ಮೈಸೂರು: ರಾಜಕೀಯವೇ ಸಾಕೆಂದು ಕಣ್ಣೀರಿಟ್ಟಿದ್ದ ಸಿದ್ದರಾಮಯ್ಯಗೆ ನಮ್ಮ ತಂದೆ ಎಚ್.ಡಿ.ದೇವೇಗೌಡರು ಸಮಾಧಾನಪಡಿಸಿದ್ದರು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.ಜೆಡಿಎಸ್ 18 ಸ್ಥಾನಕ್ಕೆ ಕುಸಿದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿರುವ ಬಗ್ಗೆ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನಾನು ಜನತಾದಳದಲ್ಲಿದ್ದಾಗ 58 ಸೀಟು ಗೆದ್ದಿದ್ವಿ ಅಂತಾರೆ.
ಆದರೆ, 1999ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಸಮೇತ ನಾವೆಲ್ಲ ಸೋತಿದ್ದೆವು. ಆಗ ಸಿದ್ದರಾಮಯ್ಯ, ಡಾ.ಎಚ್.ಸಿ.ಮಹದೇವಪ್ಪ ಇಬ್ಬರು ದೇವೇಗೌಡರ ಮನೆಗೆ ಬಂದಿದ್ದರು. ಸಿದ್ದರಾಮಯ್ಯ ನನಗೆ ಇನ್ನು ರಾಜಕೀಯ ಸಾಕು ಅಂತಾ ಕಣ್ಣೀರಿಟ್ಟಿದ್ದರು. ಅವತ್ತು ಅವರ ಕಣ್ಣೀರಿಗೆ ಬಕೆಟ್ ಇಟ್ಟಿದ್ದರೆ ಬಕೆಟ್ ತುಂಬುತ್ತಿತ್ತು ಎಂದು ವ್ಯಂಗ್ಯವಾಡಿದರು.2004ರ ಚುನಾವಣೆಯಲ್ಲಿ ಮಂಡ್ಯ, ರಾಮನಗರ ಎಲ್ಲೂ ಕೂಡ ಸಿದ್ದರಾಮಯ್ಯ ಬಂದಿಲ್ಲ.
ನಾವೇನು ಅವರನ್ನು ಕರೆಯಲೂ ಇಲ್ಲ. ಅಹಿಂದ ಮಾಡಿ ದೇವೇಗೌಡರಿಗೆ ಅನ್ಯಾಯ ಮಾಡಿದರು. 2006ರಲ್ಲಿ 200 ಮತಗಳಿಂದ ಗೆದ್ದಾಗ ಹೇಗಿತ್ತು ನೆನಪಿಸಿಕೊಳ್ಳಿ. ಚುನಾವಣೆಯಲ್ಲಿ ಗೆಲುವು, ಸೋಲು ಸಾಮಾನ್ಯ. ಚಾಮುಂಡೇಶ್ವರಿ ಅಲ್ಲಿ ಸಿದ್ದರಾಮಯ್ಯ ಯಾಕೆ ಸೋತರು? ಜೆಡಿಎಸ್‌ಗೆ ಒಮ್ಮೆಯೂ ಬಹುಮತ ಸಿಕ್ಕಿಲ್ಲ. ಆದರೂ ನಾನು ಸಿಎಂ ಆಗಿದ್ದೆ. ದೇವರ ಕೃಪೆ ಇದ್ದರೆ ಮುಂದೆಯೂ ಸಿಎಂ ಆಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಸ್ವಂತ ಶಕ್ತಿಯಲ್ಲಿ ಗೆಲ್ಲಿಸಿಕೊಂಡು ಬರಲಿ:
2006ರಲ್ಲಿ ಸಿದ್ದರಾಮಯ್ಯ ಅಹಿಂದ ಹೆಸರಿನಲ್ಲಿ ನಮ್ಮ ಪಕ್ಷಕ್ಕೆ ಚೂರಿ ಹಾಕಿದರು. ಅವರು ನಮ್ಮ ಪಕ್ಷ ಬಿಟ್ಟಾಗ ಅವರೊಂದಿಗೆ ಹೋದವರು ಕೇವಲ 8 ಮಂದಿ. ಇದೆಲ್ಲಾ ಸಿದ್ದರಾಮಯ್ಯ ಅವರಿಗೆ ನೆನಪಿಲ್ಲವೇ?’ ಎಂದು ಕೇಳಿದರು.ನಾನು ಅಹಿಂದ ಚಾಂಪಿಯನ್ ಎನ್ನುವ ಸಿದ್ದರಾಮಯ್ಯ, ಕಾಂಗ್ರೆಸ್ ಬಿಟ್ಟು ಹೊರ ಬಂದು 5-10 ಕ್ಷೇತ್ರಗಳಲ್ಲಿ ಅವರ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲಿ ನೋಡೋಣ ಎಂದು ಸವಾಲು ಹಾಕಿದರು.ಕಾಂಗ್ರೆಸ್‌ಗೆ ಕೊನೆಯ ಮೊಳೆ ಹೊಡೆಯುವುದೇ ಇದೇ ಸಿದ್ದರಾಮಯ್ಯ, ಅವರನ್ನು ಕಂಡರೆ ಅಸೂಯೆ, ಹೊಟ್ಟೆಕಿಚ್ಚು ಇರುವುದು ನಮಗಲ್ಲ. ಕಾಂಗ್ರೆಸ್‌ನಲ್ಲೇ ಕೆಲವರಿಗೆ ಹೊಟ್ಟೆಕಿಚ್ಚಿದೆ. ರಾಜ್ಯ ಸರ್ಕಾರ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಕರ್ನಾಟಕಕ್ಕೆ ಹೆಚ್ಚಿನ ಕಾರ್ಖಾನೆಗಳನ್ನು ತರುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡುವುದಿಲ್ಲ. ಅವರ ಸ್ವಭಾವ ನನಗೆ ಗೊತ್ತಿದೆ. ಸಿಎಂಗಾದಿಗಾಗಿಯೇ ಒಬ್ಬರು ಹೆಚ್ಚಾಗಿ ದೇವರ ಮೊರೆ ಹೋಗುತ್ತಿದ್ದಾರೆ. ದೇವರಿಗೆ ಪ್ರಾರ್ಥನೆಯನ್ನು ಮನಪೂರ್ವಕವಾಗಿ ಮಾಡಬೇಕು. ಸ್ವಾರ್ಥಕ್ಕೆ ಬೇಡಿಕೊಂಡರೆ ದೇವರು ಫಲ ಕೊಡುವುದಿಲ್ಲ ಎಂದು ವ್ಯಂಗ್ಯವಾಡಿದರು.










































