Lockdown : ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧವು ಜಾಗತಿಕವಾಗಿ “ಇಂಧನ ಬಿಕ್ಕಟ್ಟನ್ನು” ಉಂಟುಮಾಡುತ್ತಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಇಂಧನ ಸಾಗಣೆಗೆ ನಿರ್ಣಾಯಕವಾದ “ಹಾರ್ಮುಜ್ ಜಲಸಂಧಿ”ಯನ್ನು ಇಸ್ರೇಲ್-ಅಮೆರಿಕ ನಡೆಸಿದ ಜಂಟಿ ದಾಳಿಗೆ ಪ್ರತೀಕಾರವಾಗಿ ಇರಾನ್ ಮುಚ್ಚಿದೆ. ಇದರಿಂದಾಗಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ ಈಗ 112 ಡಾಲರ್ ತಲುಪಿದೆ. ಯುಎಸ್‌ನಲ್ಲಿ ಅನಿಲದ ಬೆಲೆ ಗ್ಯಾಲನ್‌ಗೆ 5 ಡಾಲರ್ ದಾಟಿದೆ. ಇದರ ಪರಿಣಾಮವಾಗಿ ಸಾರಿಗೆ ವೆಚ್ಚಗಳು ತೀವ್ರವಾಗಿ ಹೆಚ್ಚುತ್ತಿವೆ.
ಸದ್ಯ ಉಲ್ಬಣಗೊಂಡಿರುವ ಇಂಧನ ಬಿಕ್ಕಟ್ಟಿನಿಂದಾಗಿ ವಿಮಾನ ಸೇವೆಗಳನ್ನು ಸಹ ಕಡಿತಗೊಳಿಸಲಾಗುತ್ತಿದೆ. ಅನೇಕ ದೇಶಗಳ ಸರ್ಕಾರಗಳು ಅನಗತ್ಯ ವೆಚ್ಚಗಳನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿವೆ. ಯುನೈಟೆಡ್ ಏರ್ಲೈನ್ಸ್ ಈ ವಾರ ತನ್ನ ವಿಮಾನಗಳನ್ನು ಶೇ. 5 ರಷ್ಟು ಕಡಿಮೆ ಮಾಡಿದೆ. ಇತರ ದೇಶಗಳ ವಿಮಾನಯಾನ ಸಂಸ್ಥೆಗಳು ಸಹ ತಮ್ಮ ಸೇವೆಗಳನ್ನು ಕಡಿಮೆ ಮಾಡುತ್ತಿವೆ. ಸರ್ಕಾರಗಳು ಅನಗತ್ಯ ಪ್ರಯಾಣವನ್ನು ಕಡಿಮೆ ಮಾಡಲು ಹೇಳುತ್ತಿರುವುದನ್ನು ನೋಡಿದರೆ, ಈ ಹಿಂದಿನ ಕೋವಿಡ್ “ಲಾಕ್‌ಡೌನ್” ನೆನಪಾಗುತ್ತದೆ. ಇಂಧನ ಬಿಕ್ಕಟ್ಟಿನಿಂದಾಗಿ ಅನೇಕ ದೇಶಗಳು ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಪಡಿತರಗೊಳಿಸುತ್ತಿವೆ. ಇಂಧನ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನದಂತಹ ದೇಶಗಳು ತಮ್ಮ ಗಣರಾಜ್ಯೋತ್ಸವ ಆಚರಣೆಯನ್ನು ರದ್ದುಗೊಳಿಸಿದೆ. ಜಪಾನ್‌ನಲ್ಲಿ ತೈಲ ಪಡಿತರೀಕರಣವನ್ನು ಈಗಾಗಲೇ ಜಾರಿಗೆ ತರಲಾಗಿದೆ. ದಕ್ಷಿಣ ಕೊರಿಯಾ ಕೂಡ ಇದೇ ವಿಧಾನವನ್ನು ಅನುಸರಿಸುತ್ತಿದೆ. ಬಾಂಗ್ಲಾದೇಶ, ಫಿಲಿಪೈನ್ಸ್ ಮತ್ತು ಶ್ರೀಲಂಕಾದಲ್ಲಿ ಪೆಟ್ರೋಲ್‌ಗಾಗಿ ದೀರ್ಘ ಸರತಿ ಸಾಲುಗಳು ಕಂಡುಬರುತ್ತಿವೆ. ಆಸ್ಟ್ರೇಲಿಯಾ ಸರ್ಕಾರವು ತನ್ನ ಜನರನ್ನು ಅನಗತ್ಯ ಪ್ರಯಾಣವನ್ನು ಕಡಿಮೆ ಮಾಡುವಂತೆ ಕೇಳುತ್ತಿದೆ. ಭಾರತಕ್ಕೆ ಅಗತ್ಯವಿರುವ ಕಚ್ಚಾ ತೈಲದ ಶೇ. 80 ರಷ್ಟನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಭಾರತವು ಗಲ್ಫ್ ರಾಷ್ಟ್ರಗಳಿಂದ ವಿಶೇಷವಾಗಿ ಕತಾರ್‌ನಿಂದ ಎಲ್‌ಪಿಜಿಯನ್ನು ಆಮದು ಮಾಡಿಕೊಳ್ಳುತ್ತಿದೆ. ಇದು ಭಾರತದ ತೈಲ ಅಗತ್ಯಗಳ ಮೇಲೆ ಒತ್ತಡ ಹೇರುತ್ತಿದೆ.
ಈಗಾಗಲೇ ಭಾರತದಲ್ಲಿ ಎಲ್ಪಿಜಿ ಕೊರತೆ ಕಾಡಲು ಆರಂಭವಾಗಿದೆ. ಇನ್ನು ಪೆಟ್ರೋಲ್-ಡೀಸೆಲ್ ಸಮಸ್ಯೆ ಕೂಡ ಶುರುವಾಗುತ್ತಿದೆ. ಅನೇಕ ಕಡೆ ಪೆಟ್ರೋಲ್ ಬಂಕ್ಗಳಲ್ಲಿ ನೋ ಸ್ಟಾಕ್ ಬೋರ್ಡ್ ಅನ್ನು ಅಳವಡಿಸಲಾಗಿದೆ. ಕೆಲ ಪೆಟ್ರೋಲ್ ಬಂಕ್ಗಳಲ್ಲಿ ಇಂಧನಕ್ಕಾಗಿ ವಾಹನ ಸವಾರರು ಸರದಿ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಧನವು ಇಂದು ಮಾನವ ಜೀವನದ ಅವಿಭಾಜ್ಯ ಅಂಗವಾಗಿದೆ. ಇದೀಗ ಕೊರತೆ ಕಾಡಲು ಆರಂಭಿಸಿದೆ. ಒಂದು ವೇಳೆ ಈ ಪರಿಸ್ಥಿತಿ ದೀರ್ಘಕಾಲ ಮುಂದುವರಿದರೆ ಇಂಧನ ಪೂರೈಕೆ ಸಂಪೂರ್ಣ ಸ್ತಬ್ಧವಾಗಲಿದೆ. ಈ ರೀತಿ ಏನಾದರೂ ಆದರೆ, ಭಾರತದ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ತಬ್ಧವಾಗಲಿದೆ. ಯಾವುದೇ ಚಟುವಟಿಕೆ ನಡೆಯುವುದಿಲ್ಲ. ಇದನ್ನು ಮತ್ತೊಂದು ಲಾಕ್‌ಡೌನ್ ಎಂದು ಕರೆದರೆ ತಪ್ಪಲ್ಲ.ಅಂದಹಾಗೆ, ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (IEA) ‘ತೈಲ ಆಘಾತಗಳಿಂದ ರಕ್ಷಣೆ’ ಎಂಬ ಶೀರ್ಷಿಕೆಯ 10 ಅಂಶಗಳ ಯೋಜನೆಯನ್ನು ಬಿಡುಗಡೆ ಮಾಡಿದೆ. ವಾಹನ ಬಳಕೆಯನ್ನು ನಿಯಂತ್ರಿಸುವುದು, ಹೆದ್ದಾರಿಗಳಲ್ಲಿ ವೇಗ ಮಿತಿಗಳನ್ನು ಕಡಿಮೆ ಮಾಡುವುದು, ಜನರು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವುದು ಮತ್ತು ಅನಿಲದಿಂದ ವಿದ್ಯುತ್‌ಗೆ ಬದಲಾಯಿಸುವುದು ಸೇರಿದಂತೆ ಸರ್ಕಾರಗಳಿಗೆ ಶಿಫಾರಸುಗಳನ್ನು ಮಾಡಿದೆ. ಈ ಬೆಳವಣಿಗೆ ಮತ್ತಷ್ಟು ಮುಂದುವರಿದರೆ, ಇಡೀ ಜಗತ್ತು ಮತ್ತೊಂದು ದೊಡ್ಡ ಲಾಕ್ಡೌನ್ಗೆ ದೂಡಲ್ಪಡುತ್ತದೆ. ಈ ಪರಿಸ್ಥಿತಿ ಬರುತ್ತದಾ? ಅಥವಾ ಯುದ್ಧದ ಕಾರ್ಮೋಡ ಕವಿದು ಮತ್ತೆ ಜಗತ್ತು ಸಹಜ ಸ್ಥಿತಿಗೆ ಬರುತ್ತಾ ಎಂದು ಕಾದು ನೋಡಬೇಕಿದೆ,













































