ಈ ಬಾರಿ ಅತಿ ಹೆಚ್ಚು ಮಳೆ ಬಂದು ಕೃಷಿಗೆ ಭಾರೀ ಹಾನಿಯಾಗಿದ್ದರೂ ಬೆಳೆ ವಿಮೆ ಕಡಿಮೆ ಬಂದಿರುವುದರಿಂದ ತೀವ್ರ ಅಸಮಾಧಾನಗೊಂಡಿರಿವ ರೈತರು ಇದನ್ನು ಖಂಡಿಸಿ ಮಲೆನಾಡು ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಸುಳ್ಯ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡ ಹಾಗೂ ಪ್ರತಿಭಟನೆಯ ವೇಳೆ ತಹಶೀಲ್ದಾರರು ಇರದಿರುವುದನ್ನು ವಿರೋಧಿಸಿ ಮತ್ತು ಅವರು ಬರಬೇಕೆಂದು ಆಗ್ರಹಿಸಿ, ತಾಲೂಕು ಕಚೇರಿಯ ಮೆಟ್ಟಿಲಲ್ಲಿ ಧರಣಿ ಕುಳಿತ ಘಟನೆ ನಡೆದಿದ್ದು, ಮುಂದಿನ ಸೋಮವಾರ ಅಧಿಕಾರಿಗಳ ಸಭೆ ನಡೆಸಿ, ದ.31 ರಂದು ಬೆಳಿಗ್ಗೆ ರೈತರನ್ನು ಮತ್ತು ಅಧಿಕಾರಿಗಳನ್ನು ಕರೆದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರರು ಭರವಸೆ ನೀಡಿದ ಮೇರೆಗೆ ಇಂದಿನ ಪ್ರತಿಭಟನೆಯನ್ನು ಹಿಂತೆಗೆದುಕೊಂಡ ಘಟನೆ ವರದಿಯಾಗಿದೆ.
ಬೆಳೆವಿಮೆ ಕಡಿಮೆ ಬಂದಿರುವುದರಿಂದ ರೈತರಿಗೆ ಭಾರೀ ತೊಂದರೆಯಾಗಿದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕು ಎಂಬ ಒತ್ತಾಯದೊಂದಿಗೆ ಮಲೆನಾಡು ಹಿತರಕ್ಷಣಾ ವೇದಿಕೆ ವತಿಯಿಂದ ಪಕಗಷಾತೀತವಾಗಿ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು. ನಾಯಕರುಗಳಾದ ಕಿಶೋರ್ ಶಿರಾಡಿ, ಹರೀಶ್ ಕಂಜಿಪಿಲಿ, ಎಂ.ವೆಂಕಪ್ಪ ಗೌಡರು ಪ್ರತಿಭಟನೆಯಲ್ಲಿ ನಿರತರಾಗಿದ್ದ ರೈತರನ್ನುದ್ದೇಶಿಸಿ ಮಾತನಾಡಿದ ಬಳಿಕ ಮನವಿ ಸಲ್ಲಿಸಲು ರೈತರು ಮುಂದಾದಾಗ, ತಹಶೀಲ್ದಾರರು ಸ್ಥಳದಲ್ಲಿ ಇರಲಿಲ್ಲ. ಈ ವೇಳೆ ಉಪ ತಹಶೀಲ್ದಾರರು ಪ್ರತಿಭಟನಾ ನಿರತರ ಬಳಿಗೆ ಬಂದು “ತಹಶೀಲ್ದಾರರು ಮಂಗಳೂರಿಗೆ ಮೀಟಿಂಗಿಗೆ ತೆರಳಿದ್ದಾರೆ” ಎಂದು ಹೇಳಿದರು. ಇದರಿಂದ ಆಕ್ರೋಶಗೊಂಡ ರೈತರು, “ನಮ್ಮ ಸಮಸ್ಯೆಗಳನ್ನು ಆಲಿಸಬೇಕಾದ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಪ್ರತಿಭಟನೆಯ ಬಗ್ಗೆ ನಾವು ಮೊದಲೇ ಹೇಳಿದ್ದರೂ ಅವರಿಗೆ ರೈತರು ಮುಖ್ಯವಾಗದೆ ಬೇರೆ ಸಭೆಗೆ ಹೋದದ್ದೇಕೆ ? ” ಎಂದು ಪ್ರಶ್ನಿಸಿದರಲ್ಲದೆ, ತಹಶೀಲ್ದಾರ್ ಹಾಗೂ ಪುತ್ತೂರು ಸಹಾಯಕ ಆಯುಕ್ತರು ಸ್ಥಳಕ್ಕೆ ಖುದ್ದು ಆಗಮಿಸಿ ಮನವಿ ಸ್ವೀಕರಿಸಬೇಕು ಮತ್ತು ಸಮಸ್ಯೆಗಳಿಗೆ ಸೂಕ್ತ ಉತ್ತರ ನೀಡಬೇಕು.
ಅದುವರೆಗೆ ನಾವು ಧರಣಿ ಕೂರುತ್ತೇವೆ” ಎಂದು ಹೇಳಿ ತಾಲೂಕು ಕಚೇರಿಯ ಮೆಟ್ಟಿಲಲ್ಲಿ ಕಿಶೋರ್ ಶಿರಾಡಿ, ಹರೀಶ್ ಕಂಜಿಪಿಲಿ, ಎಂ.ವೆಂಕಪ್ಪ ಗೌಡ, ಸಂತೋಷ್ ಕುತ್ತಮೊಟ್ಟೆ, ರಮಾನಂದ ಎಣ್ಣೆಮಜಲು, ಅವಿನಾಶ್ ಕುರುಂಜಿ, ವಿಕ್ರಮ್ ಅಪ್ಪಂಗಾಯ, ವಿನಯ ಕಂದಡ್ಕ, ಶಶಿಕಲಾ ನೀರಬಿದಿರೆ, ಪುಷ್ಪ ಮೇದಪ್ಪ, ಗುಣವತಿ ಕೊಲ್ಲಂತಡ್ಕ ಮತ್ತಿತರ ನಾಯಕರು ಕುಳಿತುಕೊಂಡರು.ರೈತರು ಘೋಷಣೆಗಳನ್ನು ಕೂಗುತ್ತಾ ಧರಣಿ ಆರಂಭಿಸಿದರು. ರೈತರಿಗೆ ಸರಿಯಾದ ನ್ಯಾಯ ಸಿಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ನಾಯಕರು ಎಚ್ಚರಿಸಿದರು.ಈ ಸಂದರ್ಭ ಸ್ಥಳಕ್ಕೆ ಬಂದ ತೋಟಗಾರಿಕಾ ಇಲಾಖೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖಾ ವತಿಯಿಂದ ಬೆಳೆವಿಮೆ ವಿಚಾರವಾಗಿ ಏನೆಲ್ಲ ಮಾಡಲಾಗಿದೆ ಎಂಬ ವಿವರ ನೀಡಿದರು.ಆ ವೇಳೆ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ರವರು ಸ್ಥಳಕ್ಕೆ ಬಂದರು.
ಎಸ್.ಐ.ಯವರನ್ನು ಕಂಡು, ನಮ್ಮ ಹೋರಾಟವನ್ನು ನಿಯಂತ್ರಿಸಲು ತಹಶೀಲ್ದಾರ್ ಪೋಲೀಸರಿಗೆ ಫೋನ್ ಮಾಡಿ ಹೇಳಿದ್ದಾರೆಂಬ ವದಂತಿ ಹಬ್ಬಿತು. ಅದರ ವಿರುದ್ಧ ಭಾಷಣವನ್ನೂ ಹೋರಾಟಗಾರರು ಮಾಡಿದರು. ಕೊನೆಗೆ ಎಂ.ವೆಂಕಪ್ಪ ಗೌಡರು ತಹಶೀಲ್ದಾರರಿಗೆ ಫೋನ್ ಮಾಡಿ ಕಿಶೋರ್ ಶಿರಾಡಿ ಯವರಿಗೆ ಕೊಟ್ಟು ಮಾತನಾಡಿಸಿದಾಗ, ತಾನು ಪೋಲೀಸರಿಗೆ ಹಾಗೆ ಹೇಳಿಯೇ ಇಲ್ಲ ಎಂದು ತಹಶೀಲ್ದಾರರು ಹೇಳಿದ್ದರಿಂದ ಆ ಬಗೆಗಿನ ವಿವಾದ ಕೊನೆಗೊಂಡಿತು.ಬಳಿಕ ತಹಶೀಲ್ದಾರರು ‘ ಈ ವಾರ ಹಲವು ರಜೆಗಳಿರುವುದರಿಂದ ಮುಂದಿನ ಸೋಮವಾರ ಅಧಿಕಾರಿಗಳ ಸಭೆ ಕರೆದು ವಿವರವಾಗಿ ಚರ್ಚಿಸಿ, ದ.31 ರಂದು ಬುಧವಾರ ರೈತ ಮುಖಂಡರ ಮತ್ತು ಅಧಿಕಾರಿಗಳ ಸಭೆ ಕರೆದು ಮಾತನಾಡಿಸುವುದಾಗಿ ಹೇಳಿದರು.ನಂತರ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.













































