ದೀಪದ ಬೆಳಕಲ್ಲಿ ತಾಂಡಾದ ಬದುಕು: ಬಂಜಾರರ ದವಾಳಿಯ ಸೊಗಡು :ಲೇಖನ ಲಿಂಗರಾಜ್ ಗಾಡಿಕೊಪ್ಪ

Picture of Savistara

Savistara

Bureau Report

ದೀಪದ ಬೆಳಕಲ್ಲಿ ತಾಂಡಾದ ಬದುಕು: ಬಂಜಾರರ ದವಾಳಿಯ ಸೊಗಡು

Advertisement

ದೀಪ ಹಿಡಿದು ಮನೆಮನೆಗೆ ತೆರಳುವ ಯುವತಿಯರು, ಗೋರ್‌ಬೋಲಿ ಹಾಡುಗಳ ಸೊಗಡು, ಪೂರ್ವಜರ ಸ್ಮರಣೆ ಹಾಗೂ ಸಮುದಾಯವನ್ನು ಬೆಸೆಯುವ ಆಚರಣೆಗಳು… ಬಂಜಾರರ ದೀಪಾವಳಿಯ ಸಾಂಸ್ಕೃತಿಕ ವೈಶಿಷ್ಟ್ಯದತ್ತ ಒಂದು ನೋಟ.

Advertisement

Advertisement

‘ವರ್ಷೆದಾಡ್ ಕೋರ್ ದವಾಳಿ… ಬಾಪು ತೋನ ಮೇರಾ…’

Advertisement

ಅಮಾವಾಸ್ಯೆಯ ಕತ್ತಲು ಇಳಿಯುತ್ತಿದ್ದಂತೆ ತಾಂಡಾದ ಬೀದಿಗಳಲ್ಲಿ ಈ ಹಾಡಿನ ಇಂಪು ಕೇಳಿಬರುತ್ತದೆ. ಕನ್ನಡಿ ಕಸೂತಿಯಿಂದ ಕಂಗೊಳಿಸುವ ಉಡುಪು, ಬೆಳ್ಳಿಯ ಆಭರಣ ತೊಟ್ಟ ಯುವತಿಯರು ಕೈಯಲ್ಲಿ ದೀಪ ಹಿಡಿದು ಮನೆಮನೆಯ ಅಂಗಳಕ್ಕೆ ಬರುತ್ತಾರೆ. ಹಿರಿಯರನ್ನು ಸಂಬಂಧದ ಹೆಸರಿನಿಂದ ಕರೆದು ಹಾಡಿನ ಮೂಲಕ ಹರಸುತ್ತಾರೆ. ಮನೆಯವರು ದೀಪಕ್ಕೆ ಎಣ್ಣೆ ಹಾಕಿ, ಕಾಣಿಕೆ ನೀಡಿ ಆಶೀರ್ವದಿಸುತ್ತಾರೆ. ಒಂದು ಮನೆಯ ಹಾಡು ಮುಗಿಯುವಷ್ಟರಲ್ಲಿ ಇನ್ನೊಂದು ಮನೆಯ ಬಾಗಿಲಲ್ಲಿ ಸಡಗರ ಆರಂಭ! ಮಕ್ಕಳು ಕುತೂಹಲದಿಂದ ಯುವತಿಯರ ಹಿಂದೆ ಹೆಜ್ಜೆ ಹಾಕುತ್ತಾರೆ. ಅಂಗಳದಲ್ಲಿ ನಿಂತ ಹಿರಿಯರ ಮುಖದಲ್ಲಿ ಹಳೆಯ ದವಾಳಿಗಳ ನೆನಪು ಮಿನುಗುತ್ತದೆ. ಹೀಗೆ ತಾಂಡಾದ ಕತ್ತಲಿಗೆ ದೀಪದ ಬೆಳಕಿನ ಜೊತೆಗೆ ಬಾಂಧವ್ಯದ ಬೆಚ್ಚನೆಯೂ ಸೇರುತ್ತದೆ.

Advertisement

ಬಂಜಾರ–ಲಂಬಾಣಿ ಸಮುದಾಯದ ದೀಪಾವಳಿ ಎಂದರೆ ಕೇವಲ ಹಣತೆ, ಸಿಹಿತಿಂಡಿ, ಪಟಾಕಿಗಳ ಸಂಭ್ರಮವಲ್ಲ. ಹಿರಿಯರ ನೆನಪು, ಜಾನಪದ ಹಾಡು, ಪ್ರಕೃತಿಯ ಆರಾಧನೆ ಹಾಗೂ ಊರಿನ ಒಗ್ಗಟ್ಟಿನ ಹಬ್ಬ. ನನ್ನೂರು ಶಿವಮೊಗ್ಗದ ಗಾಡಿಕೊಪ್ಪ ತಾಂಡಾದಲ್ಲಿಯೂ ದವಾಳಿಯ ಆಚರಣೆ ಇದೆ. ಪ್ರತಿ ಆಚರಣೆಯ ಹಿಂದೆ ಹಿರಿಯರು ಉಳಿಸಿದ ಬದುಕಿನ ಪಾಠವಿದೆ. ಬಂಜಾರರ ಬದುಕು ಒಂದು ಕಾಲದಲ್ಲಿ ಊರೂರು ಸುತ್ತುವ ಸರಕು ಸಾಗಣೆ, ಪಶುಪಾಲನೆ ಹಾಗೂ ಪ್ರಕೃತಿಯೊಡನೆ ಬೆಸೆದುಕೊಂಡಿತ್ತು. ಜೀವನದ ಏರಿಳಿತಗಳ ನಡುವೆಯೂ ಹಾಡನ್ನು, ಭಾಷೆಯನ್ನು, ಹಬ್ಬವನ್ನು ಅವರು ಕೈಬಿಡಲಿಲ್ಲ. ಆ ನೆನಪುಗಳು ಇಂದು ತಾಂಡಾದ ಅಂಗಳದಲ್ಲಿ ಮತ್ತೆ ಜೀವ ಪಡೆಯುತ್ತವೆ.

Advertisement

ಹಬ್ಬಕ್ಕೂ ಮೊದಲೇ ತಾಂಡಾದ ಅಂಗಳದಲ್ಲಿ ದವಾಳಿಯ ಸಡಗರ

Advertisement

ಗೋರ್‌ಬೋಲಿಯಲ್ಲಿ ದೀಪಾವಳಿಗೆ ‘ದವಾಳಿ’ ಎನ್ನುತ್ತಾರೆ. ಕೆಲವು ತಾಂಡಾಗಳಲ್ಲಿ ಹದಿನೈದು ದಿನಗಳ ಮೊದಲೇ ಸಿದ್ಧತೆ ಆರಂಭವಾಗುತ್ತದೆ. ಸಂಜೆ ಯುವತಿಯರು ಒಂದೆಡೆ ಸೇರಿ ಹಾಡು, ಕುಣಿತ ಅಭ್ಯಾಸ ಮಾಡುತ್ತಾರೆ. ಅಜ್ಜಿ ಕಲಿಸಿದ ಪದಗಳನ್ನು ಮೊಮ್ಮಗಳು ಹಾಡುತ್ತಾಳೆ; ತಾಯಿ ಹಾಕಿದ ಹೆಜ್ಜೆಯನ್ನು ಮಗಳು ಅನುಸರಿಸುತ್ತಾಳೆ. ಬಣ್ಣದ ದಾರ, ಕನ್ನಡಿಗಳಿಂದ ಹೆಣೆದ ಕಸೂತಿ ಉಡುಪು, ಬೆಳ್ಳಿಯ ಆಭರಣಗಳು ಹಬ್ಬಕ್ಕೆ ಸಿಂಗಾರ ನೀಡುತ್ತವೆ. ಅವು ಅಲಂಕಾರ ಮಾತ್ರವಲ್ಲ, ಸಮುದಾಯದ ಗುರುತೂ ಹೌದು. ಒಂದೊಂದು ಕಸೂತಿಯ ಹಿಂದೆ ಹೆಣ್ಣುಮಕ್ಕಳ ತಾಳ್ಮೆ, ಕೈಚಳಕ ಅಡಗಿದೆ. ಯಂತ್ರದಲ್ಲಿ ಸಿದ್ಧವಾದ ಉಡುಪಿಗೆ ಹೋಲಿಸಿದರೆ ಕೈಯಲ್ಲಿ ಹೊಲಿದ ಬಟ್ಟೆ ಒಂದು ಕುಟುಂಬದ ನೆನಪನ್ನೇ ಹೊತ್ತು ನಿಲ್ಲುತ್ತದೆ. ಹಬ್ಬದ ದಿನ ಆ ಉಡುಪು ತೊಡುವುದೇ ಅವರಿಗೆ ವಿಶೇಷ ಸಂಭ್ರಮ.

ಮನೆಮನೆಗೆ ಬೆಳಕು ಹೊತ್ತೊಯ್ಯುವ ‘ಮೇರಾ’!

ಅಮಾವಾಸ್ಯೆಯ ರಾತ್ರಿ ಮದುವೆಯಾಗದ ಯುವತಿಯರು ದೀಪ ಹಿಡಿದು ಗುಂಪಾಗಿ ಹೊರಡುತ್ತಾರೆ. ಅನೇಕ ತಾಂಡಾಗಳಲ್ಲಿ ಸಂತ ಸೇವಾಲಾಲ್ ಮಹಾರಾಜರು, ಮರಿಯಮ್ಮ ದೇವಿಗೆ ನಮಿಸಿ, ನಾಯಕನ ಮನೆಯಿಂದ ‘ಮೇರಾ’ ಆರಂಭಿಸುವ ಪದ್ಧತಿಯಿದೆ.

‘ವರ್ಷೆದಾಡ್ ಕೋರ್ ದವಾಳಿ, ಸೇವಾಭಾಯಾ ತೋನ ಮೇರಾ…’
‘ಬಾಪು ತೋನ ಮೇರಾ, ದಾದಿ ತೋನ ಮೇರಾ, ಭೀಯಾ ತೋನ ಮೇರಾ…’

ಅಪ್ಪ, ಅಜ್ಜಿ, ಅಣ್ಣ ಹೀಗೆ ಮನೆಯವರನ್ನು ಒಂದೊಂದಾಗಿ ನೆನೆದು ಶುಭ ಕೋರುವ ಹಾಡಿದು. ದೀಪ ಹಿಡಿದು ಹೋಗುವ ಯುವತಿಯರು ಕೇವಲ ಮನೆಯ ಯಜಮಾನನನ್ನಲ್ಲ, ಮನೆಯ ಎಲ್ಲರನ್ನೂ ಹಾರೈಸುತ್ತಾರೆ. ಮನಸ್ತಾಪ ಮರೆತು ಎಲ್ಲರೂ ಚೆನ್ನಾಗಿರಲಿ ಎಂಬ ಹಂಬಲವೇ ಈ ಆಚರಣೆಯ ಜೀವಾಳ. ತಾಂಡಾದ ಮನೆಗಳ ನಡುವೆ ಕಣ್ಣಿಗೆ ಕಾಣದ ನಂಟನ್ನು ಮೇರಾ ಗಟ್ಟಿಗೊಳಿಸುತ್ತದೆ. ಹಣವಿರುವ ಮನೆ, ಇಲ್ಲದ ಮನೆ ಎಂಬ ಭೇದವಿಲ್ಲದೆ ಎಲ್ಲರ ಬಾಗಿಲಿಗೂ ಹೋಗುವುದು ಇದರ ಸೊಗಸು. ಯುವತಿಯರ ಕಂಠದಿಂದ ಹೊರಡುವ ಹಾರೈಕೆಗೆ ಬೆಲೆ ಕಟ್ಟಲಾಗದು. ಅದನ್ನು ಕೇಳಿ ಹಿಗ್ಗುವ ಹಿರಿಯರಿಗೆ ಆ ಒಂದು ರಾತ್ರಿ ತಾಂಡಾ ದೊಡ್ಡ ಕುಟುಂಬದಂತೆ ಭಾಸವಾಗುತ್ತದೆ.

ಅಗಲಿದ ಹಿರಿಯರನ್ನು ನೆನೆಯುವ ‘ಕಾಳಿಮಾಸ್’

ಅಮಾವಾಸ್ಯೆಯನ್ನು ಕೆಲವೆಡೆ ‘ಕಾಳಿಮಾಸ್’ ಅಥವಾ ‘ಕಾಳಿ ಅಮಾಸ್’ ಎನ್ನುತ್ತಾರೆ. ಈ ಸಂದರ್ಭದಲ್ಲಿ ಮನೆದೇವರು, ಆರಾಧ್ಯ ದೈವಗಳೊಂದಿಗೆ ಅಗಲಿದ ಹಿರಿಯರನ್ನೂ ನೆನೆಯುತ್ತಾರೆ. ಕೆಲ ಕುಟುಂಬಗಳಲ್ಲಿ ಪೂರ್ವಜರಿಗೆ ಪ್ರಿಯವಾದ ತಿನಿಸುಗಳನ್ನು ತಯಾರಿಸಿ ನೈವೇದ್ಯ ಇಡುತ್ತಾರೆ. ಅಕ್ಕಿಹಿಟ್ಟು, ಬೆಲ್ಲ, ತುಪ್ಪದ ಪದಾರ್ಥಗಳನ್ನು ಕೆಂಡಕ್ಕೆ ಸಮರ್ಪಿಸುವ ‘ಧಬುಕಾರ್’ ಪದ್ಧತಿಯೂ ಇದೆ. ಬದುಕಿರುವವರ ಸಂಭ್ರಮದ ನಡುವೆ ಬದುಕಿ ಹೋದವರ ನೆನಪಿಗೆ ಜಾಗ ಕೊಡುವುದು ಇದರ ವಿಶೇಷ. ಆಚರಣೆಗಳ ವಿಧಾನ ತಾಂಡಾದಿಂದ ತಾಂಡಾಕ್ಕೆ ಬದಲಾಗಬಹುದು. ಕೆಲವು ಕಡೆ ಪೂಜೆಯ ಪದಾರ್ಥ, ಕ್ರಮ ಬೇರೆ; ಕೆಲವೆಡೆ ಹಿರಿಯರು ಹೇಳಿಕೊಟ್ಟಂತೆ ಸರಳವಾಗಿ ಆಚರಿಸುತ್ತಾರೆ. ಆದರೆ ನೆನಪಿನ ಮೂಲಭಾವ ಒಂದೇ: ನಮಗಿಂತ ಮೊದಲು ಬಾಳಿ, ಶ್ರಮಿಸಿ, ಈ ತಾಂಡಾವನ್ನು ಕಟ್ಟಿದವರನ್ನು ಮರೆಯಬಾರದು.

ಕಾಡುಹೂಗಳ ನಡುವೆ ನಗು–ಕಣ್ಣೀರು

ಮರುದಿನ ಕೆಲವು ತಾಂಡಾಗಳ ಯುವತಿಯರು ಬುಟ್ಟಿ ಹಿಡಿದು ಹೊಲ, ಗುಡ್ಡದತ್ತ ಹೊರಡುತ್ತಾರೆ. ಹೊನ್ನಂಬರಿ, ಅಣ್ಣೆಹೂವು, ಉತ್ತರಣಿ ಮೊದಲಾದ ಹೂವುಗಳನ್ನು ಸಂಗ್ರಹಿಸುತ್ತಾರೆ. ಹಾಡು, ಕುಣಿತದ ನಡುವೆ ಮನೆಯಿಂದ ತಂದ ತಿಂಡಿಯನ್ನು ಹಂಚಿಕೊಳ್ಳುತ್ತಾರೆ. ಆದರೆ ಈ ಸಡಗರದಲ್ಲಿ ಕೆಲವೊಮ್ಮೆ ಕಣ್ಣೀರೂ ಇರುತ್ತದೆ. ಮದುವೆ ನಿಶ್ಚಯವಾದ ಯುವತಿ ಗೆಳತಿಯರನ್ನು ತಬ್ಬಿಕೊಂಡು ಅಳುವ ಸಂಪ್ರದಾಯ ಕೆಲವೆಡೆ ಇದೆ. ಮುಂದಿನ ದವಾಳಿಗೆ ಇದೇ ತಾಂಡಾದಲ್ಲಿ ಗೆಳತಿಯರೊಂದಿಗೆ ಕುಣಿಯಲು ಸಾಧ್ಯವಾಗದಿರಬಹುದು ಎಂಬ ನೆನಪೇ ಆ ಕಣ್ಣೀರಿನ ಹಿಂದೆ ಅಡಗಿದೆ. ಒಂದು ಕಡೆ ಸಂಭ್ರಮದ ಹಾಡು, ಇನ್ನೊಂದು ಕಡೆ ಅಗಲಿಕೆಯ ನೋವು—ಇವೆರಡೂ ಒಂದೇ ಹಬ್ಬದಲ್ಲಿ ಬೆರೆತಿರುವುದು ವಿಶೇಷ.
ಹೂವುಗಳನ್ನು ಮನೆಗೆ ತಂದು ಸಗಣಿಯ ಸಣ್ಣ ಆಕೃತಿಗಳಿಗೆ ಸಿಂಗಾರ ಮಾಡುತ್ತಾರೆ. ಕೆಲವೆಡೆ ಅವನ್ನು ‘ಗೋದಣೋ’ ಎನ್ನುತ್ತಾರೆ. ಮನೆಯಂಗಳ, ದನದ ಕೊಟ್ಟಿಗೆಗಳಲ್ಲಿ ಇಟ್ಟು ಪೂಜಿಸುತ್ತಾರೆ. ಗೋವುಗಳನ್ನು ಸ್ನಾನ ಮಾಡಿಸಿ ಅಲಂಕರಿಸುವ ಪದ್ಧತಿಯೂ ಇದೆ. ಒಮ್ಮೆ ಸರಕು ಸಾಗಣೆಗೆ ಎತ್ತುಗಳನ್ನೇ ನಂಬಿದ್ದ ಬಂಜಾರರ ಬದುಕಿನಲ್ಲಿ ಜಾನುವಾರು, ಮಣ್ಣು, ಹೂವುಗಳಿಗೆ ಇರುವ ಸ್ಥಾನ ಈ ಆಚರಣೆಗಳಲ್ಲಿ ವ್ಯಕ್ತವಾಗುತ್ತದೆ.

ಆರದಿರಲಿ ಪರಂಪರೆಯ ದೀಪ

ಈಗ ತಾಂಡಾಗಳಿಂದ ಯುವಜನರು ಓದು, ಉದ್ಯೋಗಕ್ಕಾಗಿ ನಗರ ಸೇರುತ್ತಿದ್ದಾರೆ. ಹಾಡುಗಳ ಜಾಗಕ್ಕೆ ಮೊಬೈಲ್‌ನ ಧ್ವನಿ ಬರುತ್ತಿದೆ. ಆದರೆ ಅಜ್ಜಿ ಕಲಿಸಿದ ಗೋರ್‌ಬೋಲಿ ಪದಗಳು ಮರೆತುಹೋದರೆ ಅವುಗಳೊಡನೆ ತಾಂಡಾದ ನೆನಪುಗಳೂ ಮಂಕಾಗುತ್ತವೆ.

ಹಣತೆ ಬೆಳಗಿದ ಸ್ವಲ್ಪ ಹೊತ್ತಿಗೆ ಆರಬಹುದು. ಆದರೆ ಮನೆಮನೆಗೆ ಹಾರೈಕೆ ಹೊತ್ತೊಯ್ಯುವ ಮೇರಾ, ಪೂರ್ವಜರನ್ನು ನೆನೆಯುವ ಧಬುಕಾರ್, ಕಾಡುಹೂ ಹೊತ್ತು ಬರುವ ಯುವತಿಯರ ಹಾಡು ಆರಬಾರದು. ಬಂಜಾರರ ದವಾಳಿಯ ನಿಜವಾದ ಬೆಳಕು ಹಣತೆಯಲ್ಲಿ ಮಾತ್ರವಲ್ಲ; ತಾಂಡಾದ ಜನರನ್ನು ಬೆಸೆಯುವ ಪ್ರೀತಿಯಲ್ಲಿ, ಹಿರಿಯರು ಉಳಿಸಿದ ಸಂಸ್ಕೃತಿಯಲ್ಲಿ ಅಡಗಿದೆ.

  • ಲೇಖನ
    ಲಿಂಗರಾಜ್ ಗಾಡಿಕೊಪ್ಪ

News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

[t4b-ticker]
error: Content is protected !!