ವಿಜಯಪುರದಲ್ಲಿ ಅಡಗಿದ್ದ 1998ರ ಕೊಯಮತ್ತೂರು ಸ್ಪೋಟ ಆರೋಪಿ, ಶಂಕಿತ ಉಗ್ರ 27 ವರ್ಷ ಬಳಿಕ ಸೆರೆ, 12 ವರ್ಷಗಳಿಂದ ನಗರದಲ್ಲೇ ತರಕಾರಿ ವ್ಯಾಪಾರ ಮಾಡುತ್ತಿದ್ದ ಟೈಲರ್ ರಾಜಾ
ವಿಜಯಪುರ: ಇಪ್ಪತ್ತೇಳು ವರ್ಷಗಳ ಹಿಂದೆತಮಿಳುನಾಡಿನ ಕೊಯಮತ್ತೂರಿನಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಗುರಿಯಾಗಿಸಿ ನಡೆಸಲಾಗಿದ್ದ ಸರಣಿ ಬಾಂಬ್ ಸ್ಪೋಟ ಪ್ರಕರಣದ ಪ್ರಮುಖ ಆರೋಪಿ, ನಿಷೇಧಿತ ಉಗ್ರ ಸಂಘಟನೆ ಅಲ್ ಉಮ್ಮಾದ ಪ್ರಮುಖ ಕಾರ್ಯಕರ್ತನಾಗಿದ್ದ ಶಂಕಿತ ಉಗ್ರ ಎ.ಸಾದಿಕ್ ರಾಜಾ ಅಥವಾ ಟೈಲರ್ ರಾಜಾ(48)ನನ್ನು ವಿಜಯಪುರದಲ್ಲಿ ತಮಿಳುನಾಡಿನ ಭಯೋತ್ಪಾದನ ನಿಗ್ರಹ ದಳದ ಪೊಲೀಸರು ಗುರುವಾರ ಬಂಧಿಸಿದ್ದಾರೆ.1998ರ ಫೆ.14ರಂದು ಕೊಯಮತ್ತೂರಿನ 11 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟಗೊಂಡು 85 ಮಂದಿ ಮೃತಪಟ್ಟು, 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಅದೇ ದಿನ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರ ಕಾರ್ಯಕ್ರಮವೂ ಇತ್ತು. ಆಡ್ವಾಣಿ ಅವರನ್ನೇ ಗುರಿಯಾಗಿಸಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು.27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರ ಸಿದ್ದಿಕಿ ರಾಜ್ ಬೇರೆ ಬೇರೆ ಸ್ಥಳಗಳಲ್ಲಿ ಅಡಗಿದ್ದ. 12 ವರ್ಷಗಳ ಹಿಂದೆ ವಿಜಯಪುರ ನಗರಕ್ಕೆ ಆಗಮಿಸಿ ನಗರದಲ್ಲೇ ತರಕಾರಿ ವ್ಯಾಪಾರ ಮಾಡಿಕೊಂಡಿದ್ದ. ಹುಬ್ಬಳ್ಳಿ ಮೂಲದ ಮಹಿಳೆಯನ್ನು ಮದುವೆಯಾಗಿದ್ದ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡು ಪೊಲೀಸರು ಗುರುವಾರ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿ ಕರೆದೊಯ್ದಿದ್ದಾರೆ. ಈತ ಕೊಯಮತ್ತೂರು ಸ್ಫೋಟ ಸಹಿತ ಇತರ ಪ್ರಕರಣಗಳಲ್ಲೂ ಭಾಗಿಯಾಗಿದ್ದು, ತನಿಖಾ ದೃಷ್ಟಿಯಿಂದ ಜಿಲ್ಲಾ ಪೊಲೀಸರಿಗೂ ತಮಿಳುನಾಡು ತನಿಖಾಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿಲ್ಲ. ಈ ಕುರಿತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಏನಿದು ಪ್ರಕರಣ?
1998ರ ಫೆ.14ರಂದು ತಮಿಳುನಾಡಿನ ಕೊಯಮತ್ತೂರಿನ 11 ಸ್ಥಳಗಳಲ್ಲಿ ಸರಣಿ ಬಾಂಬ್ ಸ್ಫೋಟಗೊಂಡು 85 ಜನ ಮೃತಪಟ್ಟಿದ್ದರು. ಘಟನೆಯಲ್ಲಿ 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಅದೇ ದಿನ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಅವರ ಕಾರ್ಯಕ್ರಮವೂ ಇತ್ತು. ಆಡ್ವಾಣಿ ಅವರನ್ನೇ ಗುರಿಯಾಗಿಸಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು.














































