ನವದೆಹಲಿ: ಯುಪಿಐ ಬಳಕೆ ಹೆಚ್ಚಾದಂತೆ ಡಿಜಿಟಲ್ ಅರೆಸ್ಟ್ಸೇರಿದಂತೆ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳನ್ನು ತಡೆಯಲು ರಿಸರ್ವ್ ಬ್ಯಾಂಕ್ ಇಂಡಿಯಾ(ಆರ್‌ಬಿಐ) ಹೊಸ ಸುರಕ್ಷತಾ ಮಾರ್ಗಗಳನ್ನು ಪರಿಚಯಿಸಲು ಮುಂದಾಗಿದೆ. ಇದೊಂದು ಕರಡು ನಿಯಮವಾಗಿದ್ದು, ಈ ಕುರಿತು ಪ್ರಸ್ತಾಪನೆಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿದ್ದು, ಮೇ 8ರವರೆಗೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ.
ಆರ್‌ಬಿಐ ಸೂಚಿಸಿರುವ ಪ್ರಸ್ತಾಪಗಳೇನು
- 1. ಭಾರಿ ಮೊತ್ತದ ವರ್ಗಾವಣೆಗೆ ವಿಳಂಬ ನೀತಿ
10000 ಮತ್ತು ಅದಕ್ಕಿಂತ ಹೆಚ್ಚಿನ ನಗದು ವರ್ಗಾವಣೆಗೆ ವಿಳಂಬ ನೀತಿ(ಕೂಲಿಂಗ್ ಆಫ್ ಪಿರಿಯಡ್)ಗೆ ಮುಂದಾಗಿದೆ. ಅಂದರೆ, ವ್ಯಕ್ತಿಯೊಬ್ಬರು ಹಣ ವರ್ಗಾವಣೆ ಮಾಡಿದ ಕೂಡಲೇ ಅದು ಫಲಾನುಭವಿ ಖಾತೆಗೆ ತಕ್ಷಣವೇ ಜಮೆಯಾಗುವುದಿಲ್ಲ. ಕನಿಷ್ಠ 1 ಗಂಟೆ ವಿಳಂಬವಾಗುತ್ತದೆ. ಈ ಹಂತದಲ್ಲಿ ಹಣ ಕಳುಹಿಸಿದ ವ್ಯಕ್ತಿ ವಂಚನೆಗೊಳಗಾಗಿದ್ದ ಗೊತ್ತಾದರೆ ಕೂಡಲೇ ಅವರು ದೂರು ಸಲ್ಲಿಸಬಹುದು.
- 2. ‘ನಂಬಿಕಸ್ಥ ವ್ಯಕ್ತಿ’ಯ ದೃಢೀಕರಣ
ಹಿರಿಯ ನಾಗರಿಕರು ಮತ್ತು ಹೆಚ್ಚು ಅಪಾಯಕ್ಕೊಳಗಾಗುವ ಬಳಕೆದಾರರಿಗೆ ಆರ್‌ಬಿಐ ನಿರ್ದೇಶಿತ ನಂಬಿಕಸ್ಥ ವ್ಯಕ್ತಿಯ ಮೂಲಕ ಹೆಚ್ಚುವರಿ ದೃಢೀಕರಣವನ್ನು ಪ್ರಸ್ತಾಪಿಸಿದೆ. 70 ವರ್ಷ ಮೇಲ್ಪಟ್ಟವರು ಅಥವಾ ಅಂಗವಿಕಲರು ಹೆಚ್ಚು ಡಿಜಿಟಲ್ ವಂಚನೆಗೆ ಬಲಿಯಾಗುತ್ತಾರೆ. ಈ ಹಿನ್ನೆಲೆಯಲ್ಲಿ, ಇಂಥವರ 50000 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ನಂಬಿಕಸ್ಥ ವ್ಯಕ್ತಿಯ ದೃಡೀಕರಣವನ್ನು ಪಡೆದುಕೊಳ್ಳಬೇಕಾಗುತ್ತದೆ.
- 3. ತುರ್ತು ‘ಕಿಲ್ ಸ್ವಿಚ್’ ಪರಿಚಯ
ಬಳಕೆದಾರರು ತಮ್ಮ ಖಾತೆಗೆ ಲಿಂಕ್ ಮಾಡಲಾದ ಎಲ್ಲ ಡಿಜಿಟಲ್ ಪಾವತಿ ವಿಧಾನಗಳನ್ನು ತಕ್ಷಣವೇ ನಿಷ್ಕ್ರಿಯಗೊಳಿಸಲು ಅನುವು ಮಾಡಿಕೊಡುವ ಏಕೀಕೃತ ‘ಕಿಲ್ ಸ್ವಿಚ್’ ಅನ್ನು ಆರ್‌ಬಿಐ ಪ್ರಸ್ತಾಪಿಸಿದೆ. ಒಮ್ಮೆ ಕಿಲ್ ಸ್ವಿಚ್ ಸಕ್ರಿಯಗೊಳಿಸಿದರೆ, ಅದನ್ನು ತೆರವುಗೊಳಿಸಲು ಗ್ರಾಹಕರು ಬಲವಾದ ದೃಢೀಕರಣ ಸಹಿತ ಭೌತಿಕವಾಗಿ ಶಾಖೆಗಳಿಗೂ ಭೇಟಿ ನೀಡಬೇಕಾಗುತ್ತದೆ. ಇದು ಸಾಕಷ್ಟು ಬಿಗಿ ಭದ್ರತೆಯನ್ನು ಒದಗಿಸಲಿದೆ.
- 4. ಖಾತೆಗಳಿಗೆ ವಾರ್ಷಿಕ ಮಿತಿ
ಇನ್ನು ವೈಯಕ್ತಿಕ ಮತ್ತು ಸಣ್ಣ ವ್ಯವಹಾರ ಖಾತೆಗಳಿಗೆ ವಾರ್ಷಿಕ್ ಕ್ರೆಡಿಟ್‌ಗಳನ್ನು 25 ಲಕ್‌ಷ ರೂ.ಗೆ ಮಿತಿಗೊಳಿಸುವ ಪ್ರಸ್ತಾಪವನ್ನು ಆರ್‌ಬಿಐ ಮಾಡಿದೆ. ಒಂದೊಮ್ಮೆ ಖಾತೆಯಲ್ಲಿ ಈ ಮಿತಿ ಮೀರಿ ವಹಿವಾಟು ನಡೆದರೆ ಖಾತೆದಾರರು ಬ್ಯಾಂಕುಗಳಿಗೆ ತಮ್ಮ ವ್ಯವಹಾರ ಸಾಚಾತನವನ್ನು ವಿವರಿಸಬೇಕಾಗುತ್ತದೆ. ಒಂದೊಮ್ಮೆ 30 ದಿನದಲ್ಲಿ ತೃಪ್ತಿಕರ ಸಮರ್ಥನೆಯು ಸಿಗದಿದ್ದರೆ ಖಾತೆಯಲ್ಲಿರುವ ಹಣವನ್ನು ಕಳುಹಿಸುವವರಿಗೆ ಹಿಂತಿರುಗಿಸಬೇಕಾಗುತ್ತದೆ. ವಂಚನೆಗೆ ಮಾರ್ಗವಾಗಿ ಬ್ಯಾಂಕ್ ಖಾತೆಗಳ ದುರುಪಯೋಗವನ್ನು ತಡೆಯಲು ಕೆವೈಸಿ ಮಾನದಂಡಗಳ ಅಡಿಯಲ್ಲೇ ಈ ನಿಯಮಗಳನ್ನು ಜಾರಿಗೆ ತರಬೇಕಾಗುತ್ತದೆ.
- 5. ನೈಜ ಸಮಯದಲ್ಲಿ ವಂಚನೆ ಪತ್ತೆ ವ್ಯವಸ್ಥೆ
ಇನ್ನು ಬ್ಯಾಂಕುಗಳು ಹಾಗೂ ಪಾವತಿ ಸಂಸ್ಥೆಗಳು ಕೂಡ ನೈಜ ಸಮಯದಲ್ಲಿ ವಂಚನೆ ಪತ್ತೆ ಹಚ್ಚುವ ವ್ಯವಸ್ಥೆ ರೂಪಿಸಬೇಕೆಂಬ ಪ್ರಸ್ತಾಪವನ್ನು ಮಾಡಲಾಗಿದೆ. ಅದರಂತೆ, ಎಐ ಆಧರಿತ ಅಪಾಯ ಸೂಚಕಗಳು, ಸಂಶಯಾಸ್ಪದ ವಹಿವಾಟುಗಳ ಮಾದರಿಗಳು ಪತ್ತೆ ಸೇರಿದಂತೆ ವಂಚನೆ ಸಂಭವಿಸುವ ಮೊದಲೇ ಅವುಗಳನ್ನು ಪತ್ತೆ ಹಚ್ಚುವ ವ್ಯವಸ್ಥೆ ರೂಪಿಸಲು ಸೂಚಿಸಿದೆ.










































