ನವದೆಹಲಿ: ಜೂನ್ 12 ರಂದು ಅಹಮದಾಬಾದ್‌ನಲ್ಲಿನಡೆದ ಏರ್ ಇಂಡಿಯಾ ಗ್ರೀಮ್‌ಲೈನರ್ (ಬೋಯಿಂಗ್ 787-8) ವಿಮಾನ ಅಪಘಾತದ ಕುರಿತು ಭಾರತದ ವಿಮಾನ ಅಪಘಾತ ತನಿಖಾ ಸಂಸ್ಥೆ (AAIB) 15 ಪುಟಗಳ ಪ್ರಾಥಮಿಕ ವರದಿಯನ್ನು ಶುಕ್ರವಾರ(ಜು.11) ಬಿಡುಗಡೆ ಮಾಡಿದೆ.ಪ್ರಾಥಮಿಕ ವರದಿಯಲ್ಲಿ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಕೆಯಾಗದಿರುವುದೇ ಪತನಕ್ಕೆ ಪ್ರಮುಖ ಕಾರಣ ಎಂಬ ವರದಿ ಬಹಿರಂಗಗೊಂಡಿದೆ. ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ಎರಡೂ ಎಂಜಿನ್‌ಗಳು ಸ್ಥಗಿತಗೊಂಡಿವೆ ಮತ್ತು ಎಂಜಿನ್ 1 ಮತ್ತು ಎಂಜಿನ್ 2 ಇಂಧನ ಕಟ್‌ಆಫ್ ಸ್ವಿಚ್‌ಗಳು ಪರಸ್ಪರ ಒಂದು ಸೆಕೆಂಡಿನೊಳಗೆ RUN ನಿಂದ CUTOFF R ಪರಿವರ್ತನೆಗೊಂಡವು ಎಂದು ವರದಿಯಲ್ಲಿ ಬಹಿರಂಗಗೊಂಡಿದೆ.ಇದೇ ಕಾರಣದಿಂದ ವಿಮಾನದಲ್ಲಿದ್ದ 241 ಜನರು ಸೇರಿದಂತೆ ಕನಿಷ್ಠ 270 ಜನರು ಪ್ರಾಣವನ್ನು ಕಳೆದುಕೊಳ್ಳುವಂತಾಯಿತು ಎನ್ನಲಾಗಿದೆ.
ಅಲ್ಲದೆ ಟೇಕ್ ಆಫ್ ಆಗುವ ಸಂದರ್ಭದಲ್ಲಿ ಪೈಲೆಟ್ ಗಳು ನಡೆಸಿದ ಸಂಭಾಷಣೆ ಕೂಡಾ ಕಾಕ್‌ಪಿಟ್ ನಲ್ಲಿ ರೆಕಾರ್ಡ್ ಆಗಿದ್ದು ಅದರಲ್ಲಿ ಓರ್ವ ಪೈಲೆಟ್ “ನೀವು ಏಕೆ ಇಂಧನ ಸಂಪರ್ಕವನ್ನು ಕಡಿತಗೊಳಿಸಿದ್ದೀರಿ?” ಎಂದು ಕೇಳುವುದನ್ನು ಕೇಳಬಹುದು ಮತ್ತು ಇನ್ನೊಬ್ಬ ಪೈಲಟ್ “ನಾನು ಹಾಗೆ ಮಾಡಲಿಲ್ಲ” ಎಂದು ಉತ್ತರಿಸುವುದು ಕೇಳಿದೆ.ವಿಮಾನ ಅಪಘಾತ ತನಿಖಾ ಸಂಸ್ಥೆ (AAIB) ಮಾಹಿತಿಯಂತೆ ವಿಮಾನ ಪತನಗೊಂಡ ಸ್ಥಳದಲ್ಲಿನ ಡೋನ್ ಛಾಯಾಗ್ರಹಣ ಮತ್ತು ವಿಡಿಯೋಗ್ರಫಿ ಸೇರಿದಂತೆ ಎಲ್ಲ ರೀತಿಯ ತನಿಖೆಗಳು ಪೂರ್ಣಗೊಂಡಿದ್ದು ವಿಮಾನದ ಅವಶೇಷಗಳನ್ನು ನಿಲ್ದಾಣದ ಸಮೀಪವಿರುವ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ.ವಿಮಾನ ಪತನಗೊಳ್ಳುವ ಸಂದರ್ಭದಲ್ಲಿ ವಿಮಾನದಲ್ಲಿ ಒಟ್ಟು ಸಿಬ್ಬಂದಿ ಸೇರಿ ಒಟ್ಟು ೨೪೨ ಮಂದಿ ಇದ್ದು ಅದರಲ್ಲಿ ಓರ್ವ ಪ್ರಯಾಣಿಕ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ.














































