ಬೆಳಗಾವಿ: ‘2028ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನೂ ಗೆಲ್ಲುವುದಿಲ್ಲ. ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾಗಿ ಐದು ವರ್ಷ ಪೂರೈಸಬೇಕಿತ್ತು. ಆದರೆ, ಅವರು ರಾಜೀನಾಮೆ ನೀಡಿದ್ದರಿಂದ ಪರಿಸ್ಥಿತಿ ಹದಗೆಡಲಿದೆ’ ಎಂದು ವಿಧಾನ ಪರಿಷತ್ತಿನ ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿ ತಿಳಿಸಿದ್ದಾರೆ.
ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ ಪರಿಣಾಮವನ್ನು ಬಿಜೆಪಿ ಈಗಲೂ ಎದುರಿಸುತ್ತಿದೆ. ಮುಂದೆ ಕಾಂಗ್ರೆಸ್‌ಗೂ ಇದೇ ಪರಿಸ್ಥಿತಿ ಬರಲಿದೆ’ ಎಂದಿದ್ದಾರೆ.’ಸಿದ್ದರಾಮಯ್ಯ ರಾಜೀನಾಮೆ ಕಾಂಗ್ರೆಸ್ ಪತನಕ್ಕೆ ಕಾರಣ ಆಗುತ್ತದೆ. ರಾಜ್ಯವೂ ಅಧಃ ಪತನಕ್ಕೆ ಹೋಗುತ್ತದೆ. ಅಹಿಂದ ಚಳವಳಿಯನ್ನೇ ಹೈಕಮಾಂಡ್ ತುಳಿದು ಹಾಕಿದೆ. ಕಾಂಗ್ರೆಸ್ ಹೈಕಮಾಂಡ್ ನೇರವಾಗಿ ಜೇನುಗೂಡಿಗೆ ಕೈ ಹಾಕಿದೆ. ಸಿದ್ದರಾಮಯ್ಯ ಕಣ್ಣೀರು 2028ಕ್ಕೆ ಜ್ವಾಲಾಮುಖಿ ಆಗಿ ಸ್ಫೋಟಿಸಲಿದೆ’ ಎಂದಿದ್ದಾರೆ.
‘ಸಿದ್ದರಾಮಯ್ಯ ಗ್ಯಾರಂಟಿ ಯೋಜನೆ ಗಳನ್ನು ಶಿಸ್ತಿನಿಂದ ಜಾರಿಗೊಳಿಸಿ, ಆರ್ಥಿಕ ನಷ್ಟ ಆಗದಂತೆ ನಿಭಾಯಿಸಿದ್ದರು. ಇನ್ಮುಂದೆ ಗ್ಯಾರಂಟಿ ಯೋಜನೆಗಳು ಮುಂದುವರಿ ಯಲ್ಲ. ಕಾಂಗ್ರೆಸ್ ನಾಯಕರಾದ ವೇಣುಗೋಪಾಲ ಹಾಗೂ ಸುರ್ಜೇವಾಲಾ ಅವರಿಗೆ ರಾಜ್ಯದ ನಿಜವಾದ ಸಮಸ್ಯೆಯ ಅರಿವಿಲ್ಲ. ತಾವೇ ಹೋರಾಟ ಮಾಡಿ, ಸರ್ಕಾರ ತಂದಂತೆ ವರ್ತಿಸುತ್ತಾರೆ’ ಎಂದು ಕಿಡಿ ಕಾರಿದ್ದಾರೆ.
‘ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲಲು ಅಹಿಂದ ಮತಗಳೇ ಕಾರಣ. ಈಗ ಅಹಿಂದ ನಾಯಕನನ್ನೇ ತುಳಿದಿದ್ದಾರೆ. ಕುರುಬ ಸಮಾಜ ಯಾವತ್ತೂ ಇದನ್ನು ಕ್ಷಮಿಸಬಾರದು, ಪಾಠ ಕಲಿಸಬೇಕು’ ಎಂದು ಹೇಳಿಕೆ ನೀಡಿದ್ದಾರೆ.’ಸತೀಶ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷರಾಗುವ ಸೂಚನೆ ಬಂದಿದೆಯೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಖನ್, “ಕಾಂಗ್ರೆಸ್ ಹೈಕಮಾಂಡ್ ಟಪಾಲಿನಲ್ಲಿ ಯಾರ ಹೆಸರು ಬರೆದು ಕಳಿಸುತ್ತದೆ ಗೊತ್ತಿಲ್ಲ’ ಎಂದರು.










































