ಬೆಂಗಳೂರು–ಮಂಗಳೂರು–ಗೋವಾ ನಡುವೆ ನೂತನ ವಂದೇ ಭಾರತ್ ರೈಲು: ನ.15ರಿಂದ ನಿಯಮಿತ ಸಂಚಾರ ಆರಂಭ

Picture of Savistara

Savistara

Bureau Report

ಬೆಂಗಳೂರು/ಸುಬ್ರಮಣ್ಯ: ನೈರುತ್ಯ ರೈಲ್ವೆ ವ್ಯಾಪ್ತಿಯ ಕರ್ನಾಟಕ ಮತ್ತು ಗೋವಾ ನಡುವಿನ ರೈಲು ಸಂಪರ್ಕಕ್ಕೆ ಮತ್ತಷ್ಟು ಬಲ ನೀಡುವ ನಿಟ್ಟಿನಲ್ಲಿ ಯಶವಂತಪುರ (ಬೆಂಗಳೂರು)–ಮಂಗಳೂರು–ಮಡಗಾಂವ್ (ಗೋವಾ) ನಡುವೆ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭವಾಗಲಿದೆ.

Advertisement

ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು ನಿಲ್ದಾಣಗಳಲ್ಲಿ ನಿಲುಗಡೆ: ಕರ್ನಾಟಕದ ರಾಜಧಾನಿ ಬೆಂಗಳೂರು, ಕರಾವಳಿ ಜಿಲ್ಲೆಗಳು ಹಾಗೂ ಗೋವಾ ರಾಜ್ಯದ ನಡುವಿನ ಪ್ರಯಾಣವನ್ನು ವೇಗವಾಗಿ ಮತ್ತು ಆರಾಮದಾಯಕವಾಗಿಸುವ ಉದ್ದೇಶದಿಂದ ಈ ರೈಲು ಸೇವೆ ಆರಂಭಿಸಲಾಗುತ್ತಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಯಾಣಿಕರಿಗೆ ಸುಬ್ರಹ್ಮಣ್ಯ ರೋಡ್ ಮತ್ತು ಕಬಕ ಪುತ್ತೂರು ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ.

Advertisement

Advertisement

ನ.13ರಂದು ಉದ್ಘಾಟನಾ ವಿಶೇಷ ರೈಲು: ಹೊಸ ವಂದೇ ಭಾರತ್ ರೈಲು ಸೇವೆಯ ಹಿನ್ನೆಲೆಯಲ್ಲಿ ನವೆಂಬರ್ 13ರಂದು (ಶುಕ್ರವಾರ) ಎರಡು ಉದ್ಘಾಟನಾ ವಿಶೇಷ ರೈಲುಗಳು ಸಂಚರಿಸಲಿವೆ.

Advertisement

Advertisement

ವೇಳಾಪಟ್ಟಿ ಹೀಗಿದೆ:ರೈಲು ಸಂಖ್ಯೆ 06512 ಎಸ್ಎಂವಿಟಿ ಬೆಂಗಳೂರಿನಿಂದ ಮಧ್ಯಾಹ್ನ 1.30ಕ್ಕೆ ಹೊರಟು ಮರುದಿನ ರಾತ್ರಿ 2.55ಕ್ಕೆ ಮಡಗಾಂವ್ ತಲುಪಲಿದೆ. ಮಾರ್ಗಮಧ್ಯೆ ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್ ಹಾಗೂ ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

Advertisement

Advertisement

ಮತ್ತೊಂದು ಉದ್ಘಾಟನಾ ವಿಶೇಷ ರೈಲು ಸಂಖ್ಯೆ 06213 ನವೆಂಬರ್ 13ರಂದು ಮಧ್ಯಾಹ್ನ 1.30ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಅದೇ ದಿನ ರಾತ್ರಿ 9 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ. ಈ ರೈಲು ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ ಮತ್ತು ಶ್ರವಣಬೆಳಗೊಳ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.ಈ ಎರಡೂ ಉದ್ಘಾಟನಾ ವಿಶೇಷ ರೈಲುಗಳು ತಲಾ 16 ಬೋಗಿಗಳನ್ನು ಹೊಂದಿರಲಿವೆ.

ನ.15ರಿಂದ ವಾರದಲ್ಲಿ ಆರು ದಿನ ಸಂಚಾರ: ಉದ್ಘಾಟನಾ ಸಂಚಾರದ ಬಳಿಕ ನವೆಂಬರ್ 15ರಿಂದ ಯಶವಂತಪುರ–ಮಡಗಾಂವ್ ನಡುವೆ ನಿಯಮಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭವಾಗಲಿದೆ.ರೈಲು ಸಂಖ್ಯೆ 26655 ಯಶವಂತಪುರದಿಂದ ಮಡಗಾಂವ್‌ಗೆ ಬುಧವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ. ರೈಲು ಸಂಖ್ಯೆ 26656 ಮಡಗಾಂವ್‌ನಿಂದ ಯಶವಂತಪುರಕ್ಕೆ ಗುರುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ಸಂಚರಿಸಲಿದೆ.

ಯಶವಂತಪುರದಿಂದ ಮಡಗಾಂವ್‌ಗೆ ರೈಲು ವೇಳಾಪಟ್ಟಿ:ರೈಲು ಸಂಖ್ಯೆ 26655 ಯಶವಂತಪುರ ಜಂಕ್ಷನ್‌ನಿಂದ ಬೆಳಿಗ್ಗೆ 7.35ಕ್ಕೆ ಹೊರಟು ಅದೇ ದಿನ ರಾತ್ರಿ 8.55ಕ್ಕೆ ಮಡಗಾಂವ್ ತಲುಪಲಿದೆ. ಈ ರೈಲು ಮಾರ್ಗಮಧ್ಯೆ ಶ್ರವಣಬೆಳಗೊಳಕ್ಕೆ ಬೆಳಿಗ್ಗೆ 9.03, ಹಾಸನಕ್ಕೆ 9.38, ಸಕಲೇಶಪುರಕ್ಕೆ 10.20, ಸುಬ್ರಹ್ಮಣ್ಯ ರೋಡ್‌ಗೆ ಮಧ್ಯಾಹ್ನ 12.40, ಕಬಕ ಪುತ್ತೂರಿಗೆ 1.25 ಹಾಗೂ ಮಂಗಳೂರು ಜಂಕ್ಷನ್‌ಗೆ ಮಧ್ಯಾಹ್ನ 3.05ಕ್ಕೆ ತಲುಪಲಿದೆ.

ಮಂಗಳೂರು ಜಂಕ್ಷನ್‌ನಲ್ಲಿ 10 ನಿಮಿಷಗಳ ನಿಲುಗಡೆಯಿದ್ದು, ಮಧ್ಯಾಹ್ನ 3.15ಕ್ಕೆ ಹೊರಡಲಿದೆ. ಬಳಿಕ ಉಡುಪಿ, ಕುಂದಾಪುರ, ಮೂಕಾಂಬಿಕಾ ರೋಡ್ ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್ ಮತ್ತು ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆಯಾಗಿ ರಾತ್ರಿ 8.55ಕ್ಕೆ ಮಡಗಾಂವ್ ತಲುಪಲಿದೆ.

ಮಡಗಾಂವ್‌ನಿಂದ ಯಶವಂತಪುರಕ್ಕೆ ವೇಳಾಪಟ್ಟಿ:ರೈಲು ಸಂಖ್ಯೆ 26656 ಮಡಗಾಂವ್‌ನಿಂದ ಬೆಳಿಗ್ಗೆ 8.20ಕ್ಕೆ ಹೊರಟು ಅದೇ ದಿನ ರಾತ್ರಿ 9.15ಕ್ಕೆ ಯಶವಂತಪುರ ಜಂಕ್ಷನ್ ತಲುಪಲಿದೆ.

ಈ ರೈಲು ಕಾರವಾರಕ್ಕೆ ಬೆಳಿಗ್ಗೆ 9.03, ಗೋಕರ್ಣ ರೋಡ್‌ಗೆ 9.48, ಮುರ್ಡೇಶ್ವರಕ್ಕೆ 11, ಮೂಕಾಂಬಿಕಾ ರೋಡ್ ಬೈಂದೂರಿಗೆ 11.20, ಕುಂದಾಪುರಕ್ಕೆ 11.48 ಹಾಗೂ ಉಡುಪಿಗೆ ಮಧ್ಯಾಹ್ನ 12.18ಕ್ಕೆ ತಲುಪಲಿದೆ.

ಮಂಗಳೂರು ಜಂಕ್ಷನ್‌ಗೆ ಮಧ್ಯಾಹ್ನ 1.50ಕ್ಕೆ ಆಗಮಿಸಿ 2 ಗಂಟೆಗೆ ಹೊರಡಲಿದೆ. ಬಳಿಕ ಕಬಕ ಪುತ್ತೂರಿಗೆ 2.43, ಸುಬ್ರಹ್ಮಣ್ಯ ರೋಡ್‌ಗೆ 3.28, ಸಕಲೇಶಪುರಕ್ಕೆ ಸಂಜೆ 5.30, ಹಾಸನಕ್ಕೆ 6.13 ಹಾಗೂ ಶ್ರವಣಬೆಳಗೊಳಕ್ಕೆ 6.43ಕ್ಕೆ ತಲುಪಲಿದೆ. ಅಂತಿಮವಾಗಿ ರಾತ್ರಿ 9.15ಕ್ಕೆ ಯಶವಂತಪುರ ತಲುಪಲಿದೆ.

ಕರಾವಳಿ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ: ನೂತನ ರೈಲು ಸೇವೆಯಿಂದ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಕರಾವಳಿ ಭಾಗದ ನಡುವಿನ ಪ್ರಯಾಣಕ್ಕೆ ಮತ್ತಷ್ಟು ಅನುಕೂಲವಾಗಲಿದೆ. ವಿಶೇಷವಾಗಿ ಕಡಬ, ಸುಳ್ಯ, ಪುತ್ತೂರು ಹಾಗೂ ಸುಬ್ರಹ್ಮಣ್ಯ ಭಾಗದ ಜನರಿಗೆ ಕಬಕ ಪುತ್ತೂರು ಮತ್ತು ಸುಬ್ರಹ್ಮಣ್ಯ ರೋಡ್ ನಿಲ್ದಾಣಗಳ ಮೂಲಕ ಬೆಂಗಳೂರು ಹಾಗೂ ಗೋವಾಕ್ಕೆ ಪ್ರಯಾಣಿಸಲು ಉತ್ತಮ ಅವಕಾಶ ದೊರೆಯಲಿದೆ.

ಇದಲ್ಲದೆ ಉಡುಪಿ, ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ, ಮುರ್ಡೇಶ್ವರ, ಗೋಕರ್ಣ, ಕಾರವಾರ ಹಾಗೂ ಗೋವಾದಂತಹ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣಗಳಿಗೆ ನೇರ ರೈಲು ಸಂಪರ್ಕ ಲಭ್ಯವಾಗಲಿದೆ. ಪ್ರವಾಸಿಗರು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಯಾತ್ರಾರ್ಥಿಗಳು ಸೇರಿದಂತೆ ವಿವಿಧ ವರ್ಗದ ಪ್ರಯಾಣಿಕರಿಗೆ ಈ ಸೇವೆ ಪ್ರಯೋಜನಕಾರಿಯಾಗಲಿದೆ.

16 ಬೋಗಿಗಳ ಆಧುನಿಕ ರೈಲು: ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು 16 ಬೋಗಿಗಳನ್ನು ಹೊಂದಿರಲಿದ್ದು, ಎಕ್ಸಿಕ್ಯೂಟಿವ್ ಚೇರ್ ಕಾರ್ ಹಾಗೂ ಚೇರ್ ಕಾರ್ ವ್ಯವಸ್ಥೆ ಇರಲಿದೆ. ಆಧುನಿಕ ಸೌಲಭ್ಯಗಳು ಮತ್ತು ಆರಾಮದಾಯಕ ಆಸನ ವ್ಯವಸ್ಥೆಯೊಂದಿಗೆ ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ಒದಗಿಸುವ ನಿರೀಕ್ಷೆಯಿದೆ.

ಮಂಗಳೂರು–ಮಡಗಾಂವ್ ವಂದೇ ಭಾರತ್ ಸೇವೆ ರದ್ದು: ಇದೇ ವೇಳೆ, ಪ್ರಸ್ತುತ ಸಂಚರಿಸುತ್ತಿರುವ ರೈಲು ಸಂಖ್ಯೆ 20645/20646 ಮಡಗಾಂವ್–ಮಂಗಳೂರು ಸೆಂಟ್ರಲ್–ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ನವೆಂಬರ್ 15ರಿಂದ ಎರಡೂ ದಿಕ್ಕುಗಳಲ್ಲಿ ರದ್ದುಗೊಳಿಸಲಾಗುವುದು ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ನೂತನ ರೈಲು ಸೇವೆಯ ಆರಂಭವು ಬೆಂಗಳೂರು, ದಕ್ಷಿಣ ಕನ್ನಡ ಕರಾವಳಿ ಹಾಗೂ ಗೋವಾ ನಡುವಿನ ಸಾರಿಗೆ ಸಂಪರ್ಕಕ್ಕೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ. ಈ ಕುರಿತು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಅವರು ನವೆಂಬರ್ 11ರಂದು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

[t4b-ticker]
error: Content is protected !!