ಬೆಂಗಳೂರು: ಜಡ್ಡುಗಟ್ಟಿದ್ದ ಜಿಬಿಎ ಆಡಳಿತ ವ್ಯವಸ್ಥೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಚುರುಕು ಮುಟ್ಟಿಸಿದರು. ಜಿಬಿಎ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಹಿರಿಯ ಅಧಿಕಾರಿಗಳ ಜತೆಗೆ ಮೊದಲ ಬಾರಿಗೆ ಸಭೆ ನಡೆಸಿದರು. ರಾಜಧಾನಿ ತುಂಬೆಲ್ಲ ಅಲ್ಲಲ್ಲಿ ಕಾಣುವ ರಸ್ತೆಗುಂಡಿ ವಿಚಾರವಾಗಿ ಅಧಿಕಾರಿಗಳನ್ನು ಬೆಂಡೆತ್ತಿದರು. ಗುಂಡಿ ಇಲ್ಲದ ರಸ್ತೆ ನಿರ್ಮಾಣ ರಾಕೆಟ್ ಸೈನ್ಸಾ ಎಂದು ತರಾಟೆಗೆ ತೆಗೆದುಕೊಂಡರು.ಬಿಡಿಎ ಹಾಗೂ ಬಿಎಂಆರ್‌ಡಿಎ ಸೇರಿದಂತೆ ಬೆಂಗಳೂರು ಅಭಿವೃದ್ಧಿ ಖಾತೆ ಕೊಡಬೇಕೆಂದು ಕಳೆದ 12 ದಿನಗಳಿಂದ ಪಟ್ಟು ಹಿಡಿದಿದ್ದ ಕೃಷ್ಣಬೈರೇಗೌಡ ಅವರು ಸೋಮವಾರ ರಾತ್ರಿ ಎಐಸಿಸಿ ಪ್ರಧಾನ ಕಾರ್ಯ ದರ್ಶಿ ರಣದೀಪ್ ಸಿಂಗ್ ಸುಜೇÌವಾಲ ಅವರೊಂದಿಗೆ ಸಂಧಾನ ಮಾತುಕತೆ ನಡೆಸಿದ ಬಳಿಕ ಮಂಗಳವಾರ ಬೆಂಗಳೂರು ಅಭಿವೃದ್ಧಿ ಖಾತೆವಹಿಸಿಕೊಂಡು ಅಧಿಕಾರಿಗಳೊಂದಿಗೆ ಮೊದಲ ಸಭೆ ನಡೆಸಿದರು. ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯ ದರ್ಶಿ ತುಷಾರ್‌ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ ರಾವ್, ವಿಶೇಷ ಆಯುಕ್ತರಾದ ಮುನೀಶ್ ಮೌನ್ಸಿಲ್, ಸುಷ್ಮಾ ಗೋಡಬೋಲೆ, ಡಾ. ಕೆ. ಹರೀಶ್ ಕುಮಾರ್, ವೆಂಕಟ ಚಲಪತಿ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಒ ಕರೀಗೌಡ, ನಗರ ಪಾಲಿಕೆ ಆಯುಕ್ತ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ಜಿ. ಜಗದೀಶ್, ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ .ಅವರಿದ್ದ ಮೊದಲ ಸಭೆಯಲ್ಲೇ ಜಿಬಿಎ ಎಂಜಿನಿಯರ್‌ಸೇರಿದಂತೆ ಅಧಿಕಾರಿ ವರ್ಗದ ಮೈಚಳಿ ಬಿಡಿಸಿದರು.
ಭವಿಷ್ಯತ್ತಿನ ದೃಷ್ಟಿಕೋನ ಹೊಂದಿದ ಯೋಜನೆಗಳನ್ನು ರೂಪಿಸಿ ಬೆಂಗಳೂರು ಕಟ್ಟಿಎಂದರು. ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವುದು, ಗುಂಡಿ ಮುಚ್ಚುತ್ತಿದ್ದಂತೆ ಮತ್ತೂಂದು ಕಡೆ ಗುಂಡಿ ಬಾಯೆದರೆಯುವುದು ವಾಡಿಕೆಯಾಗಿಬಿಟ್ಟಿದೆ. ದಕ್ಷಿಣ ಭಾರತದ ಮಟ್ಟಿಗೆ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನ ರಸ್ತೆಗಳು ತೀರಾ ಕಳಪೆಯಾಗಿವೆ “ಇನ್ನುಂದೆ ಹಳೇ ಕಲ್ಲು ಹೊಸ ಬಿಲ್” ಎಂಬಂತೆ ರಸ್ತೆ ಗುಂಡಿ ಮುಚ್ಚುವ ತಾತ್ಕಾಲಿಕ ಪರಿಹಾರದ ಬದಲಾಗಿ ಅಧಿಕಾರಿಗಳು ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಖಡಕ್ ಸೂಚನೆ ನೀಡಿದರು.ಕೆಟ್ಟ ರಸ್ತೆಗಳ ಕಾರಣಕ್ಕೆ ಉಂಟಾಗುತ್ತಿರುವ ಜನರ ಬವಣೆ ನೀಗಬೇಕು. ಒಳ್ಳೆಯ ಕೆಲಸ ಮಾಡುವ ಅಧಿಕಾರಿಗಳ ಹಿಂದೆ ನಾನು ಎಂದಿಗೂ ಬೆಂಬಲವಾಗಿ ನಿಲ್ಲುತ್ತೇನೆ ಎಂದರು. ಗುಂಡಿಗಳು ಇಲ್ಲದೇ ರಸ್ತೆ ಮಾಡೋದಕ್ಕೆ ಆಗೋದಿಲ್ವಾ,. ಬೆಂಗಳೂರಿನ ರಸ್ತೆ ಮಾಡೋದು ಏನು ರಾಕೆಟ್ ಸೈನ್ಸಾ, ನೆರೆ ರಾಜ್ಯಗಳಲ್ಲಿ ಗುಂಡಿ ಇಲ್ಲದ ರಸ್ತೆಗಳನ್ನು ನೋಡಿ. ಸದಾ ಮಳೆ ಬೀಳುವಂತ ರಾಜ್ಯಗಳಲ್ಲೂ ರಸ್ತೆಗಳು ಚೆನ್ನಾಗಿ ಇವೆ. ಅಲ್ಲಿ ಬೇರೆ ಕ್ರಿಯಾಯೋಜನೆ (ಎಸ್ಟಿಮೇಟ್) ಇದೆಯಾ ಹೇಳಿ, ಇದ್ದರೆ ಹೇಳಿ ಎಂದು ಪ್ರಶ್ನೆ ಮಾಡಿದರು.
ಬೆಂಗಳೂರಿನಲ್ಲಿ ರಸ್ತೆ ಗುಂಡಿ ಉದ್ಯೋಗವಾಗಿ ಹೋಗಿದೆ. ಗುಂಡಿಗಳಿಲ್ಲದ ರಸ್ತೆ ಮಾಡಲು ನಿರ್ಮಾಣ ಮಾಡಲು ಆಗುವುದಿಲ್ಲವಾ,? ರಸ್ತೆ ನಿರ್ಮಾಣ ಅಷ್ಟು ಕಷ್ಟನಾ,. ಮೂಲದಲ್ಲೆ ಸಮಸ್ಯೆಗಳನ್ನು ಸರಿಪಡಿಸಿದರೆ ರಸ್ತೆ ಗುಂಡಿಗಳು ಸೃಷ್ಟಿಯಾಗುವುದಿಲ್ಲ.. ಆ ಕೆಲಸ ಏಕೆ ಮಾಡುತ್ತಿಲ್ಲ, ನಿಮಗೆ ಯಾಕೆ ಉತ್ತಮ ರಸ್ತೆ ಮಾಡೋದಕ್ಕೆ ಆಗುತ್ತಿಲ್ಲ. ನಿಮಗೆ ಏನಾದರೂ ಕಡಿಮೆ ಬಜೆಟ್ ಕೊಟ್ಟಿದ್ದೇವಾ ಎಂದು ಜಿಬಿಎ ಇಂಜಿನಿಯರ್ಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದ ಕೃಷ್ಣಬೈರೇಗೌಡ ಗ್ರೇಟರ್‌ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಇದುವರೆಗೆ ಅಗಿರುವ ಕಾಮಗಾರಿಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಮಾಹಿತಿ ಪಡೆದರು. ಸದ್ಯ ನಗರದಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್, ಕೆರೆಗಳ ಅಭಿವೃದ್ಧಿ, ರಸ್ತೆ ಅಭಿವೃದ್ಧಿ ಬಗ್ಗೆ ಮಾಹಿತಿ ಕಲೆಹಾಕಿದರು. ಕಂದಾಯ ವಸೂಲಿ, ಬಾಕಿ ಇರುವ ಕಂದಾಯದ ವಸೂಲಿ ಬಗ್ಗೆ ಚರ್ಚೆ ನಡೆಸಿದ್ದು, ಇ ಖಾತಾ ಎಷ್ಟು ಅಗಿದೆ. ಎಷ್ಟು ಅರ್ಜಿ ಬಂದಿದೆ ಅನ್ನೋ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಬ್ಲಾಕ್ ಸ್ಪಾಟ್ ನಿರ್ಮೂಲನೆ ನಿಟ್ಟಿನಲ್ಲಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಬಿಎ ಆಡಳಿತ ಸುಧಾರಣೆ ಮಾಡುವ ಧೈಯ
360 ಡಿಗ್ರಿ’ ದೃಷ್ಟಿಕೋನದೊಂದಿಗೆ ಬೆಂಗಳೂರಿನ ಜನರ ಜೀವನ ಗುಣಮಟ್ಟ ಸುಧಾರಣೆಗೆ ಪ್ರಯತ್ನ ಮಾಡಲಾಗುವುದು ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು. ಜಿಬಿಎ ಹಿರಿಯ ಅಧಿಕಾರಿಗಳ ಸಭೆ ನಂತರ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿದರು.ಬೆಂಗಳೂರು ಸವಾಲುಗಳನ್ನು ಹೊಂದಿರುವ ನಗರವಾಗಿದೆ.ಸುಮಾರು 1.5 ಕೋಟಿ ಜನರಿಗೆ ಆಶ್ರಯ ತಾಣವಾಗಿರುವ ಈ ನಗರ ಉದ್ಯೋಗ, ಶಿಕ್ಷಣ ಹಾಗೂ ಉತ್ತಮ ಜೀವನಕ್ಕೆ ಅವಕಾಶ ಕಲ್ಪಿಸುತ್ತಿದೆ. ಬೆಂಗಳೂರು ಯಾವುದೇ ಪಕ್ಷದ ಆಸ್ತಿಯಲ್ಲ. ಬೆಂಗಳೂರು ನಮ-4 ರಾಜ್ಯ ಹಾಗೂ ದೇಶದ ಅಮೂಲ್ಯ ಆಸ್ತಿಯಾಗಿದೆ. ಅನೇಕ ಸಂಸ್ಥೆಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಬಿಎ ಆಡಳಿತವನ್ನು ಸುಧಾರಣೆ ಮಾಡುವ ಧೈಯದೊಂದಿಗೆ ಕಾರ್ಯನಿರ್ವಹಿಸಲಾಗುವುದು ಎಂದು ತಿಳಿಸಿದರು.ಸಿಎಂ ಡಿ.ಕೆ. ಶಿವಕುಮಾರ್‌ಅವರು ಬೆಂಗಳೂರಿನ ಅಭಿವೃದ್ಧಿಗೆ ಸ್ಪಷ್ಟವಾದ ದೂರದೃಷ್ಟಿ ಯೋಜನೆಗಳನ್ನು ಹೊಂದಿದ್ದಾರೆ. ಅದರಂತೆ ಎಲ್ಲಾ ಅಧಿಕಾರಿಗಳು, ಆಡಳಿತ ವ್ಯವಸ್ಥೆ ಹಾಗೂ ಆಡಳಿತ ಮತ್ತು ವಿರೋಧ ಪಕ್ಷಗಳ ಜನಪ್ರತಿನಿಧಿಗಳ ಸಹಕಾರದೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬದ್ಧತೆಯಿಂದ ಕೆಲಸ ಮಾಡಲಾಗುವುದು ಎಂದರು. ಮನೆ ಬಾಗಿಲಿಗೆ ವಾಹನ: ಮನೆ ಬಾಗಿಲಿಗೆ ಕಸ ಸಂಗ್ರಹ ವಾಹನ ಬಂದರೂ ಕೆಲವರು ರಸ್ತೆ ಬದಿಯಲ್ಲಿ ಕಸವನ್ನು ತಂದು ಹಾಕುತ್ತಿರುವುದು ಕಂಡುಬರುತ್ತಿದೆ. ಕಸ ಸಂಗ್ರಹಣಾ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ನಾಗರಿಕರ ಸಹಕಾರವೂ ಅಗತ್ಯವಾಗಿದೆ ಎಂದರು.
‘ತ್ಯಾಜ್ಯ ಟೆಂಡರ್ ಆರೋಪ ಬಗ್ಗೆ ಸಮಿತಿಗೆ ಬಿಜೆಪಿ ದೂರು ನೀಡಲಿ’
ತ್ಯಜ್ಯ ಟೆಂಡರ್ ಬಗ್ಗೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಗಾಬೇÌಜ್ ಟೆಂಡರ್ ಬಗ್ಗೆ ಸರ್ಕಾರ ಉನ್ನತ ಪರಿಶೀಲನಾ ತಂಡ ರಚನೆ ಮಾಡಿದೆ. ಏನೇ ವಿರೋಧಗಳಿದ್ದರೂ ಈ ಸಮಿತಿ ಪರಿಶೀಲನೆ ಮಾಡಲಿದೆ. ಬಿಜೆಪಿ ಕೂಡ ಈ ಸಮಿತಿಗೆ ದೂರು ನೀಡಲಿ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದರು.












































