ಬಹುದಿನಗಳ ಕನಸು ಈಡೇರಿಕೆ | ಮಂಗಳೂರು-ಕಬಕ-ಪುತ್ತೂರು ರೈಲು ಸುಬ್ರಹ್ಮಣ್ಯ ಕ್ಕೆ ವಿಸ್ತರಣೆ | ಸಚಿವ ಸೋಮಣ್ಣ ಹಸಿರು ನಿಶಾನೆ

Picture of Savistara

Savistara

Bureau Report

ಮಂಗಳೂರು: ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲಿನ ಸುಬ್ರಹ್ಮಣ್ಯ ರೋಡ್ ನಿಲ್ದಾಣದವರೆಗಿನ ವಿಸ್ತರಣೆಗೆ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಶನಿವಾರ ಕೇಂದ್ರ ರೈಲ್ವೇ ಇಲಾಖೆಯ ರಾಜ್ಯ ಸಚಿವರಾದ ವಿ. ಸೋಮಣ್ಣ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.ಮುಂದಿನ ತಿಂಗಳಲ್ಲಿ ವಂದೇ ಭಾರತ್ ಸ್ವೀಪರ್ ರೈಲು ಭೋಗಿಗಳು ಬರಲಿದ್ದು, ಒಂದನ್ನು ಮಂಗಳೂರಿಗೂ

ನೀಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಕರಾವಳಿ ಭಾಗದ ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದ ಅಭಿವೃದ್ಧಿ ಕಾರ್ಯ 19 ಕೋಟಿ ರೂ.ಗಳಲ್ಲಿ ನಡೆಯುತ್ತಿದ್ದು, ಈಗಾಗಲೇ ಶೇ. 85ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆಗಸ್ಟ್‌ನೊಳಗೆ ಸಂಪೂರ್ಣ ಕಾಮಗಾರಿ ಮುಕ್ತಾಯವಾಗಲಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ಮಾಸ್ಟ‌ರ್ ಪ್ಲಾನ್ ತಯಾರಾಗಿದ್ದು, ಟೆಂಡರ್ ಕರೆದು ಎರಡು ವರ್ಷಗಳಲ್ಲಿ ಲೋಕಾರ್ಪಣೆಯಾಗಲಿದೆ ಎಂದವರು ಹೇಳಿದರು.

ಸುಬ್ರಹ್ಮಣ್ಯ ನಿಲ್ದಾಣದಲ್ಲಿ ಅಮೃತ್ ಭಾರತ್ ಯೋಜನೆಯಡಿ 24 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ರೈಲು ಸುರಕ್ಷತೆಯ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆಗಳು ಆಗಿದ್ದು, ಅವಘಡಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕಡಿಮೆ ಆಗಿದೆ. ಹಾಗಿದ್ದರೂ, ಪ್ರಧಾನಿ ನರೇಂದ್ರ ಮೋದಿಯವರು ಕವಚ್ ಎನ್ನುವ ಹೊಸ ಯೋಜನೆ ಯನ್ನು ಸಮರ್ಪಣೆ ಮಾಡಿದ್ದಾರೆ. 10,000 ಕಿ.ಮೀ. ವ್ಯಾಪ್ತಿಯಲ್ಲಿ ಈ ಕವಚ್ ಅಳವಡಿಕೆಯಾಗುತ್ತಿದ್ದು, ಕರ್ನಾಟಕದಲ್ಲಿ 1800 ಕಿ.ಮೀ. ವ್ಯಾಪ್ತಿಯಲ್ಲಿ ಕವಚ್ ಒಂದೂವರೆ ವರ್ಷದಲ್ಲಿ ಕಾರ್ಯಾರಂಭಿಸಲಿದೆ.ಕರ್ನಾಟಕದ ರೈಲ್ವೇ ಅಭಿವೃದ್ಧಿಯಲ್ಲಿ ಹೊಸ ಶಖೆ ಆರಂಭವಾಗಿದೆ. ಮೇಲೇತುವೆ ಹಾಗೂ ಕೆಳಸೇತುವೆಗಳ ನಿರ್ಮಾಣಕ್ಕೆ ಕೇಂದ್ರ ಸರಕಾರವೇ ಸಂಪೂರ್ಣ ಅನುದಾನ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ ಎಂದು ಸಚಿವ ಸೋಮಣ್ಣ ವಿವರ ನೀಡಿದರು.ವಿಧಾನಸಭೆ ಸ್ಪೀಕ‌ರ್ ಯು.ಟಿ.ಖಾದರ್ ಮಾತನಾಡಿ, ನಗರ ಅಭಿವೃದ್ಧಿಗೆ ಸಂವಹನದ ಜತೆಗೆ ಸಂಪರ್ಕ ವ್ಯವಸ್ಥೆ ಉತ್ತಮವಾಗಿರಬೇಕು. ಈ ನಿಟ್ಟಿನಲ್ಲಿ ಪುಣ್ಯ ಕ್ಷೇತ್ರವಾದ ಸುಬ್ರಹ್ಮಣ್ಯಕ್ಕೆ ರೈಲು ಸಂಚಾರ ವಿಸ್ತರಿಸುವ ಮೂಲಕ ಉತ್ತಮ ಕಾರ್ಯವಾಗಿದೆ ಎಂದರು.

ಸಂಸದ ಬ್ರಿಜೇಶ್ ಚೌಟ ಮಾತನಾಡಿ, ಒಂದು ಕಾಲದಲ್ಲಿ ಮಂಗಳೂರು ಸುಬ್ರಹ್ಮಣ್ಯ ನಡುವೆ ಓಡಾಡುತ್ತಿದ್ದ ರೈಲನ್ನು ಮತ್ತೆ ಪುನರಾರಂಭಿಸಲು ಹೋರಾಟ ಮಾಡಬೇಕಾದ ಪರಿಸ್ಥಿತಿ ದ.ಕ.ಜಿಲ್ಲೆಯ ಜನರದ್ದಾಗಿತ್ತು. ಹೊಸ ರೈಲುಗಳು ಜಿಲ್ಲೆಗೆ ಬರುವುದು ದುಸ್ತರ ಎನ್ನುವ ಸಂದರ್ಭದಲ್ಲಿಯೇ ಮಂಗಳೂರು ಕಬಕ ಪುತ್ತೂರು ಪ್ಯಾಸೆಂಜ‌ರ್ ರೈಲನ್ನು ಸುಬ್ರಹ್ಮಣ್ಯಕ್ಕೆ ವಿಸ್ತರಿಸಲು ಸಚಿವ ಸೋಮಣ್ಣ ರವರ ಮುತುವರ್ಜಿಯಿಂದ ಸಾಧ್ಯವಾಗಿದೆ ಎಂದರು.ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಭಗೀರಥಿ ಮುರಳ್ಯ, ಮಾಜಿ ಶಾಸಕರಾದ ಸಂಜೀವ ಮಠಂದೂರು, ನಾಗರಾಜ ಶೆಟ್ಟಿ, ಪಾಲ್‌ಫಾಟ್ ವಿಭಾಗ ಡಿಆರ್‌ಎಂ ಅರುಣ್ ಕುಮಾ’ ಚತುರ್ವೇದಿ ಮೊದಲಾದವರು.

[t4b-ticker]
error: Content is protected !!