ದುಬೈ: ಇರಾನ್ ಮತ್ತು ಅಮೆರಿಕ ನಡುವಿನ ಕದನ ವಿರಾಮ ಮಾತುಕತೆಗಳು ವಿಫಲವಾದ ಬೆನ್ನಲ್ಲೇ, ಅಮೆರಿಕವು ಇರಾನಿನ ಬಂದರುಗಳ ಮೇಲೆ ದಿಗ್ಬಂಧನ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜಗತ್ತಿನ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ‘ಹೊರ್ಮುಜ್ ಜಲಸಂಧಿ’ಯ ಪಶ್ಚಿಮ ಭಾಗದಲ್ಲಿ ಭಾರತದ ಕನಿಷ್ಠ 15 ಸರಕು ಸಾಗಣೆ ಹಡಗುಗಳು ಸಿಲುಕಿಕೊಂಡಿದ್ದು, ತೀವ್ರ ಆತಂಕ ಸೃಷ್ಟಿಯಾಗಿದೆ.
ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ನಡುವಿನ ಸಂಧಾನ ಮಾತುಕತೆಗಳು ಯಶಸ್ವಿಯಾಗದ ಕಾರಣ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಬಂದರುಗಳ ಮೇಲೆ ದಿಗ್ಬಂಧನ ಹೇರಲು ಆದೇಶಿಸಿದ್ದಾರೆ.ಸ್ಥಗಿತಗೊಂಡಿರುವ 15 ಭಾರತೀಯ ಹಡಗುಗಳಲ್ಲಿ ಎಲ್‌ಎನ್‌ಜಿ (LNG), ಎಲ್‌ಪಿಜಿ (LPG) ವಾಹಕಗಳು, ಕಚ್ಚಾ ತೈಲ ಟ್ಯಾಂಕರ್‌ಗಳು ಮತ್ತು ಕಂಟೇನರ್ ಹಡಗುಗಳು ಸೇರಿವೆ.
ಪರಿಸ್ಥಿತಿಯನ್ನು ಗಮನಿಸುತ್ತಿರುವ ಭಾರತೀಯ ನೌಕಾಪಡೆಯು ತನ್ನ 6 ಯುದ್ಧನೌಕೆಗಳನ್ನು ಪರ್ಷಿಯನ್ ಕೊಲ್ಲಿಯ ಸಮೀಪ ಮೊಕ್ಕಾಂ ಹೂಡಿದೆ. ಭಾರತೀಯ ವ್ಯಾಪಾರಿ ಹಡಗುಗಳಿಗೆ ಸುರಕ್ಷಿತ ಮಾರ್ಗದರ್ಶನ ನೀಡಲು ನೌಕಾಪಡೆ ನಿರಂತರ ಸಂಪರ್ಕದಲ್ಲಿದೆ.ಈ ನಡುವೆ, ‘ಜಾಗ್ ವಿಕ್ರಮ್’ ಎಂಬ ಎಲ್‌ಪಿಜಿ ಟ್ಯಾಂಕರ್ ಏಪ್ರಿಲ್ 11 ರಂದು ಹೊರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದ್ದು, ಏಪ್ರಿಲ್ 15 ರಂದು ಮುಂಬೈ ತಲುಪುವ ನಿರೀಕ್ಷೆಯಿದೆ. 20,400 ಟನ್ ಎಲ್‌ಪಿಜಿ ಹೊತ್ತಿರುವ ಈ ಹಡಗಿನಲ್ಲಿ 24 ಸಿಬ್ಬಂದಿಗಳಿದ್ದು, ಪ್ರಸ್ತುತ ಭಾರತೀಯ ನೌಕಾಪಡೆಯ ಬೆಂಗಾವಲಿನಲ್ಲಿ ಅರೇಬಿಯನ್ ಸಮುದ್ರದಲ್ಲಿ ಸಾಗುತ್ತಿದೆ.
ವಿಶ್ವದ ಒಟ್ಟು ಕಡಲ ತೈಲ ವ್ಯಾಪಾರದ ಶೇ. 25 ರಷ್ಟು ಭಾಗ ಹೊರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಅಮೆರಿಕದ ಈ ದಿಗ್ಬಂಧನದಿಂದಾಗಿ ಈ ಮಾರ್ಗದಲ್ಲಿ ಹಡಗುಗಳ ಸಂಚಾರ ಗಣನೀಯವಾಗಿ ಇಳಿಮುಖವಾಗಿದ್ದು, ಜಾಗತಿಕ ಇಂಧನ ಪೂರೈಕೆ ಮತ್ತು ಹಡಗು ವಿಮೆ ದರಗಳ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಯಿದೆ.











































