ರಾಜ್ಯದಲ್ಲಿ ಬೇಸಿಗೆ ತನ್ನ ತೀವ್ರ ಮುಖ ತೋರಿಸುತ್ತಿದ್ದು, ಉಷ್ಣ ಅಲೆ ಪರಿಣಾಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಂಗಳೂರು ಸೇರಿದಂತೆ ಹಲವೆಡೆ ತಾಪಮಾನ ಏರಿಕೆಯಾಗಿದ್ದು, ಮುಂದಿನ ಎರಡು ದಿನಗಳಲ್ಲಿ ಇನ್ನಷ್ಟು ಬಿಸಿಗಾಳಿ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಈಗಾಗಲೇ ಕರಾವಳಿ ಮತ್ತು ಕಲ್ಯಾಣ ಕರ್ನಾಟಕ ಭಾಗಗಳು ತಾಪಮಾನದಿಂದ ತತ್ತರಿಸುತ್ತಿವೆ. ಕೆಲವು ಪ್ರದೇಶಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ಗೆ ತಲುಪುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಸಾರ್ವಜನಿಕರು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಅಗತ್ಯವಿಲ್ಲದೆ ಹೊರಗೆ ಹೋಗಬಾರದು ಎಂದು ಸಲಹೆ ನೀಡಲಾಗಿದೆ.
ಉತ್ತರ ಕನ್ನಡದಲ್ಲಿ ತಾಪಮಾನ ಈಗಾಗಲೇ 37 ಡಿಗ್ರಿ ದಾಖಲಾಗಿದ್ದು, ಮುಂದಿನ ದಿನಗಳಲ್ಲಿ 42 ಡಿಗ್ರಿಗೂ ಏರಬಹುದು. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಉಷ್ಣತೆಯ ಮಟ್ಟ ಹೆಚ್ಚಿದ್ದು, ಮಧ್ಯೆ ಸಾಧಾರಣ ಮಳೆಯ ಸಾಧ್ಯತೆ ಕೂಡ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ವಿಜಯಪುರ, ಕಲಬುರ್ಗಿ, ಬೀದರ್ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಹೀಟ್ ವೇವ್ ಅಲರ್ಟ್ ನೀಡಲಾಗಿದೆ.ಬಿಸಿಲಿನ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ಸೂಚಿಸಿದೆ. ಒಟ್ಟಾರೆ, ಮುಂದಿನ ಕೆಲವು ದಿನಗಳು ರಾಜ್ಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗುವ ಹಿನ್ನೆಲೆ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.












































