ಬಂಗಾಳಕೊಲ್ಲಿ ಹಾಗೂ ಅಂಡಮಾನ್ ನಿಕೋಬಾರ್ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ದಕ್ಷಿಣ ಭಾರತದ ರಾಜ್ಯಗಳಿಗೆ ಮತ್ತೆ ಭಾರೀ ಮಳೆಯ ಮುನ್ಸೂಚನೆ ಸಿಕ್ಕಿದೆ. ಈ ವಾಯು ಚಂಡಮಾರುತ ಪರಿಚಲನೆಯು ಮತ್ತಷ್ಟು ತೀವ್ರಗೊಂಡು

ನವೆಂಬರ್ 15ರ ವೇಳೆಗೆ ‘ಸೆನ್ಯಾರ್’ (Senyar) ಚಂಡಮಾರುತವಾಗಿ ಬದಲಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.


ಮಳೆ ಮತ್ತು ಬಿರುಗಾಳಿ ಮುನ್ಸೂಚನೆಯ ಪ್ರಮುಖ ಅಂಶಗಳು:

ದಕ್ಷಿಣ ಭಾರತದ ರಾಜ್ಯಗಳಿಗೆ ಮಳೆ ಎಚ್ಚರಿಕೆ: ವಾಯುವ್ಯ ದಿಕ್ಕಿನತ್ತ ಚಲಿಸುತ್ತಿರುವ ಈ ಹವಾಮಾನ ವೈಪರೀತ್ಯವು ನವೆಂಬರ್ 15ರಂದು ತೀವ್ರಗೊಳ್ಳಲಿದೆ. ಇದರ ಪ್ರಭಾವದಿಂದ ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈಗಾಗಲೇ ಕೇರಳದ ಕರಾವಳಿ ಭಾಗಗಳಲ್ಲಿ ಜಿಟಿಜಿಟಿ ಮಳೆ ಆರಂಭವಾಗಿದ್ದು, ಮುಂದಿನ 3 ದಿನಗಳ ಕಾಲ ಸಾಧಾರಣದಿಂದ ಭಾರೀ ಮಳೆ ಸುರಿಯಲಿದೆ.


ಗಂಟೆಗೆ 60 ಕಿ.ಮೀ ವೇಗದಲ್ಲಿ ಬಿರುಗಾಳಿ: ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಅಂಡಮಾನ್ ಸಮುದ್ರ ಹಾಗೂ ಆಗ್ನೇಯ ಬಂಗಾಳಕೊಲ್ಲಿಯಲ್ಲಿ ನವೆಂಬರ್ 16ರವರೆಗೆ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಂಭವವಿದೆ. ನವೆಂಬರ್ 17ರ ವೇಳೆಗೆ ನೈಋತ್ಯ ಬಂಗಾಳಕೊಲ್ಲಿಯಲ್ಲೂ ಗಾಳಿಯ ವೇಗ 55 ಕಿ.ಮೀ ಇರಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಉತ್ತರ ಭಾರತದ ಹವಾಮಾನ ವರದಿ: ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಪಶ್ಚಿಮ ರಾಜಸ್ಥಾನದ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದರೆ, ನವದೆಹಲಿ, ಹರಿಯಾಣ ಮತ್ತು ಚಂಡೀಗಢದಲ್ಲಿ ಮುಂದಿನ ಮೂರು ದಿನಗಳ ಕಾಲ ಒಣಹವೆ ಮುಂದುವರಿಯಲಿದೆ ಎಂದು ಐಎಂಡಿ ವರದಿ ಮಾಡಿದೆ









































