ತಿರುವನಂತಪುರ: ಕೇರಳಂ ವಿಧಾನಸಭೆಯಲ್ಲಿ ‘ವಂದೇ ಮಾತರಂ’ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿದೆ.
ವಂದೇ ಮಾತರಂ ಪೂರ್ಣವಾಗಿ ಹಾಡದಿರುವುದಕ್ಕೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ರಾಜ್ಯಪಾಲರು ಭಾಗವಹಿಸುವ ಇಂತಹ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲನೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.ಲೋಕಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರ್ಲೇಕರ್, ರಾಜ್ಯಪಾಲರು ಸದನದಲ್ಲಿ ಹಾಜರಾಗುವ ಕಾರ್ಯಕ್ರಮದಲ್ಲಿ ವಂದೇ ಮಾತರಂ ಸಂಪೂರ್ಣವಾಗಿ ಹಾಡಬೇಕು. ಆದರೆ ವಿಧಾನಸಭೆಯಲ್ಲಿ ಕೇರಳ ಪೊಲೀಸ್‌ನ ಬ್ಯಾಂಡ್ ತಂಡ ಆರಂಭಿಕ ಚರಣವನ್ನಷ್ಟೇ ನುಡಿಸಿತ್ತು ಎಂದು ಹೇಳಿದ್ದಾರೆ.
ಈ ಕುರಿತು ಸಭಾಧ್ಯಕ್ಷ ತಿರುವಂಚೂರ್ ರಾಧಾಕೃಷ್ಣನ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.










































