ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ವಿವಾದ ಈಗ ಮತ್ತೊಮ್ಮೆ ತೀವ್ರಗೊಂಡಿದೆ.ತಮಿಳುನಾಡಿಗೆ ನೀರು ಹರಿಸುವಂತೆ ನೀಡಲಾಗಿದ್ದ ಹಿಂದಿನ ಆದೇಶಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮಂಗಳವಾರ ಬೆಂಬಲ ನೀಡಿದೆ. ಇದರಿಂದಾಗಿ ಇನ್ನು ಮುಂದಿನ 15 ದಿನಗಳ ಕಾಲ ಪ್ರತಿದಿನ 9,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕಾದ ಪರಿಸ್ಥಿತಿ ಕರ್ನಾಟಕಕ್ಕೆ ಎದುರಾಗಿದೆ.ದೆಹಲಿಯಲ್ಲಿ ನಡೆದ CWMA ಸಭೆಯಲ್ಲಿ ಎರಡೂ ರಾಜ್ಯಗಳ ಅಧಿಕಾರಿಗಳು ತಮ್ಮ ತಮ್ಮ ವಾದಗಳನ್ನು ಮಂಡಿಸಿದರು. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ನೀರು ಹರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಸಭೆಯ ಬಳಿಕ ಕರ್ನಾಟಕದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಮಾತನಾಡಿ, ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆದಿದ್ದು, ಹಿಂದಿನ ದಿನ CWRC ನೀಡಿದ್ದ ಶಿಫಾರಸನ್ನು ಜಾರಿಗೊಳಿಸುವಂತೆ CWMA ತಿಳಿಸಿದೆ ಎಂದು ಹೇಳಿದರು.
28 ಟಿಎಂಸಿ ಬೇಡಿಕೆಗೆ ಸಿಗದ ಒಪ್ಪಿಗೆ
ತಮಿಳುನಾಡು ತನ್ನ ಅಗತ್ಯಕ್ಕಾಗಿ 28 ಟಿಎಂಸಿ ನೀರು ನೀಡುವಂತೆ ಬೇಡಿಕೆ ಮುಂದಿಟ್ಟಿತ್ತು. ಆದರೆ ಈ ಸಂಪೂರ್ಣ ಬೇಡಿಕೆಯನ್ನು CWMA ಒಪ್ಪಿಕೊಂಡಿಲ್ಲ. ಬದಲಾಗಿ CWRC ಈಗಾಗಲೇ ಸೂಚಿಸಿದ್ದ ಪ್ರಮಾಣದಲ್ಲೇ ನೀರು ಹರಿಸುವ ನಿರ್ಧಾರವನ್ನು ಮುಂದುವರಿಸಿದೆ.
ಮುಂದಿನ 15 ದಿನಗಳ ಅವಧಿಯಲ್ಲಿ ಪ್ರತಿದಿನ 9,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಲಾಗಿದ್ದು, ರಾಜ್ಯದ ಜಲಾಶಯಗಳಲ್ಲಿನ ನೀರಿನ ಲಭ್ಯತೆ ಮತ್ತು ಮುಂದಿನ ಮಳೆಯ ನಿರೀಕ್ಷೆಯನ್ನೂ ಪರಿಗಣಿಸಲಾಗಿದೆ.
ಸರ್ಕಾರದ ಮುಂದಿನ ಹೆಜ್ಜೆ ಏನು?
CWMAಯ ಇತ್ತೀಚಿನ ನಿರ್ಧಾರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತರಲಾಗುವುದು ಎಂದು ಗೌರವ್ ಗುಪ್ತಾ ತಿಳಿಸಿದ್ದಾರೆ. ಆದೇಶದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ಸರ್ಕಾರದ ಕಾನೂನು ತಂಡ ಪರಿಶೀಲಿಸಿ ತೀರ್ಮಾನಿಸಲಿದೆ ಎಂದಿದ್ದಾರೆ.















































