ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಕುರಿತು ಮಾತನಾಡಿದ್ದಾರೆ.
ದಾವಣಗೆರೆ : ಯಡಿಯೂರಪ್ಪ ಪಕ್ಷ ಬಿಟ್ಟು ಹೋದವರು, ಮತ್ಯಾಕೆ ಬಂದರೋ ಗೊತ್ತಿಲ್ಲ. ಅಲ್ಲದೆ ಕಾಂಗ್ರೆಸ್, ಜೆಡಿಎಸ್ ಪಕ್ಷದ ಮನೆ ಬಾಗಿಲು ಬಡಿದಿದ್ದರು ಎಂದು ಮಾಜಿ ಸಚಿವ ಅರವಿಂದ್ ಲಿಂಬಾವಳಿ ತುಂಬಿದ ಸಭೆಯಲ್ಲಿ ವಾಗ್ದಾಳಿ ನಡೆಸಿದರು.ನಗರದ ರೇಣುಕಾ ಮಂದಿರದಲ್ಲಿ ನಡೆಯುತ್ತಿರುವ ಮಾಜಿ ಸಂಸದ ಜಿ. ಎಂ. ಸಿದ್ದೇಶ್ವರ ಅವರ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಕಾಂಗ್ರೆಸ್, ಜೆಡಿಎಸ್ ಪಕ್ಷದ ಮನೆ ಬಾಗಿಲು ಬಡಿದಿದ್ದಾಗ ಅದನ್ನು ತಡೆದಿದ್ದು ಮಾಜಿ ಸಂಸದರಾದ ಜಿ. ಎಂ. ಸಿದ್ದೇಶ್ವರ್ ಅವರು ಎಂದರು.ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ, ಏನೇ ಬಂದರೂ ನೋಡಿಕೊಳ್ತಿನಿ ಅಂದೋರು ಜಿ. ಎಂ. ಸಿದ್ದೇಶ್ವರ್, ರವೀಂದ್ರನಾಥ್ ಬರ್ತ್ ಡೇಗೆ ಬರ್ತಿರಾ, ಸಿದ್ದೇಶ್ವರ್ ಬರ್ತ್ ಡೇಗೆ ಬರೋಕೆ ಆಗಲ್ವಾ ಯಡಿಯೂರಪ್ಪನವರೇ?. ಪಕ್ಷ ಕಟ್ಟಿದ ಮಹಾನ್ ನಾಯಕ ಸಿದ್ದೇಶ್ವರ್ರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ. ಆರು ಬಾರಿ ಎಂಪಿ ಸ್ಥಾನಕ್ಕೆ ಪ್ರತಿನಿಧಿಸೋದು ಸುಲಭದ ಮಾತಲ್ಲ. ಜಿ. ಎಂ ಸಿದ್ದೇಶ್ವರ್ ಕುಟುಂಬ ಆ ಕೆಲಸ ಮಾಡಿದೆ ಎಂದು ಹೇಳಿದ್ರು.
ಮೊದಲು ಬಿಜೆಪಿಗೆ ಅತೀ ಹೆಚ್ಚು ಸೀಟು ಬಂದಾಗ ಪಕ್ಷದ ಕಚೇರಿ ಇರಲಿಲ್ಲ :
ಮೊದಲು ಬಿಜೆಪಿಗೆ ಅತೀ ಹೆಚ್ಚು ಸೀಟು ಬಂದಾಗ ಪಕ್ಷದ ಕಚೇರಿ ಇರಲಿಲ್ಲ. ಆಗ ಬೆಂಗಳೂರಿನಲ್ಲಿ ಜಾಗ ಕೊಟ್ಟವರು ಸಿದ್ದೇಶ್ವರ್. ಸಮ್ಮಿಶ್ರ ಸರ್ಕಾರ ರಚನೆ ವೇಳೆ ಸಾಕಷ್ಟು ಸಮಸ್ಯೆ ಇತ್ತು. ಅದನ್ನು ಬಗೆಹರಿಸಿದ್ದು ಸಿದ್ದೇಶ್ವರ್. ಅವರು ಬಿಜೆಪಿಗೆ ಎಲ್ಲ ರೀತಿ ಸಹಕಾರ ಮಾಡಿದ್ದಾರೆ. ಯಡಿಯೂರಪ್ಪ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಕದ ತಟ್ಟಿದ್ದಾಗ ಈ ವೇಳೆ ಅವರನ್ನು ಸಿಎಂ ಮಾಡುವ ವಾಗ್ದಾನ ಮಾಡಿದ್ದು ಸಿದ್ದೇಶ್ವರ್ ಎಂದು ಹೇಳಿದರು.ಬಿಎಸ್ವೈಗೆ ವಾಗ್ದಾನ ಮಾಡಿ ಶ್ರಮಿಸಿದ್ದು ಸಿದ್ದೇಶ್ವರ್. ರವಿಂದ್ರನಾಥ್ ಸಚಿವ ಆಗಿದ್ದು ಸಿದ್ದೇಶ್ವರ್ ಅವರಿಂದ. ಬಿಎಸ್ವೈ ಹುಟ್ಟುಹಬ್ಬಕ್ಕೆ ಹೋಗಿದ್ದ ರವೀಂದ್ರನಾಥ್ ಇವತ್ತು ಸಿದ್ದೇಶ್ವರ್ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಬರ್ತಾ ಇಲ್ಲ. ಸಹೋದರನಂತೆ ಮತ್ತು ಉತ್ತಮ ಸ್ನೇಹಿತನಂತೆ ಇದ್ದವರನ್ನು ತುಂಬಾ ಕೆಟ್ಟದಾಗಿ ನಡೆಸಿಕೊಂಡ್ರಿ. ಸದಾ ಗೆಲ್ಲುತ್ತಾ ಬಂದ ಲೋಕಸಭಾ ಕ್ಷೇತ್ರ ದಾವಣಗೆರೆ. ಇಲ್ಲಿ ಪಕ್ಷದಲ್ಲಿ ಸಮಸ್ಯೆ ಎದ್ದ ವೇಳೆ ಪ್ರತಿ ಹಂತದಲ್ಲೂ ನಾನು ಬಂದಿದ್ದೆ. ಮಧ್ಯ ಕರ್ನಾಟಕದ ಬಿಜೆಪಿ ಸಂಘಟನೆ ಸಿದ್ದೇಶ್ವರ್ ಅವರಿಂದ ಆಗಿದೆ ಎಂದು ಲಿಂಬಾವಳಿ ತಿಳಿಸಿದ್ರು.
ಪಕ್ಷ ವಿರೋಧಿ ಕೆಲಸ ಮಾಡುವವರ ವಿರುದ್ಧ ಕ್ರಮ : ಗಾಯತ್ರಿ ಸಿದ್ದೇಶ್ವರ್ ಅವರನ್ನು ಅಭ್ಯರ್ಥಿಯಾಗಿ ಪಕ್ಷ ಆಯ್ಕೆ ಮಾಡಿತ್ತು. ಸಿದ್ದೇಶ್ವರ್ ಅವರಿಗಿಂತ ಹೆಚ್ಚಿನ ಅಂತರದಲ್ಲಿ ಅವರು ಗೆಲ್ಲಬೇಕಿತ್ತು. ಮುಂದಿನ ದಿನದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪಕ್ಷ ವಿರೋಧಿ ಕೆಲಸ ಮಾಡುವವರ ವಿರುದ್ಧ ಕ್ರಮದ ಕೂಗು ಕೇಳುತ್ತಿದೆ ಎಂದು ಹೇಳಿದರು.ಹೊಂದಾಣಿಕೆ ರಾಜಕಾರಣದ ವಿರುದ್ಧ ಕ್ರಮ ಆಗಬೇಕು ಎಂದು ಇಲ್ಲಿಯವರೇ ಹೇಳ್ತಾರೆ. ದಾವಣಗೆರೆ ಮಾತ್ರ ಅಲ್ಲ, ಶಿಕಾರಿಪುರದಲ್ಲೂ ಗೆಲ್ಲಲು ಸಿದ್ದೇಶ್ವರ್ ಕಾರಣ. ಇದನ್ನು ಸ್ವಂತ ಅನಂತಕುಮಾರ್ ಹೇಳ್ತಾ ಇದ್ದರು. ಸಿದ್ದೇಶ್ವರ್ ಅವರಿಗೆ ಕೇಂದ್ರದ ನಾಯಕರ ಜೊತೆ ಒಡನಾಟ ಅದ್ಭುತವಾಗಿದೆ. ಅದನ್ನೆಲ್ಲ ಬಳಸಿಕೊಂಡು ಪಕ್ಷ ಮುನ್ನಡೆಸಿ ಎಂದರು.
ಗ್ರಹಣ ಹಿಡಿದಿತ್ತು, ಈಗ ಬಿಡ್ತು ಎಂದು ರವೀಂದ್ರನಾಥ್ ಹೇಳಿದ್ದಾರೆ. ಇವರು ಸದ್ಯಕ್ಕೆ ಭೀಷ್ಮ ಅಂತೆ, ಮಹಾನಗರ ಪಾಲಿಕೆ ಅಧಿಕಾರಕ್ಕೆ ತರುವಲ್ಲಿ ಸಾಕಷ್ಟು ಶ್ರಮ ಹಾಕಿದ್ದೇನೆ. ಕೊನೆ ಬಾರಿ ಮೇಯರ್ ಸ್ಥಾನ ಯಾಕೆ ಬಿಟ್ಟುಕೊಟ್ರಿ.ದೊಡ್ಡ ಗುಂಪು ಇತ್ತಲ್ಲ, ಮಾಡಬೇಕಿತ್ತು ಎಂದು ಪ್ರಶ್ನಿಸಿದ್ರು.ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ರೈತರ ಮೇಲೆ ಸಿದ್ದೇಶ್ವರ್ಗೆ ಪ್ರೀತಿ ಬಂದಿದೆ ಎಂದಿದ್ದರು. ನಾನು ರೈತರ ಪರವಾಗಿ ಯಾವಾಗಲು ಇದ್ದೇನೆ. 12ನೇ ದಿನ ಭದ್ರಾ ನೀರು ಕೊಡುತ್ತೇವೆ ಎಂದಿದ್ದರು. ಈ ಹಿಂದೆ ಅವರು ಸೋತಾಗ ಎಸ್. ಎಸ್. ಮಲ್ಲಿಕಾರ್ಜುನ್ ಮುದೋಳ್ ಸೇರಿದ್ದರು. ನಾವು ಮತ್ತೆ ಗೆಲುವು ಸಾಧಿಸುತ್ತೇವೆ. ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ದೇಶ್ವರ್ ಸವಾಲು ಹಾಕಿದರು.ನಾನು ಕೆಜಿಪಿ ಕಟ್ಟಿಲ್ಲ, ಬ್ರಿಗೇಡ್ ಕಟ್ಟಿಲ್ಲ, ನಾನೇಕೆ ಕಾಂಗ್ರೆಸ್ಗೆ ಹೋಗಲಿ. ಭದ್ರಾ ನಾಲೆ ವಿಚಾರವಾಗಿ ಡಿಕೆಶಿ ಬಳಿ ಹೋಗಿದ್ದೆ. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕಿದೆ, ಮತ್ತೆ ಬರುತ್ತೇವೆ ಎಂದರು.














































