಳ್ಳುವ ಬದಲು, ಪ್ಯಾಕ್‌ನ ಮುಂಭಾಗದಲ್ಲೇ ಇರುವ ಸ್ಪಷ್ಟ ಬಣ್ಣ, ಸಂಕೇತ ಅಥವಾ ಎಚ್ಚರಿಕೆಗಳ ಮೂಲಕ ಆಹಾರದ ಗುಣಮಟ್ಟವನ್ನು ಸುಲಭವಾಗಿ ಗ್ರಹಿಸಲು ಈ ವ್ಯವಸ್ಥೆ (FOPL) ನೆರವಾಗಲಿದೆ.
ಆರ್ಥಿಕ ಸಮೀಕ್ಷೆ 2025-26 ರ ವರದಿಯ ಪ್ರಕಾರ, 2009 ರಿಂದ 2023 ರ ನಡುವೆ ಭಾರತದಲ್ಲಿ ಸಂಸ್ಕರಿಸಿದ ಆಹಾರ ಮಾರುಕಟ್ಟೆಯು ಶೇಕಡ 150 ಕ್ಕೂ ಹೆಚ್ಚು ಬೆಳವಣಿಗೆ ಕಂಡಿದೆ. ವಿಶೇಷವಾಗಿ ಮಕ್ಕಳಲ್ಲಿ ಬೊಜ್ಜಿನ ಪ್ರಮಾಣ ಹೆಚ್ಚುತ್ತಿರುವುದಕ್ಕೆ ಕಳಪೆ ಆಹಾರ ಶೈಲಿ ಮತ್ತು ಸಕ್ರಿಯ ಜೀವನಶೈಲಿಯ ಕೊರತೆಯೇ ಕಾರಣ ಎಂದು ಸರ್ಕಾರಿ ದತ್ತಾಂಶಗಳು ಬೆಟ್ಟುಮಾಡುತ್ತಿವೆ. ಫೆಬ್ರವರಿ 2026 ರಲ್ಲೇ ಎಫ್‌ಎಸ್‌ಎಸ್‌ಎಐಗೆ (FSSAI) ಈ ಕುರಿತು ಸೂಚನೆ ನೀಡಿದ್ದ ಸುಪ್ರೀಂ ಕೋರ್ಟ್, ಜಾಗತಿಕ ಮಟ್ಟದ ಮಾದರಿಯನ್ನು ಭಾರತದಲ್ಲೂ ಜಾರಿಗೆ ತರಲು ಸರ್ಕಾರ ಏಕೆ ಹಿಂಜರಿಯುತ್ತಿದೆ ಎಂದು ಪ್ರಶ್ನಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಆಧಾರದ ಮೇಲೆ ನಡೆಯುತ್ತಿರುವ ಈ ವಿಚಾರಣೆಯಲ್ಲಿ, ಸಾರ್ವಜನಿಕ ಆರೋಗ್ಯದ ರಕ್ಷಣೆಗಾಗಿ ಕೇಂದ್ರ ಸರ್ಕಾರವು ತಕ್ಷಣವೇ ತಜ್ಞರೊಂದಿಗೆ ಸಮಾಲೋಚಿಸಿ ಸ್ಪಷ್ಟ ಲೇಬಲ್ ವಿನ್ಯಾಸವನ್ನು ಅಂತಿಮಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
















































