ಪುತ್ತೂರು, ನ.10: ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (ವಿಸಿಇಟಿ) ಪುತ್ತೂರು ಇದರ 3ನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನಘಾ ಕೆ.ಎನ್. ಅವರು ಕರ್ನಾಟಕ ರಾಜ್ಯ ಅಂಡರ್-23 ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಬಿಸಿಸಿಐ ಆಯೋಜಿಸುತ್ತಿರುವ ಅಂಡರ್-23 ಮಹಿಳೆಯರ ಟಿ-20 ಟ್ರೋಫಿ 2026-27 ಟೂರ್ನಮೆಂಟ್ ಇದೇ ನವೆಂಬರ್ 14 ರಿಂದ 21 ರವರೆಗೆ ರಾಯ್‌ಪುರದಲ್ಲಿ ನಡೆಯಲಿದ್ದು, ಇದರಲ್ಲಿ ಅನಘಾ ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿರುವ 15 ಜನರ ತಂಡದಲ್ಲಿ ಅನಘಾ ಸ್ಥಾನ ಪಡೆದಿದ್ದಾರೆ.

ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಅನಘಾ ಅವರು ಈ ಹಿಂದೆ ವಿಟಿಯು 27ನೇ ರಾಜ್ಯ ಮಟ್ಟದ ಅಥ್ಲೆಟಿಕ್ ಮೀಟ್‌ನಲ್ಲಿ ಚಿನ್ನದ ಪದಕ ಗೆದ್ದು ಕಾಲೇಜಿಗೆ ಕೀರ್ತಿ ತಂದಿದ್ದರು. ಈಗ ಕ್ರಿಕೆಟ್‌ನಲ್ಲೂ ರಾಜ್ಯ ತಂಡಕ್ಕೆ ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಸಾಧನೆ ಮಾಡಿದ್ದಾರೆ.ಅನಘಾ ಅವರ ಈ ಸಾಧನೆಗೆ ವಿಸಿಇಟಿ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.









































