ಬೆಳ್ತಂಗಡಿ :ಡಾ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಸಭೆ

Picture of Savistara

Savistara

Bureau Report

ಬೆಳ್ತಂಗಡಿ : ವಿಶ್ವ ಆರೋಗ್ಯ ಸಂಸ್ಥೆಯ ಸಭೆಗೆ ತೆರಳುವ ಭಾರತದ ಪ್ರತಿನಿಧಿಗಳಿಗೆ ಅಡಕೆಯ ಔಷಧೀಯ ಮೌಲ್ಯಗಳ ಮಾಹಿತಿ ನೀಡುವ ಜತೆಗೆ, ಅಡಕೆಯ ಅಧ್ಯಯನ ಹಾಗೂ ಕೃಷಿಕರ ಬದುಕಿನ ಮಾಹಿತಿ ನೀಡಲು ವ್ಯವಸ್ಥೆಯಾಗಬೇಕು ಎಂದು ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಆ‌ಡಿಎಫ್)ದ ಸಭೆಯಲ್ಲಿ ನಿರ್ಧರಿಸಲಾಗಿದೆ.ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆಯಲ್ಲಿ ಅ.28 ಮಂಗಳವಾರ ಧರ್ಮಸ್ಥಳದಲ್ಲಿ ಸಭೆ ನಡೆಯಿತು. ಅಡಕೆ ಹಾನಿಕಾರಕ ಅಲ್ಲ ಎಂಬ ಅಂಶ ಈಗಾಗಲೇ ಅಧ್ಯಯನದಿಂದ ಹೊರಬಂದಿದ್ದು, ಎಆರ್ ಡಿಎಫ್ ಹಾಗೂ ಜೆಡ್ಡು ಆಯುರ್ವೇದ ಸಂಸ್ಥೆ ಈ ಬಗ್ಗೆ ಮಾಡಿರುವ ಅಧ್ಯಯನ ಅಂತರಾಷ್ಟ್ರೀಯ ಜರ್ನಲ್‌ನಲ್ಲೂ ಪ್ರಕಟವಾಗಿದೆ ಎಂಬ ಅಂಶವನ್ನು ಸಭೆಯ ಗಮನಕ್ಕೆ ತರಲಾಯಿತು.

ವಿದೇಶಿ ಅಡಕೆ ಆಮದು ತಡೆಗೆ, ಅಡಕೆ ಗುಣಮಟ್ಟದ ಮಾಹಿತಿ ಅಗತ್ಯ. ಈಗಾಗಲೇ ಎಆಡಿಎಫ್ ೬೩ಕ್ಕೂ ಹೆಚ್ಚು ವಿದೇಶಿ ಅಡಕೆಯ ಸ್ಯಾಂಪಲ್ ಪರಿಶೀಲಿಸಿದೆ. ಈ ಬಗ್ಗೆ ಸುಸಜ್ಜಿತ ಪ್ರಯೋಗಾಲಯ ಸ್ಥಾಪನೆ ಅಗತ್ಯ. ಅಡಕೆಯ ಇತರ ಬಳಕೆಯಾದ ಶಾಯಿ, ಬಣ್ಣದ ಬಗ್ಗೆ ಇನ್ನಷ್ಟು ಅಧ್ಯಯನ, ಸಂಸ್ಥೆಗಳ ಮೂಲಕ ತಯಾರಿಗೆ ಸಲಹೆ ನೀಡಲಾಯಿತು. ಅಡಕೆ ಹಳದಿರೋಗ ಪೀಡಿತ ಪ್ರದೇಶದ ರೈತರಿಗೆ ನೆರವಾಗಲು ಸರ್ಕಾರದಿಂದ ಕ್ರಮವಾಗಬೇಕು. ಈ ಬಗ್ಗೆ ಒತ್ತಾಯ ಅಗತ್ಯವಿದೆ. ಆ ಪ್ರದೇಶದಲ್ಲಿ ಪರ್ಯಾಯ ಬೆಳೆಗೆ ಪ್ರೋತ್ಸಾಹ ನೀಡಲು ಯೋಜನೆಗೆ ಸಲಹೆ ನೀಡಲಾಯಿತು. ವಿಶೇಷವಾಗಿ ಸುಳ್ಯ, ಶೃಂಗೇರಿ ಹಾಗೂ ಕೊಪ್ಪ ತಾಲೂಕಿಗೆ ಆದ್ಯತೆ ನೀಡಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.ಅಡಕೆ ಕೊಳೆರೋಗದಿಂದ ಕೃಷಿಕರು ಸಂಕಷ್ಟ ಅನುಭವಿಸಿರುವ ಬಗ್ಗೆ ಚರ್ಚೆ ನಡೆಯಿತು. ಶೇ.70ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದ್ದು, ಸರ್ಕಾರದ ಗಮನಕ್ಕೆ ತಂದು ಪರಿಹಾರ ಕ್ರಮಗಳ ಬಗ್ಗೆಯೂ ಒತ್ತಾಯಿಸಲಾಯಿತು. ಅಡಕೆಯ ವಿವಿಧ ಔಷಧೀಯ ಗುಣದ ಬಗ್ಗೆ ಅಧ್ಯಯನ ನಡೆಸಲು ನಿರ್ಧರಿಸಲಾಯಿತು.

ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಟ್ರಸ್ಟಿಗಳಾದ ಕ್ಯಾಂಪ್ರೊ ಅಧ್ಯಕ್ಷ ಕಿಶೋರ್ ಕುಮಾ‌ರ್ ಕೊಡ್ಲಿ, ಅಡಕೆ ಮಹಾಮಂಡಲ ಅಧ್ಯಕ್ಷ ಆರಗ ಜ್ಞಾನೇಂದ್ರ, ಕ್ಯಾಂಸ್ಕೋ ನಿರ್ದೇಶಕ ಬಿ.ವಿ.ಸತ್ಯನಾರಾಯಣ, ಟಿಎಸ್‌ಎಸ್‌ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ತುಮ್ಮೋಸ್ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ಅಡಕೆ ಕೃಷಿ ಸಂಶೋಧಕ ಬದನಾಜೆ ಶಂಕರ ಭಟ್, ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್‌ ಪುಚ್ಚಪ್ಪಾಡಿ, ಪ್ರತಿಷ್ಠಾನದ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್ ಕೇಶವ ಭಟ್ ಉಪಸ್ಥಿತರಿದ್ದರು.

[t4b-ticker]
error: Content is protected !!