ಮಂಗಳೂರು: ಮುಂಬರುವ ಹಬ್ಬಗಳ ಸಂದರ್ಭದಲ್ಲಿ ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಸಾರ್ವಜನಿಕ ಕಾರ್ಯಕ್ರಮ ಹಾಗೂ ಮೆರವಣಿಗೆಗಳಿಗೆ ಕಟ್ಟುನಿಟ್ಟಿನ ಷರತ್ತುಬದ್ಧ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಜವಾಬ್ದಾರಿ ಮತ್ತು ಅನುಮತಿ ಕಡ್ಡಾಯ:ಕಾರ್ಯಕ್ರಮ ಆಯೋಜಿಸುವವರು ಕಡ್ಡಾಯವಾಗಿ ಪೊಲೀಸ್ ಮತ್ತು ಸಂಬಂಧಿತ ಇಲಾಖೆಗಳಿಂದ ಲಿಖಿತ ಅನುಮತಿ ಪಡೆಯಬೇಕು. ಅರ್ಜಿಯೊಂದಿಗೆ ಆಯೋಜಕರ ಹೆಸರು ಮತ್ತು ಸಂಪರ್ಕ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದ್ದು, ಯಾವುದೇ ನಿಯಮ ಉಲ್ಲಂಘನೆ ಅಥವಾ ಅಹಿತಕರ ಘಟನೆ ಸಂಭವಿಸಿದಲ್ಲಿ ನಿಯೋಜಿತ ವ್ಯಕ್ತಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ರಾತ್ರಿ 11.30ರ ಬಳಿಕ ಮೆರವಣಿಗೆ ಇಲ್ಲಪೊಲೀಸ್, ಇತರ ಸಂಬಂಧಿತ ಇಲಾಖೆಗಳ ಲಿಖಿತ ಅನುಮತಿ ಇಲ್ಲದೆ ಕಾರ್ಯಕ್ರಮ ಅಥವಾ ಮೆರವಣಿಗೆ ನಡೆಸಬಾರದು. ರಾತ್ರಿ 11.30ರ ಬಳಿಕ ಮೆರವಣಿಗೆ ನಡೆಸಲು ಅನುಮತಿಯಿಲ್ಲ. ಖಾಸಗಿ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಆ ಸ್ಥಳದ ಮಾಲಕರಿಂದ “ನಿರಾಕ್ಷೇಪಣ ಪತ್ರ’ ಪಡೆಯಬೇಕು. ಅನುಮತಿ ಪತ್ರದಲ್ಲಿ ನೀಡಿದ ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು.
ಸುರಕ್ಷತೆ ಮತ್ತು ನಿಗಾ:ಆಯೋಜಕರು ಸ್ಥಳದಲ್ಲಿ 2487 ಭದ್ರತಾ ಸಿಬಂದಿ ನಿಯೋಜಿಸಬೇಕು. ಸಿಸಿ ಕೆಮರಾ ಅಳವಡಿಸ ಬೇಕು, 30 ದಿನಗಳ ಕಾಲ ದೃಶ್ಯಾವಳಿ ಸಂಗ್ರಹಿಸಬೇಕು. ಜನಸಮೂಹ ನಿಯಂತ್ರಣಕ್ಕೆ ಸ್ವಯಂಸೇವಕರನ್ನು ನಿಯೋಜಿಸಿಕೊಳ್ಳಬೇಕು. ಪೆಂಡಾಲು, ಮೆರವಣಿಗೆಯಲ್ಲಿ ಬಳಸುವ ವಾಹನಗಳು ಇತ್ಯಾದಿಗಳ ಎತ್ತರಗಳು ಕಾನೂನು ಅಥವಾ ಮೆಸ್ಕಾಂ ಮಾನದಂಡ ಮೀರುವಂತಿರಬಾರದು.
ಕಾರ್ಯಕ್ರಮ ನಡೆಯುವ ಸ್ಥಳಗಳು, ಮೆರವಣಿಗೆಯಲ್ಲಿ ಅಗ್ನಿ ನಂದಕಗಳು, ಆ್ಯಂಬುಲೆನ್ಸ್, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಟ್ಟುಕೊಳ್ಳುವುದು ಕಡ್ಡಾಯವಾಗಿವೆ.ಮಹಿಳೆಯರನ್ನು ಚುಡಾಯಿಸುವುದು, ಹಿಂಬಾಲಿಸುವುದು, ಲೈಂಗಿಕ ಕಿರುಕುಳ ಮೊದಲಾದ ಅಪರಾಧ ನಡೆಯದಂತೆ ನೋಡಿಕೊಳ್ಳಬೇಕು. ಯಾವುದೇ ಬ್ಯಾನರ್ ಅಥವಾ ಪ್ಲೆಕ್ಸ್ ಅನ್ನು ಸಂಬಂಧಿತ ಪ್ರಾಧಿಕಾರದಿಂದ ಅನುಮತಿ ಇಲ್ಲದೆ ಹಾಕಬಾರದು. ಅನುಮತಿ ಪಡೆದು ಹಾಕಿದರೂ ಕಾರ್ಯಕ್ರಮ ಮುಗಿದ ತತ್‌ಕ್ಷಣ ಅವುಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಬೇಕು.ಕಾರ್ಯಕ್ರಮಗಳು, ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ಆಯುಧಗಳ ಪ್ರದರ್ಶನ ಮತ್ತು ಸಾಗಾಟಕ್ಕೆ ಅವಕಾಶವಿಲ್ಲ. ಪ್ರಾಣಿಗಳನ್ನು ಬಳಸಲು ಮುಂಚಿತ ಅನುಮತಿ ಪಡೆಯಬೇಕು ಮತ್ತು ಪ್ರಾಣಿ ಹಕ್ಕುಗಳ ನಿಯಮ ಪಾಲನೆ ಕಡ್ಡಾಯ.
ಡಿಜೆ ಸಂಪೂರ್ಣ ನಿಷೇಧ:
ಡಿ.ಜೆ., ಜೋರಾದ ಸ್ಪೀಕರ್ ಅಥವಾ ಈ ರೀತಿಯ ಯಾವುದೇ ಧ್ವನಿವರ್ಧಕ ಬಳಕೆ ಸಂಪೂರ್ಣ ನಿಷೇಧ.ಧ್ವನಿವರ್ಧಕ ಬಳಕೆಗೆ ಅನುಮತಿ ಅಗತ್ಯ. ರಾತ್ರಿ 10ಕ್ಕೆ ಅವುಗಳನ್ನು ಸ್ಥಗಿತಗೊಳಿಸಬೇಕು. ವಾಣಿಜ್ಯ ಪ್ರದೇಶ 65 ಡೆಸಿಬಲ್, ವಾಸಸ್ಥಳ – 55 ಡೆಸಿಬಲ್, ನಿಶ್ಯಬ್ದ ವಲಯ – 50 ಡೆಸಿಬಲ್ ಮಿತಿಯ ಒಳಗಿರಬೇಕು.ಡೋನ್‌ಗೆ ಅನುಮತಿ ಕಡ್ಡಾಯ:ಮುಂಚಿತ ಅನುಮತಿ ಪಡೆಯದೆ ಯಾವುದೇ ಡೋನ್ ಅಥವಾ ಮಾನವರಹಿತ ವೈಮಾನಿಕ ವಾಹನ (ವಿಎಯು) ಬಳಸುವುದು ನಿಷೇಧಿಸಲಾಗಿದೆ. ಈ ಯಾವುದೇ ಷರತ್ತುಗಳ ಉಲ್ಲಂಘನೆಯಾದಲ್ಲಿ ಕಠಿನ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಉಭಯ ಇಲಾಖೆಗಳ ಪ್ರಕಟನೆ ತಿಳಿಸಿದೆ.
ದ್ವೇಷ ಭಾಷಣ ಮತ್ತು ಸಾಮಾಜಿಕ ಸಾಮರಸ್ಯ:
ಧಾರ್ಮಿಕ ವಿರೋಧಿ ಘೋಷಣೆಗಳು, ದ್ವೇಷ ಭಾಷಣ ನಿಷೇಧಿಸಲಾಗಿದೆ. ಯಾವುದೇ ಘೋಷಣೆಗಳು, ಭಿತ್ತಿಪತ್ರಗಳು, ಪ್ರದರ್ಶನಗಳು ಅಥವಾ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ವಿಷಯಗಳು ಯಾವುದೇ ಧರ್ಮದ ವಿರೋಧ ಅಥವಾ ದ್ವೇಷವನ್ನು ಉಂಟುಮಾಡುವ ರೀತಿಯಲ್ಲಿರಬಾರದು.
















































