ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕುಗಳ ವ್ಯಾಪ್ತಿಯಲ್ಲಿರುವ ಮಳೆ ಮಾಪನ ಕೇಂದ್ರಗಳ ಪರಿಶೀಲನೆ, ದುರಸ್ತಿ, ಪುನರ್‌ಮಾಪನ ಹಾಗೂ ಹೊಸ ಸ್ವಯಂಚಾಲಿತ ಮಳೆ ಮಾಪನ ಕೇಂದ್ರಗಳ ಸ್ಥಾಪನೆಗೆ ಆಗ್ರಹಿಸಿ ಕೃಷಿಕರ ಹಿತರಕ್ಷಣಾ ವೇದಿಕೆ, ಸುಳ್ಯ ಇದರ ವತಿಯಿಂದ ಸಂಚಾಲಕ, ಶ್ರೀ ಕೃಷ್ಣ ಪ್ರಸಾದ್ ಮಡ್ತಿಲ ಅವರು ಸಲ್ಲಿಸಿದ್ದ ಮನವಿಗೆ ರಾಜ್ಯ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ.

ಸೆಪ್ಟೆಂಬರ್ 15, 2026 ರಂದು ಕೃಷಿಕರ ಹಿತರಕ್ಷಣಾ ವೇದಿಕೆ, ಸುಳ್ಯ ವತಿಯಿಂದ ಶ್ರೀ ಕೃಷ್ಣ ಪ್ರಸಾದ್ ಮಡ್ತಿಲ (ಮಾಜಿ ಅಧ್ಯಕ್ಷರು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ಮಾಜಿ ನಿರ್ದೇಶಕರು, ಕ್ಯಾಂಪ್ಕೋ) ಅವರು ರಾಜ್ಯದ ಮಾನ್ಯ ಕೃಷಿ ಸಚಿವರಾದ ಶ್ರೀ ಪಿ. ಎಂ. ನರೇಂದ್ರ ಸ್ವಾಮಿ ಅವರಿಗೆ ವಿವರವಾದ ಮನವಿ ಪತ್ರವನ್ನು ಸಲ್ಲಿಸಿದ್ದರು.



ಸುಳ್ಯ ತಾಲೂಕಿನ ಐವರ್ನಾಡು, ಬೆಳ್ಳಾರೆ, ಕಲ್ಮಕಾರು, ಅಜ್ಜಾವರ, ಮಂಡೆಕೋಲು, ಸುಬ್ರಹ್ಮಣ್ಯ ಸುತ್ತಮುತ್ತ ಹಾಗೂ ಪುತ್ತೂರು-ಕಡಬ ತಾಲೂಕುಗಳ ಕೊಳ್ತಿಗೆ, ಗುತ್ತಿಗಾರು, ದೊಡ್ಡತೋಟ, ಬಾಳುಗೋಡು ಸೇರಿದಂತೆ ಭೌಗೋಳಿಕವಾಗಿ ವೈವಿಧ್ಯಮಯವಾಗಿರುವ ಈ ಪ್ರದೇಶಗಳಲ್ಲಿ ನಿಖರವಾದ ಮಳೆ ದತ್ತಾಂಶದ ಅಗತ್ಯವನ್ನು ಮನವಿಯಲ್ಲಿ ಒತ್ತಿಹೇಳಲಾಗಿತ್ತು.



ರೈತರು ಮತ್ತು ಸರ್ಕಾರ ಪ್ರೀಮಿಯಂ ಪಾವತಿಸುವ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಹಾಗೂ ಬೆಳೆಹಾನಿ ಪರಿಹಾರಕ್ಕೆ ನಿಖರ ಮಳೆ ಮಾಪನ ಅತ್ಯಗತ್ಯವಾಗಿರುವುದರಿಂದ, ನಿಷ್ಕ್ರಿಯ ಸಾಧನಗಳ ದುರಸ್ತಿ ಮತ್ತು ಗ್ರಾಮ ಪಂಚಾಯಿತಿ/ಹೋಬಳಿ ಮಟ್ಟದಲ್ಲಿ ಹೊಸ ಸ್ವಯಂಚಾಲಿತ ಮಳೆ ಮಾಪನ ಕೇಂದ್ರಗಳು ಹಾಗೂ ಹವಾಮಾನ ಕೇಂದ್ರಗಳನ್ನು (AWS) ಸ್ಥಾಪಿಸುವಂತೆ ಕೋರಲಾಗಿತ್ತು. ಈ ಮನವಿಗೆ ಸ್ಪಂದಿಸಿದ ಮಾನ್ಯ ಕೃಷಿ ಸಚಿವರು, ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆಯ ಆಯುಕ್ತರಿಗೆ ನಿರ್ದೇಶನ ನೀಡಿದ್ದರು.
ಅದರಂತೆ, ಕೃಷಿ ಆಯುಕ್ತರ ಕಾರ್ಯಾಲಯವು ಅಧಿಕೃತ ಪತ್ರದ ಮೂಲಕ, ಸದರಿ ವಿಷಯವು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ಸಂಬಂಧಿಸಿರುವುದರಿಂದ ಮುಂದಿನ ಅಗತ್ಯ ಕ್ರಮ ಕೈಗೊಂಡು ಅರ್ಜಿದಾರರಿಗೆ ನೇರವಾಗಿ ಮಾಹಿತಿ ನೀಡುವಂತೆ ತೋಟಗಾರಿಕೆ ಇಲಾಖೆಯ ನಿರ್ದೇಶಕರಿಗೆ ಮನವಿ ಪತ್ರವನ್ನು ರವಾನಿಸಿದೆ. ರೈತರ ಈ ಮಹತ್ವದ ಬೇಡಿಕೆಗೆ ಸರ್ಕಾರ ಮತ್ತು ಇಲಾಖೆಯ ಉನ್ನತ ಅಧಿಕಾರಿಗಳಿಂದ ದೊರೆತಿರುವ ಈ ತ್ವರಿತ ಸ್ಪಂದನೆಯನ್ನು ಕೃಷಿಕರ ಹಿತರಕ್ಷಣಾ ವೇದಿಕೆ,
ಸುಳ್ಯ ಹೃತ್ಪೂರ್ವಕವಾಗಿ ಸ್ವಾಗತಿಸಿದೆ. ಕೇವಲ ಕಾಗದಪತ್ರಗಳಿಗೆ ಸೀಮಿತವಾಗದೆ, ಶೀಘ್ರದಲ್ಲೇ ತೋಟಗಾರಿಕೆ ಮತ್ತು ಸಂಬಂಧಪಟ್ಟ ಇಲಾಖೆಗಳು ಕ್ಷೇತ್ರ ಮಟ್ಟದಲ್ಲಿ ದೋಷಪೂರಿತ ಮಳೆ ಮಾಪನ ಕೇಂದ್ರಗಳ ದುರಸ್ತಿ, ಹೊಸ ಕೇಂದ್ರಗಳ ಸ್ಥಾಪನೆ ಹಾಗೂ ಅವುಗಳ ನಿರಂತರ ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಿವೆ ಎಂಬ ವಿಶ್ವಾಸವನ್ನು ವೇದಿಕೆ ವ್ಯಕ್ತಪಡಿಸಿದೆ.
ಮುಂದಿನ ದಿನಗಳಲ್ಲಿಯೂ ಸಮಸ್ತ ಕೃಷಿಕ ಸಮುದಾಯಕ್ಕೆ ಸಂಬಂಧಿಸಿದ ಇಂತಹ ಜ್ವಲಂತ ಸಮಸ್ಯೆಗಳನ್ನು ಕೈಗೆತ್ತಿಕೊಂಡು, ರೈತರಿಗೆ ನ್ಯಾಯ ಒದಗಿಸಲು, ಅವರ ಧ್ವನಿಯಾಗಿ ನಿಲ್ಲಲು ಮತ್ತು ಕೃಷಿಕರ ಸರ್ವತೋಮುಖ ಏಳಿಗೆಗಾಗಿ ವೇದಿಕೆಯು ನಿರಂತರವಾಗಿ ಶ್ರಮಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.









































