ನಾಯಕತ್ವ ಬದಲಾವಣೆ ಬಗ್ಗೆಯೂ ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ: ಸುರ್ಜೇವಾಲ

Picture of Savistara

Savistara

Bureau Report

ಕೆಪಿಸಿಸಿ ಕಚೇರಿಯಲ್ಲಿ ಮೂರನೇ ದಿನ ನಡೆದ ಶಾಸಕರ ಒನ್ ಟು ಒನ್ ಸಭೆ ಬಳಿಕ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡರು.

ಬೆಂಗಳೂರು: ”ಮುಂದಿನ‌ ವಾರ ಸಚಿವರ ಸಭೆ ಕರೆಯಲಾಗಿದೆ. ಸಚಿವರಿಂದಲೂ ಮಾಹಿತಿ ಪಡೆಯಲಿದ್ದೇವೆ. ಪಕ್ಷ ಎಂದಮೇಲೆ ಭಿನ್ನಾಭಿಪ್ರಾಯಗಳು ಇರುತ್ತವೆ. ಅವುಗಳನ್ನು ಎಲ್ಲಿ ಸರಿಪಡಿಸಬೇಕೋ ಅಲ್ಲಿ ಸರಿಪಡಿಸುತ್ತೇವೆ” ಎಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ಸಮಸ್ಯೆ ಬಗೆಹರಿಸುವ ಕಾರ್ಯ: ಕೆಪಿಸಿಸಿ ಕಚೇರಿಯಲ್ಲಿ ಮೂರನೇ ದಿನವಾದ ಬುಧವಾರ ರಾತ್ರಿ ಶಾಸಕರ ಒನ್ ಟು ಒನ್ ಸಭೆ ಮುಗಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ”ಬಹುತೇಕ ಶಾಸಕರ ಅಭಿಪ್ರಾಯ ಕೇಳಿದ್ದೇವೆ. ಇನ್ನು ಕೆಲ ಶಾಸಕರು ಪ್ರವಾಸದಲ್ಲಿದ್ದಾರೆ. ಅವರನ್ನು ಮಾತನಾಡಿಸುತ್ತೇವೆ. ಶಾಸಕರ ಅಭಿಪ್ರಾಯವನ್ನು ಪಕ್ಷ ಗೌರವಿಸುತ್ತದೆ. ಬಹಳ ಉತ್ತಮ ಚರ್ಚೆಯಾಗಿದೆ. ಹಾಗಂತ ಅವರ ಎಲ್ಲ ಮನವಿ, ಬೇಡಿಕೆ ಈಡೇರಿಸಲು ಆಗಲ್ಲ. ಎಲ್ಲೆಲ್ಲಿ ಐರನ್ ಇಲ್ಲದ ಬಟ್ಟೆ ಇದ್ದರೆ, ಅದಕ್ಕೆ ಐರನ್‌ ಮಾಡುವ, ಸಮಸ್ಯೆ ಬಗೆಹರಿಸುವ ಕಾರ್ಯ ಮಾಡುತ್ತೇವೆ” ಎಂದು ತಿಳಿಸಿದರು.

ನಾಯಕತ್ವ ಬದಲಾವಣೆ ಬಗ್ಗೆ ಅಭಿಪ್ರಾಯ: ”ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಪಕ್ಷದಲ್ಲಿ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಬಹುದು. ಶಾಸಕರು ಸಚಿವರಾಗಿ, ಸಚಿವರು ಸಿಎಂ ಆಗಬೇಕೆಂದು ಆಸೆಪಡುತ್ತಾರೆ. ನಾಯಕತ್ವ ಬದಲಾವಣೆ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದರು.ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಗೌರವ: ”ನಾವು ಬಿಜೆಪಿ ಪಕ್ಷದಂತೆ ವರ್ತಿಸಲ್ಲ. ನರೇಂದ್ರ‌ ಮೋದಿ ಅವರನ್ನು ವಿರೋಧಿಸಿದರೆ ಲಾಲ್‌ಕೃಷ್ಣ ಅಡ್ವಾನಿ, ಮುರುಳಿ ಮನೋಹರ್ ಜೋಶಿ ರೀತಿ ಮೂಲೆ ಗುಂಪು ಮಾಡಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಗೌರವ ಕೊಡುತ್ತೇವೆ” ಎಂದು ತಿಳಿಸಿದರು.

ಸಭೆಯಲ್ಲಿ ಏನೆಲ್ಲಾ ಚರ್ಚೆ: ಸಭೆಯಲ್ಲಿ ಸುರ್ಜೇವಾಲ ಮುಂದೆ ತಮ್ಮ ಅಭಿಪ್ರಾಯ ತಿಳಿಸಿದ ಹಿರೇಕೆರೂರು ಶಾಸಕ ಯು.ಬಿ.ಬಣಕಾರ್, ಪ್ರಸ್ತುತ ಅನುದಾನ ಸಿಎಂ ಕೊಡುತ್ತಿದ್ದಾರೆ. ಆದರೆ, ಗ್ಯಾರಂಟಿಗಳಿಂದ ಅನುದಾನ ಸ್ವಲ್ಪ ಮಟ್ಟಿಗೆ ಕೊರತೆ ಇದೆ. ಆದರೆ ನಮಗೆ ಅಸಮಾಧಾನವೇನೂ ಇಲ್ಲ. ಹೆಚ್ಚಿನ ಅನುದಾನ ಕೊಡಿಸಿದರೆ ಉತ್ತಮ. ಕೆಲವು ಪೆಂಡಿಂಗ್ ಕೆಲಸಗಳು ಇವೆ. ಅವುಗಳಿಗೆ ಮಂಜೂರಾತಿ ಕೊಡಬೇಕು. ಆರ್ಥಿಕ ಇಲಾಖೆ ಅನುಮತಿ ಕೊಡುತ್ತಿಲ್ಲ. ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ.‌ ಅದನ್ನು ಸರಿಪಡಿಸುವ ಭರವಸೆಯನ್ನು ಅವರು ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಕ್ಷೇತ್ರಕ್ಕೆ ಯಾವ ಸಮಸ್ಯೆ ಇಲ್ಲ: ಸಭೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ್ದ ಯು.ಬಿ.ಬಣಕಾರ್, “ಶಾಸಕರ ಭಾವನೆ ತಿಳಿಯಲು ಅವಕಾಶ ನೀಡಲಾಗಿದೆ. ಕ್ಷೇತ್ರದ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದೇವೆ. ರಾಜಕೀಯ ಬೆಳವಣಿಗೆಳು, ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಗ್ಯಾರಂಟಿ ಯೋಜನೆ ಪ್ರಭಾವ ಎಷ್ಟು ಮಟ್ಟಿಗೆ ಆಗಿದೆ.‌ ಇದರ ಬಗ್ಗೆ ಕೇಳಿದರು, ನಾವು ಹೇಳಿದ್ದೇವೆ. ಜನ ಇದನ್ನು ನೆನೆಯುತ್ತಿದ್ದಾರೆ. ಅನುದಾನದ ಕೊರತೆ ನಮಗೆ ಇಲ್ಲ. ಸಿಎಂ 50 ಕೋಟಿ ರೂ. ಅನುದಾನ ಕೊಡುತ್ತಿದ್ದಾರೆ. ನೀರಾವರಿಗೆ ಡಿಸಿಎಂ 50 ಕೋಟಿ ರೂ. ಕೊಟ್ಟಿದ್ದಾರೆ.‌ ಹಾಗಾಗಿ ನಮ್ಮ ಕ್ಷೇತ್ರಕ್ಕೆ ಯಾವ ಸಮಸ್ಯೆ ಇಲ್ಲ. ಸಿಎಂ ಬದಲಾವಣೆ ವಿಚಾರ ಚರ್ಚೆಯಿಲ್ಲ. ಅದು ಶಾಸಕರಿಂದ ಪಡೆಯುವುದೂ ಇಲ್ಲ” ಎಂದು ಮಾಹಿತಿ ನೀಡಿದ್ದರು.

ಪ್ರಕಾಶ್​ ಕೋಳಿವಾಡ ಜೊತೆಗೆ ಚರ್ಚೆ: ಶಾಸಕ ಪ್ರಕಾಶ್ ಕೋಳಿವಾಡ ಜೊತೆಗೂ ಸುರ್ಜೇವಾಲ ಚರ್ಚೆ ನಡೆಸಿದರು. ಸುರ್ಜೇವಾಲ ಮುಂದೆ ಕೋಳಿವಾಡ ಕೆಲ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಉತ್ತಮ ಸರ್ಕಾರ ನೀಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜನ ನೆನೆಸುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಗ್ಯಾರಂಟಿಯನ್ನು ಮನೆ ಮನೆಗೆ ತಲುಪಿಸಿದ್ದೇವೆ. ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದ್ದಾರೆ.

[t4b-ticker]
error: Content is protected !!