ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್, ಮುಂದಿನ ಬಿಹಾರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ.
ಪಾಟ್ನಾ (ಬಿಹಾರ): ಪಕ್ಷದಿಂದ ಉಚ್ಚಾಟನೆಗೊಂಡಿರುವ ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಅವರು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ.ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್, ವೈಶಾಲಿ ಜಿಲ್ಲೆಯ ಮಹುವಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಶನಿವಾರ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಅವರು ಸಮಸ್ತಿಪುರ ಜಿಲ್ಲೆಯ ಹಸನ್ಪುರ ಕ್ಷೇತ್ರದ ಶಾಸಕರಾಗಿದ್ದಾರೆ.ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ನಾನು ಮಹುವಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ. ಇದನ್ನು ನಾನು ಈ ಹಿಂದೆಯೂ ಹೇಳಿದ್ದೆ. ವಿರೋಧಿಗಳು ಈ ಬಗ್ಗೆ ಉರಿದುಕೊಳ್ಳಲು ಪ್ರಾರಂಭಿಸುತ್ತಾರೆ, ಉರಿದುಕೊಳ್ಳಲಿ, ನಾನು ಈ ಸವಾಲು ಸ್ವೀಕರಿಸಿದ್ದೇನೆ. ಅಲ್ಲದೆ, ನಾನು ಸಂಪೂರ್ಣ ಶಕ್ತಿ ಮತ್ತು ಹುರುಪಿನಿಂದ ಚುನಾವಣಾ ಕಣಕ್ಕೆ ಪ್ರವೇಶಿಸುತ್ತೇನೆ” ಎಂದು ತಿಳಿಸಿದ್ದಾರೆ.
ಆರು ವರ್ಷಗಳ ಕಾಲ ಆರ್‌ಜೆಡಿ ಪಕ್ಷದಿಂದ ಉಚ್ಚಾಟನೆಗೊಂಡಿರುವ ಹಿನ್ನೆಲೆಯಲ್ಲಿ, ಹಾಗೂ ಯಾವುದೇ ನೋಂದಾಯಿತ ಪಕ್ಷವಿಲ್ಲದ ಕಾರಣ, ಆಪ್ತರ ಸಲಹೆಯಂತೆ ತೇಜ್ ಪ್ರತಾಪ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ತೇಜ್ ಪ್ರತಾಪ್, ತಮ್ಮ ಅಭಿಪ್ರಾಯಗಳನ್ನು ಹೇಳಲು, ಕಾರ್ಯಕ್ರಮಗಳ ಕುರಿತು ಪ್ರಚಾರ ಮಾಡಲು, ಜನರ ಸಮಸ್ಯೆಗಳನ್ನು ಆಲಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟೀಂ ತೇಜ್ ಪ್ರತಾಪ್ ಎಂಬ ಪೇಜ್ ಆರಂಭಿಸಿದ್ದಾರೆ.”ಟೀಂ ತೇಜ್ ಪ್ರತಾಪ್ ಯಾದವ್ ಜನರನ್ನು ತಲುಪಲು ಒಂದು ವೇದಿಕೆಯಾಗಿದೆ. ಈ ಬಾರಿ ಅಂಕಲ್ ನಿತೀಶ್ ಕುಮಾರ್ ಯಾದವ್ ಮುಖ್ಯಮಂತ್ರಿ ಆಗುವುದಿಲ್ಲ. ಯುವಕರು, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಮಾತನಾಡುವ ಯಾವುದೇ ಅಭ್ಯರ್ಥಿಯನ್ನು ನಾವು ಬೆಂಬಲಿಸುತ್ತೇವೆ. ಅಂತಹ ಅಭ್ಯರ್ಥಿಯ ಜೊತೆಗೆ ನಾನು ಪೂರ್ಣ ಶಕ್ತಿಯಿಂದ ನಿಲ್ಲುತ್ತೇನೆ” ಎಂದು ತೇಜ್ ಪ್ರತಾಪ್ ಹೇಳಿದ್ದಾರೆ.
ನೈತಿಕ ಮೌಲ್ಯಗಳ ಕೊರತೆ ಹಿನ್ನೆಲೆಯಲ್ಲಿ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರು, ಇತ್ತೀಚೆಗೆ ತಮ್ಮ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.
ಫೇಸ್ಬುಕ್ನಲ್ಲಿ ಪೋಸ್ಟ್ : ಅನುಷ್ಕಾ ಯಾದವ್ ಎಂಬ ಯುವತಿಯ ಜೊತೆ ತೇಜ್ ಪ್ರತಾಪ್ ಕಳೆದ 12 ವರ್ಷಗಳಿಂದ ರಿಲೇಷನ್ಶಿಪ್ನಲ್ಲಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿತ್ತು. ಇಬ್ಬರ ಫೋಟೋಗಳು ಕೂಡ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ತೇಜ್ ಪ್ರತಾಪ್ ಯಾದವ್ ಅವರು “ನಾನು ಅನುಷ್ಕಾ ಯಾದವ್ ಅವರ ಜೊತೆ ಕಳೆದ 12 ವರ್ಷಗಳಿಂದ ರಿಲೇಷನ್ಶಿಪ್ನಲ್ಲೇನೆ. ಇದನ್ನು ಮೊದಲೇ ಹೇಳಬೇಕು ಎಂದುಕೊಂಡಿದ್ದೆ. ಆದರೆ, ಕಾಲ ಕೂಡಿ ಬಂದಿರಲಿಲ್ಲ. ಇದನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ” ಎಂದು ಬರೆದು ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.ತೇಜ್ ಪ್ರತಾಪ್ ಯಾದವ್ ಅವರು, ಮಾಜಿ ಮುಖ್ಯಮಂತ್ರಿ ದರೋಗಾ ಪ್ರಸಾದ್ ರೈ ಅವರ ಮೊಮ್ಮಗಳು ಐಶ್ವರ್ಯಾ ರೈ ಅವರನ್ನು ಮದುವೆಯಾಗಿದ್ದಾರೆ. ಆದರೆ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಇಬ್ಬರ ವಿಚ್ಛೇದನ ಪ್ರಕರಣ ಪ್ರಸ್ತುತ ಪಾಟ್ನಾದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.
ತೇಜ್ ಪ್ರತಾಪ್ ಅವರು ತನ್ನ ಫೇಸ್ಬುಕ್ ಪೋಸ್ಟ್ಗಳನ್ನು ತೆಗೆದುಹಾಕಿ, ತಮ್ಮ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿಕೊಂಡಿದ್ದರೂ, ಲಾಲು ಪ್ರಸಾದ್ ಯಾದವ್ ಅವರು, ಮಗನನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಆದಾಗ್ಯೂ, ತೇಜ್ ಪ್ರತಾಪ್ ಯಾದವ್ ಅವರು ಮಾತ್ರ ತಮ್ಮ ತಂದೆ, ತಾಯಿ, ಕಿರಿಯ ಸಹೋದರ ಹಾಗೂ ವಿಧಾನಸಭಾ ಪ್ರತಿಪಕ್ಷ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಮತ್ತು ಅವರ ಕುಟುಂಬದ ಯಾವುದೇ ಸದಸ್ಯರ ವಿರುದ್ಧ ಇಲ್ಲಿಯವರೆಗೆ ಏನನ್ನೂ ಮಾತನಾಡಿಲ್ಲ.











































