ಮುಂಬೈ: ಬಾಹ್ಯ ಒತ್ತಡಗಳನ್ನು ನಿಭಾಯಿಸಲು ರೂಪಾಯಿಮೌಲ್ಯವು ಇನ್ನಷ್ಟು ಕುಸಿಯಲು ಕೇಂದ್ರೀಯ ಬ್ಯಾಂಕ್ ಅವಕಾಶ ಮಾಡಿಕೊಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಮಾಜಿ ಗವರ್ನರ್ ಡಿ. ಸುಬ್ಬರಾವ್ ಅಭಿಪ್ರಾಯಪಟ್ಟಿದ್ದಾರೆ.
ದೇಶದಲ್ಲಿ ಹಣದುಬ್ಬರದ ಅಪಾಯ ಜಾಸ್ತಿ ಆದಲ್ಲಿ, ರೆಪೊ ದರವನ್ನು ಹೆಚ್ಚು ಮಾಡುವ ಬದಲು ನಗದು ಹರಿವಿಗೆ ಸಂಬಂಧಿಸಿದ ಇತರ ಕ್ರಮಗಳ ಮೊರೆ ಹೋಗಬೇಕು ಎಂದು ಅವರು ಹೇಳಿದ್ದಾರೆ.ರೆಪೊ ದರದ ಬಗ್ಗೆ, ಹಣಕಾಸಿನ ನೀತಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಸಭೆಯು ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಸುಬ್ಬರಾವ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರೂಪಾಯಿ ವಿನಿಮಯ ಮೌಲ್ಯವನ್ನು ರಕ್ಷಿಸಲು ಹಣಕಾಸು ನೀತಿಗಳನ್ನು ಅಂತಿಮ ಅಸ್ತ್ರವನ್ನಾಗಿ ಮಾತ್ರ ಬಳಸಬೇಕು ಎಂದು ಹೇಳಿದ್ದಾರೆ.’ಹಣದುಬ್ಬರದ ವಿಚಾರವಾಗಿ ಅಗತ್ಯ ಸಂದರ್ಭ ಎದುರಾದರೆ ಆರ್‌ಬಿಐ ಹಣಕಾಸು ನೀತಿಯನ್ನು ಬಿಗಿಗೊಳಿಸಬಹುದು’ ಎಂದು ಅವರು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. ಸುಬ್ಬರಾವ್ ಅವರು 2008ರಿಂದ 2013ರವರೆಗೆ ಆರ್‌ಬಿಐ ಗವರ್ನರ್ ಆಗಿದ್ದರು.
‘ಅಲ್ಪಮಟ್ಟದ ಹೊಂದಾಣಿಕೆಯನ್ನೂ ಮಾಡಿಕೊಳ್ಳದೆ ರೂಪಾಯಿ ವಿನಿಮಯ ಮೌಲ್ಯ ಕುಸಿತವನ್ನು ತಡೆಯುವ ಬದಲು, ಮೌಲ್ಯವು ತನ್ನದೇ ಮಟ್ಟ ಕಂಡುಕೊಳ್ಳಲು ಅವಕಾಶ ಕಲ್ಪಿಸಬೇಕು. ಏಕೆಂದರೆ ಈಗಿನ ಒತ್ತಡಗಳು ದೇಶದ ಪಾವತಿಗಳ ಬಾಕಿಯಲ್ಲಿನ ಸಮತೋಲನವು ತಪ್ಪಿರುವುದನ್ನು ಹೇಳುತ್ತಿವೆ. ದುರ್ಬಲಗೊಂಡಿರುವ ರೂಪಾಯಿ ಮೌಲ್ಯವು ಆಘಾತಗಳನ್ನು ತಾಳಿಕೊಳ್ಳುವ ಸಹಜ ಅಸ್ತ್ರವಾಗಿ ಕೆಲಸ ಮಾಡುತ್ತದೆ’ ಎಂದು ಸುಬ್ಬರಾವ್ ಹೇಳಿದ್ದಾರೆ.ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಕುಸಿತ ಕಾಣುತ್ತಿದೆ. ಇದು ಈ ತಿಂಗಳಲ್ಲಿ ಈಚೆಗೆ ಅಮೆರಿಕದ ಡಾಲರ್ ಎದುರು ಇದುವರೆಗಿನ ಅತ್ಯಂತ ಕನಿಷ್ಠ ಮಟ್ಟವಾದ 97.15ಕ್ಕೆ ಕುಸಿದಿತ್ತು.ಪಶ್ಚಿಮ ಏಷ್ಯಾದಲ್ಲಿ ಯುದ್ಧ ಆರಂಭವಾದ ನಂತರದಲ್ಲಿ ರೂಪಾಯಿ ಮೌಲ್ಯವು ಶೇ 5ರಷ್ಟು ಕುಸಿದಿದೆ ಎಂದು ಮಾರುಕಟ್ಟೆ ಮೂಲಗಳು ನೀಡಿರುವ ಅಂಕಿ-ಅಂಶಗಳು ಹೇಳುತ್ತವೆ. ಈ ವರ್ಷದ ಆರಂಭದಿಂದ ಈವರೆಗೆ ಮೌಲ್ಯವು ಶೇ 6.1ರಷ್ಟು ಕುಸಿದಿದೆ. ಒಂದು ವರ್ಷದ ಅವಧಿಯನ್ನು ಪರಿಗಣಿಸಿದರೆ ಕುಸಿತವು ಶೇ 10ರಷ್ಟು ಆಗುತ್ತದೆ.ಒತ್ತಡಗಳು ಹೆಚ್ಚಿರುವ ಸಂದರ್ಭಗಳಲ್ಲಿ ವಿನಿಮಯ ದರದಲ್ಲಿ ಸ್ಥಿರತೆ ತರಲು ಯತ್ನಿಸುವುದು ನಿರೀಕ್ಷೆಗಳನ್ನು ನಿಭಾಯಿಸುವ ಸವಾಲಿನಂತೆ ಇರುತ್ತದೆ ಎಂದು ಸುಬ್ಬರಾವ್ ಬಣ್ಣಿಸಿದ್ದಾರೆ.
‘ವಿನಿಮಯ ದರಕ್ಕೆ ಸಂಬಂಧಿಸಿದ ಬಿಕ್ಕಟ್ಟುಗಳು ವಿಶ್ವಾಸಕ್ಕೆ ಸಂಬಂಧಿಸಿದ ಬಿಕ್ಕಟ್ಟುಗಳಾಗಿರುತ್ತವೆ. ರೂಪಾಯಿ ಮೌಲ್ಯವು ಇನ್ನಷ್ಟು ಕುಸಿಯುತ್ತದೆ ಎಂದು ಹೂಡಿಕೆದಾರರು, ಆಮದುದಾರರು ಮತ್ತು ಕುಟುಂಬಗಳು ಭಾವಿಸಿದರೆ, ಅವರೆಲ್ಲ ಒಟ್ಟಾಗಿ ರೂಪಾಯಿ ಇನ್ನಷ್ಟು ಕುಸಿಯಬಹುದಾದ ಬಗೆಯಲ್ಲಿ ವರ್ತಿಸುತ್ತಾರೆ. ರಫ್ತುದಾರರು ದೇಶಕ್ಕೆ ಹಣವನ್ನು ವಾಪಸ್ ತರುವುದನ್ನು ವಿಳಂಬ ಮಾಡುತ್ತಾರೆ, ಆಮದುದಾರರು ಡಾಲರ್ ಖರೀದಿಗೆ ಮುಗಿಬೀಳುತ್ತಾರೆ, ಕುಟುಂಬಗಳ ಮಟ್ಟದಲ್ಲಿ ಚಿನ್ನ ಖರೀದಿ ಜಾಸ್ತಿ ಆಗುತ್ತದೆ, ಹೂಡಿಕೆದಾರರು ನಷ್ಟವನ್ನು ತಗ್ಗಿಸಲು ಯತ್ನಿಸುತ್ತಾರೆ’ ಎಂದು ವಿವರಿಸಿದ್ದಾರೆ.ನೀತಿ ನಿರೂಪಕರು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ ಅವರು ಭೀತಿಗೆ ಒಳದಾದವರಂತೆ ವರ್ತಿಸಬಾರದು ಎಂದು ಸಲಹೆ ನೀಡಿದ್ದಾರೆ.










































