ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ ಪೀಠವು ಶರಣ್ ಪಂಪ್‌ವೆಲ್ ಅವರ ಬಂಧನ ಸೇರಿದಂತೆ, ಹಿಂದೂ ಮುಖಂಡರ ಮೇಲೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿ, ಪೊಲೀಸರ ವಿಚಾರಣೆಗೆ ಸಹಕರಿಸುವಂತೆ ಸೂಚನೆ ನೀಡಿದೆ.
ಬೆಂಗಳೂರು, ಜುಲೈ 09: ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಅವರು ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಅವರ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್, “ವಿನಾಕಾರಣ ದ್ವೇಷ ಭಾಷಣದ ಆರೋಪ ಹೊರಿಸಲಾಗಿದೆ” ಎಂದು ವಾದಿಸಿದರು. ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಹೈಕೋರ್ಟ್ ಪೀಠವು ಶರಣ್ ಪಂಪ್‌ವೆಲ್ ಅವರ ಬಂಧನ ಸೇರಿದಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿ, ಪೊಲೀಸರ ವಿಚಾರಣೆಗೆ ಸಹಕರಿಸುವಂತೆ ಸೂಚನೆ ನೀಡಿದೆ.
ಪ್ರಕರಣದ ಹಿನ್ನೆಲೆ:
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆಯನ್ನು ಖಂಡಿಸಿ ಬಂದ್ ಕರೆ ನೀಡಿದ್ದರಿಂದ ಕದ್ರಿ ಠಾಣೆಯಲ್ಲಿ ಶರಣ್ ಪಂಪ್‌ವೆಲ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದರಿಂದ ಪೊಲೀಸರು ಅವರನ್ನು ಬಂಧಿಸಿದ್ದರು. ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಕದ್ರಿ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು.
ಮಧ್ಯಂತರ ತಡೆಯಾಜ್ಞೆ:
ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ ಅವರೂ ಕಡಬ ಪೊಲೀಸರ ಎಫ್‌ಐಆರ್ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅವರ ಪರವಾಗಿ ವಕೀಲ ಅರುಣ್ ಶ್ಯಾಮ್, “ಯಾವುದೇ ಅಪರಾಧದ ಅಂಶವಿಲ್ಲದೇ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ವಾದಿಸಿದರು. ಈ ವಾದವನ್ನು ಆಲಿಸಿದ ಹೈಕೋರ್ಟ್, ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿತು.
ಎಫ್‌ಐಆರ್‌ಗೆ ಕಾರಣ:
ಕಡಬ ಪೊಲೀಸರು ರಾತ್ರಿ ವೇಳೆ ಮನೆಗೆ ಪ್ರವೇಶಿಸಿ ಜಿಪಿಎಸ್ ಫೋಟೋ ತೆಗೆದಿದ್ದಕ್ಕೆ ಪ್ರಶ್ನಿಸಿದ್ದಕ್ಕಾಗಿ ಸ್ವಯಂಪ್ರೇರಿತ ಕೇಸ್ ದಾಖಲಿಸಿದ್ದಾರೆ ಎಂದು ಆರೋಪಿಸಿ, ಹಿಂದೂ ಕಾರ್ಯಕರ್ತರು ಕಡಬ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.ಈ ಪ್ರತಿಭಟನೆಯಲ್ಲಿ ನವೀನ್ ನೆರಿಯ ಅವರು ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ಉದ್ದೇಶಿಸಿ ದ್ವೇಷ ಭಾಷಣ ಮತ್ತು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ದೂರು ದಾಖಲಾಗಿ, ಎಫ್‌ಐಆರ್ ದಾಖಲಿಸಲಾಗಿತ್ತು.














































