ಪುತ್ತೂರು:ಮೋದಿ ಸರ್ಕಾರದ ಕನಸಿನ ಯೋಜನೆ ಅಮೃತ್ 2.0 (ಅಟಲ್ ಮಿಷನ್ ಫಾರ್ ರಿಜುವಿನೇಷನ್ ಅಂಡ್ ಅರ್ಬನ್ ಟ್ರಾನ್ಸ್‌ಫರ್ಮೇಷನ್) ಯೋಜನೆಯಡಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಕಲ್ಯಾಣಿ ಅಭಿವೃದ್ಧಿ ಮತ್ತು ಸೌಂದರ್ಯೀಕರಣ ಕಾಮಗಾರಿಗೆ ನಿನ್ನೆ ಶಂಕುಸ್ಥಾಪನೆ ನೆರವೇರಿತು.

ಇದೀಗ ಈ ಯೋಜನೆ ಬಗ್ಗೆ ಬಿಜೆಪಿ ಪ್ರಮುಖರು ಕೇಂದ್ರ ಸರ್ಕಾರ ಕೂಡ ಪಾಲು ನೀಡಿದ್ದು ಆದರೆ ಈ ಬಗ್ಗೆ ಪ್ರಸ್ತಾಪ ಎತ್ತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ಧಾರೆ ಒಟ್ಟು ರೂ. 3,73,94,992 ವೆಚ್ಚದ ಈ ಕಾಮಗಾರಿಯಲ್ಲಿ 50% ಕೇಂದ್ರ ಸರ್ಕಾರದ ಪಾಲು, 30% ರಾಜ್ಯ ಸರ್ಕಾರದ ಪಾಲು ಮತ್ತು 20% ಪುತ್ತೂರು ನಗರಸಭೆಯ ಪಾಲು ಇರಲಿದೆ.ಡಿಪಿಆರ್ ಪ್ರಕಾರ, ಹಾಲಿ ಕಲ್ಯಾಣಿ ಸುಧಾರಣೆಗೆ ರೂ. 1.09 ಕೋಟಿ, ಕೆರ್ಬ್ಸ್ ಸಹಿತ ನಡಿಗೆ ಪಥಕ್ಕೆ ರೂ. 58.53 ಲಕ್ಷ, ಕಲ್ಲಿನ ಬೆಂಚ್, ಎಲ್‌ಇಡಿ ದೀಪ, ನಾಮಫಲಕ ಮತ್ತು ಲ್ಯಾಂಡ್‌ಸ್ಕೇಪ್‌ಗೆ ರೂ. 21.76 ಲಕ್ಷ, ಆಂಫಿಥಿಯೇಟರ್‌ಗೆ ರೂ. 3.34 ಲಕ್ಷ, 15 ಮಕ್ಕಳ ಆಟದ ಉಪಕರಣಗಳಿಗೆ ರೂ. 20.05 ಲಕ್ಷ ಮತ್ತು ಪಾರ್ಕ್ ಅಭಿವೃದ್ಧಿಗೆ ರೂ. 57.34 ಲಕ್ಷ ವೆಚ್ಚ ಮಾಡಲಾಗುವುದು.


ಜೊತೆಗೆ ಮುಂದಿನ 5 ವರ್ಷಗಳ ಕಾಲ ಕಲ್ಯಾಣಿ ನಿರ್ವಹಣೆಗಾಗಿ ರೂ. 31.28 ಲಕ್ಷ ಮೀಸಲಿಡಲಾಗಿದೆ.ಕಾಮಗಾರಿ ಪೂರ್ಣಗೊಂಡ ನಂತರ ಪುಷ್ಕರಣಿ ಶಿಲಾಮಯವಾಗಿ ಮೆರೆದಾಡಲಿದೆ. ದೇವಾಲಯದ ಸುತ್ತಲೂ ಸೌಂದರ್ಯೀಕರಣವಾಗಿ, ಮಹಾಲಿಂಗೇಶ್ವರನ ಸನ್ನಿಧಿ ಇನ್ನಷ್ಟು ಕಂಗೊಳಿಸಲಿದೆ.


ಈ ಯೋಜನೆ ಅನುಷ್ಠಾನ ಕೇಂದ್ರ ಸರ್ಕಾರದ್ದಾಗಿದ್ದು, ಆದರೆ ಸ್ಥಳೀಯ ಬಿಜೆಪಿ ಜನಪ್ರತಿನಿಧಿಗಳನ್ನು ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಕಡೆಗಣಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪ್ರಧಾನಿ ಮೋದಿಯವರ ಕನಸಿನ ಯೋಜನೆಯಾಗಿದ್ದರೂ, ಸ್ಥಳೀಯ ಶಾಸಕರು ಫ್ಲೆಕ್ಸ್, ಬ್ಯಾನರ್‌ಗಳಲ್ಲಿ ತನ್ನ ಫೋಟೋ ಹಾಕಿಕೊಂಡು ಕೇಂದ್ರ ಯೋಜನೆಯನ್ನು ಮರೆಮಾಚುತ್ತಿದ್ದಾರೆ ಎಂದು ಬಿಜೆಪಿ ಪ್ರಮುಖರು ಗಂಭೀರ ಆರೋಪ ಮಾಡಿದ್ದಾರೆ.








































