ಪಂಜ ಸಾವಿರ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನ.11ರಂದು ಸೂರ್ಯಾಸ್ತದ ಸಮಯದಲ್ಲಿ ಅಪರೂಪದ ದೃಶ್ಯವೊಂದು ಕಾಣಿಸಿಕೊಂಡಿದೆ. ದೇಗುಲದ ಭಕ್ತರಾದ ಅಕ್ಷಯ್ ಕುದ್ವ ಎಂಬವರು

ಈ ಅಪರೂಪದ ದೃಶ್ಯ ಸೆರೆ ಹಿಡಿದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿ ಪ್ರಸಾದ್ ಕಾನತ್ತೂರ್ ಅವರ ಜೊತೆಗೆ ಹಂಚಿಕೊಂಡಿದ್ದಾರೆ. ನೀಲಿ ಆಗಸ, ಸೂರ್ಯನ ಕೆಂಬಣ್ಣದ ಪ್ರಭಾವಳಿ, ಭವ್ಯ ರಾಜಗೋಪುರದ ಸಮ್ಮಿಲನ, ಪ್ರಕೃತಿಯ ಅದ್ಭುತ ಕಲಾಕೃತಿಯಂತೆ ಕಾಣಿಸುವ ಈ ದೃಶ್ಯ ನಯನ ಮನೋಹರವಾಗಿದೆ.


ಸಂಜೆಯ ಕತ್ತಲು ಆವರಿಸುತ್ತಿರುವ ಸಮಯಕ್ಕೆ ವಿಶೇಷ ಅರ್ಥವನ್ನು ಈ ದೃಶ್ಯ ನೀಡಿದೆ. ಸೂರ್ಯನ ಕಿರಣಗಳು ಸುತ್ತಲು ಕೆಂಪು, ಗುಲಾಬಿ ಮತ್ತು ಹಳದಿ ಬಣ್ಣದ ಪ್ರಭಾವಳಿಯಲ್ಲಿ ಕಾಣಿಸುತ್ತಿದ್ದು ಸಾಕ್ಷಾತ್ ಪರಶಿವನ ಜಟೆಯಲ್ಲಿ ಸೂರ್ಯದೇವ ಶೋಭಿಸುವಂತೆ ಕಾಣಿಸುತ್ತಿದೆ. ದೇವಸ್ಥಾನದ ಎರಡೂ ಬದಿಗಳಲ್ಲಿರುವ ತೆಂಗಿನ ಮರಗಳು, ಹಸಿರ ಪ್ರಕೃತಿ ಸಂಪತ್ತು, ನೀಲಿ ಆಕಾಶ ಈ ಅಪರೂಪದ ದೃಶ್ಯಕ್ಕೆ ಮೌನ ಸಾಕ್ಷಿಯಾಗಿ ನಿಂತಂತೆ ಭಾಸವಾಗುತ್ತಿದೆ.


ಈ ನೀಲವರ್ಣದ ಸಂಜೆಯ ಆಕಾಶ, ಸೂರ್ಯನ ಸುತ್ತಲಿನ ಕೆಂಪು ಪ್ರಭಾವಳಿ, ರಾಜಗೋಪುರದ ಗಂಭೀರ ರೂಪ ಹಾಗೂ ಸುತ್ತಲಿನ ಹಸಿರು ಪ್ರಕೃತಿ, ಸವಿ ಸಂಜೆಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಇದು ಕೇವಲ ಒಂದು ಸೂರ್ಯಾಸ್ತದ ಚಿತ್ರವಲ್ಲ, ಭಕ್ತಿ, ಪ್ರಕೃತಿ ಮತ್ತು ಸೌಂದರ್ಯ ಒಂದೇ ಚೌಕಟ್ಟಿನಲ್ಲಿ ಮೇಳೈಸಿದ ಅಪರೂಪದ ಕ್ಷಣ ಎಂದು ಭಕ್ತರು ವರ್ಣಿಸುತ್ತಿದ್ದಾರೆ.


ಪಂಜದ ಸಾವಿರ ಸೀಮೆಯ ಒಡೆಯ ಪಂಚಲಿಂಗೇಶ್ವರನಿಗೆ ಸಾವಿರಾರು ವರ್ಷದ ಇತಿಹಾಸದ ಲೆಕ್ಕಗಳಿವೆ. ಈ ದೇವಸ್ಥಾನವು ಸುಮಾರು 13ನೇ ಶತಮಾನಕ್ಕೆ ಸೇರಿದ ದೇವಸ್ಥಾನವಾಗಿದ್ದು ಕ್ರಿಸ್ತ ಶಕ 340-350 ಜೈನರ ಆಡಳಿತದ ಸಮಯದಲ್ಲಿಯೇ ಇದ್ದಂತಹ ದೇವಾಲಯ. ಈ ದೇವಾಲಯವು ಸುಳ್ಯ ತಾಲೂಕಿನ ಕೂತ್ಕೂಂಜ ಗ್ರಾಮ ಮತ್ತು ಪಂಬೆತ್ತಾಡಿ ಗ್ರಾಮದ ದಕ್ಷಿಣ ಭಾಗಕ್ಕೆ ದಟ್ಟಾರಣ್ಯದಿಂದ ಕೂಡಿದ ಬಂಟಮಲೆ ಎಂಬ ಬೆಟ್ಟದ ತಪ್ಪಲಿನಲ್ಲಿ ಇದೆ.
ಈ ಬೆಟ್ಟದ ಮೇಲ್ಭಾಗದಲ್ಲಿ ನಾಗತೀರ್ಥ ಎಂಬ ಹೊಳೆಯ ಉಗಮಸ್ಥಾನವಿದೆ. ದೇವಳದಿಂದ ಸುಮಾರು 15 ಕಿ ಮೀ ದೂರವಿರುವ ಮೂಲ ನಾಗತೀರ್ಥವನ್ನು ಜಾತ್ರಾ ಸಮಯ ವರ್ಷಂ ಪ್ರತಿ ಪೂಜೆ ಮಾಡಿ ಅಭಿಷೇಕಕ್ಕೆ ತೀರ್ಥ ತರುವುದು ಸಂಪ್ರದಾಯ.
ದೇವಸ್ಥಾನದ ಸ್ಥಳ ಪುರಾಣಕ್ಕೆ ಸಂಬಂಧಪಟ್ಟಂತೆ ಮಹಾಭಾರತದ ಹಿನ್ನೆಲೆ ಇದೆ. ಪಾಂಡವರ ವನವಾಸ ಕಾಲದಲ್ಲಿ ಅವರಿಗೆ ಯೋಗ್ಯವಾದ 5 ಲಿಂಗಗಳನ್ನು ಯೋಗಿಗಳು ಪ್ರತಿಷ್ಠಾಪಿಸಿ ಪೂಜಿಸಿದರು ಎಂಬ ಪ್ರತೀತಿ ಇದೆ.









































