850ಕ್ಕೆ ಏರಲಿದೆಯೇ ಲೋಕಸಭಾ ಸದಸ್ಯರ ಬಲ? ಮಹಿಳಾ ಮೀಸಲಾತಿ ಜಾರಿಗೆ ಕೇಂದ್ರದ ಮಾಸ್ಟರ್ ಪ್ಲಾನ್

Picture of Savistara

Savistara

Bureau Report

ನವದೆಹಲಿ: ಸಂಸತ್ತಿನ ಕೆಳಮನೆಯಾದ ಲೋಕಸಭೆಯ ಸದಸ್ಯರಬಲವನ್ನು ಪ್ರಸ್ತುತ ಇರುವ 543 ರಿಂದ 850 ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಮಹತ್ವದ ಪ್ರಸ್ತಾವನೆ ಸಲ್ಲಿಸಿದೆ. ದಶಕಗಳಿಂದ ಬಾಕಿ ಉಳಿದಿರುವ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಲು ಮತ್ತು ಹೊಸ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಗೆ ಚಾಲನೆ ನೀಡಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.ಈ ಕುರಿತ ಕರಡು ಮಸೂದೆಯನ್ನು ಈಗಾಗಲೇ ಸಂಸದರೊಂದಿಗೆ ಹಂಚಿಕೊಳ್ಳಲಾಗಿದ್ದು, ಮುಂಬರುವ ಮೂರು ದಿನಗಳ ವಿಶೇಷ ಸಂಸತ್ ಅಧಿವೇಶನದಲ್ಲಿ ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳನ್ನು ತರಲು ಸರ್ಕಾರ ಯೋಜಿಸಿದೆ.ಒಟ್ಟು 850 ಸ್ಥಾನಗಳ ಪೈಕಿ 815 ಸ್ಥಾನಗಳನ್ನು ರಾಜ್ಯಗಳಿಗೆ ಮತ್ತು 35 ಸ್ಥಾನಗಳನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲು ಉದ್ದೇಶಿಸಲಾಗಿದ್ದು, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಈ ಕ್ಷೇತ್ರಗಳ ಮರುಹಂಚಿಕೆ ಸಹಕಾರಿಯಾಗಲಿದೆ ಎಂದು ಹೇಳಲಾಗಿದ್ದು. ಹೊಸ ಜನಗಣತಿ ವಿಳಂಬವಾಗುತ್ತಿರುವ ಕಾರಣ, 2029ರ ಚುನಾವಣೆಯೊಳಗೆ ಮೀಸಲಾತಿ ಜಾರಿಗೆ ತರಲು 2011ರ ಜನಗಣತಿಯನ್ನೇ ಆಧಾರವಾಗಿಟ್ಟುಕೊಳ್ಳಲು ಸರ್ಕಾರ ಯೋಜಿಸಿದೆ.

ವಿಪಕ್ಷಗಳಿಂದ ವಿರೋಧ:

ಸರ್ಕಾರದ ಈ ದಿಢೀರ್ ಕ್ರಮಕ್ಕೆ ವಿರೋಧ ಪಕ್ಷಗಳ ‘ಇಂಡಿಯಾ’ (INDIA) ಮೈತ್ರಿಕೂಟ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಮುಖವಾಗಿ ಆಮ್ ಆದ್ಮ ಪಾರ್ಟಿ (AAP), ಆರ್ಜೆಡಿ (RJD) ಮತ್ತು ಡಿಎಂಕೆ (DMK) ಪಕ್ಷಗಳು ಹೋರಾಟಕ್ಕೆ ಸಜ್ಜಾಗಿದು 2011ರ ಹಳೆಯ ಜನಗಣತಿಯ ಬದಲು, ಇತ್ತೀಚಿನ 2021ರ ಜನಗಣತಿಯ ಅಂಕಿಅಂಶಗಳನ್ನು ಬಳಸಬೇಕು ಎಂಬುದು ವಿಪಕ್ಷಗಳ ಪ್ರಬಲ ವಾದವಾಗಿದೆ.ಅಲ್ಲದೆ ಹಿಂದುಳಿದ ವರ್ಗಗಳ (OBC) ಮಹಿಳೆಯರಿಗೆ ಮೀಸಲಾತಿಯೊಳಗೆ ಪ್ರತ್ಯೇಕ ಕೋಟಾ ನೀಡಬೇಕು ಎಂಬ ಬೇಡಿಕೆಯನ್ನು ವಿಪಕ್ಷಗಳು ಮತ್ತೆ ಮುನ್ನೆಲೆಗೆ ತಂದಿವೆ. ಏಪ್ರಿಲ್ 23 ಮತ್ತು 29 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೂ ಮುನ್ನವೇ ಇಂತಹ ನಿರ್ಧಾರ ಕೈಗೊಳ್ಳುತ್ತಿರುವುದು ರಾಜಕೀಯ ಪ್ರೇರಿತ ಎಂದು ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಕಿಡಿಕಾರಿದ್ದಾರೆ.

[t4b-ticker]
error: Content is protected !!