ಬೆಂಗಳೂರು: ಕೇಂದ್ರ ಸರ್ಕಾರ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳನ್ನು ಬರೋಬ್ಬರಿ 816ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕರ್ನಾಟಕದಲ್ಲಿ 28 ಇರುವ ಲೋಕಸಭಾ ಕ್ಷೇತ್ರಗಳು 42 ಕ್ಕೆ ಹೆಚ್ಚುವ ಸಾಧ್ಯತೆಗಳಿವೆ.
2029ರ ಲೋಕಸಭಾ ಚುನಾವಣೆಗೆ ಮೂರು ವರ್ಷ ಬಾಕಿಯಿದೆ. ಈ ಹೊತ್ತಲ್ಲಿ ಪ್ರಧಾನಿ ಮೋದಿ ಸರ್ಕಾರ ಬೃಹತ್ ಮತ್ತು ಐತಿಹಾಸಿಕ ನಿರ್ಧಾರಕ್ಕೆ ಕೈಹಾಕಿದೆ. ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಕಾಯ್ದೆ ಈಗಾಗಲೇ ಸಂಸತ್ತಿನ ಉಭಯ ಸದನಗಳಲ್ಲಿ ಪಾಸ್ ಆಗಿದೆ. ಆದರೆ, ಇದು ಜಾರಿಯಾಗಿದ್ದಿಲ್ಲ. ಈಗ ಅದು ಜಾರಿಯಾಗುವ ಕಾಲ ಸನ್ನಿಹಿತವಾಗಿದೆ. ಇದಕ್ಕಾಗಿ ಪ್ರಸ್ತುತ 543 ಇರುವ ಲೋಕಸಭಾ ಸ್ಥಾನಗಳು ಬರೋಬ್ಬರಿ 816ಕ್ಕೆ ಏರಿಸಲು ಕೇಂದ್ರ ಮುಂದಾಗಿದೆ.
ಜನಸಂಖ್ಯೆಯ ಅನುಪಾತವನ್ನು ಕಾಯ್ದುಕೊಂಡು, ಒಟ್ಟು ಸೀಟುಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಅಧಿವೇಶನದಲ್ಲೇ ಸರ್ಕಾರ ಈ ಕುರಿತ ಮಸೂದೆಯನ್ನು ಮಂಡಿಸುವ ಸಾಧ್ಯತೆ ದಟ್ಟವಾಗಿದೆ. ಇದರ ಬಗ್ಗೆ ವಿರೋಧ ಪಕ್ಷಗಳು ಮತ್ತು ಎನ್‌ಡಿಎ ಮೈತ್ರಿಪಕ್ಷಗಳೊಂದಿಗೆ ಒಮ್ಮತ ಮೂಡಿಸಲು ಸರ್ಕಾರ ಈಗಾಗಲೇ ಕಸರತ್ತು ಆರಂಭಿಸಿದೆ.
ಕ್ಷೇತ್ರ ಪುನರ್‌ವಿಂಗಡಣೆ ಮಾನದಂಡವೇನು?
ಇನ್ನು ಕ್ಷೇತ್ರ ಪುನರ್ವಿಂಗಡಣೆ ಅಥವಾ ಡಿಲಿಮಿಟೇಶನ್ ಪ್ರಕ್ರಿಯೆಯು ಜನಸಂಖ್ಯೆಯನ್ನು ಆಧರಿಸಿ ನಡೆಯುವುದರಿಂದ, ಯಾವ ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚಾಗಿದೆಯೋ ಆ ರಾಜ್ಯಗಳಿಗೆ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳು ಒಲಿಯಲಿವೆ. ಇದು ಈಗ ವಿರೋಧಕ್ಕೆ ಕಾರಣವಾಗಿದೆ.
ನಮ್ಮ ದಕ್ಷಿಣ ಭಾರತದ ರಾಜ್ಯಗಳ ಪೈಕಿ ತಮಿಳುನಾಡಿನಲ್ಲಿ 20 ಸೀಟು ಹೆಚ್ಚಳದೊಂದಿಗೆ 39 ರಿಂದ 59ಕ್ಕೆ ಏರಲಿದೆ. ಕರ್ನಾಟಕದಲ್ಲಿ 14 ಸೀಟು ಹೆಚ್ಚಾಗಲಿದ್ದು, ಸದ್ಯ ಇರುವ 28 ಲೋಕಸಭಾ ಸ್ಥಾನಗಳು 42 ಆಗಲಿವೆ. ಆಂಧ್ರಪ್ರದೇಶದಲ್ಲಿ 13 ಸೀಟು ಹೆಚ್ಚಾಗಿ 25 ರಿಂದ 38ಕ್ಕೆ ಬಂದು ನಿಲ್ಲಲಿದೆ. ಕೇರಳದಲ್ಲಿ 20 ರಿಂದ 30ಕ್ಕೆ ಲೋಕಸಭಾ ಸ್ಥಾನಗಳು ಹೆಚ್ಚಾಗಲಿದ್ದು, 10 ಸೀಟು ಏರಿಕೆಯಾಗಲಿದೆ. ತೆಲಂಗಾಣದಲ್ಲಿ 17 ರಿಂದ 26ಕ್ಕೆ 9 ಸೀಟು ಹೆಚ್ಚಳ ಆಗಲಿದೆ. ಈ ಡೇಟಾ ನೋಡಿದರೆ, ದಕ್ಷಿಣ ಭಾರತದ ರಾಜ್ಯಗಳ ಒಟ್ಟು ಸೀಟುಗಳ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗುವುದಿಲ್ಲ, ಬದಲಾಗಿ ಹೆಚ್ಚಳವೇ ಆಗಲಿದೆ ಎಂದು ಸರ್ಕಾರ ಹೇಳುತ್ತಿದೆ.
ದಕ್ಷಿಣ ಭಾರತದ ರಾಜ್ಯಗಳ ಆತಂಕವೇನು?
ದಕ್ಷಿಣ ಭಾರತದ ರಾಜ್ಯಗಳು ಲೋಕಸಭಾ ಕ್ಷೇತ್ರಗಳ ಡಿಲಿಮಿಟೇಶನ್ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಿವೆ. ಇದಕ್ಕೆ ಕಾರಣ ಜನಸಂಖ್ಯೆಯ ಬೆಳವಣಿಗೆಯಲ್ಲಿನ ಅಸಮಾನತೆ. ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ದಕ್ಷಿಣದ ರಾಜ್ಯಗಳು ಕುಟುಂಬ ಕಲ್ಯಾಣ ಯೋಜನೆಗಳು, ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಯ ಮೂಲಕ ಜನಸಂಖ್ಯೆಯ ಬೆಳವಣಿಗೆಯನ್ನು ಯಶಸ್ವಿಯಾಗಿ ನಿಯಂತ್ರಿಸಿವೆ. ಉದಾಹರಣೆಗೆ, ತಮಿಳುನಾಡಿನ ಫರ್ಟಿಲಿಟಿ ರೇಟ್ ಕೇವಲ 1.4 ರಷ್ಟಿದೆ. ಆದರೆ, ಉತ್ತರ ಪ್ರದೇಶ ಮತ್ತು ಬಿಹಾರದಂತಹ ಉತ್ತರದ ರಾಜ್ಯಗಳಲ್ಲಿ ಹೆಚ್ಚಿನ ಜನನ ಪ್ರಮಾಣದಿಂದಾಗಿ ಜನಸಂಖ್ಯೆ ತೀವ್ರವಾಗಿ ಬೆಳೆದಿದೆ. ಈಗ ಜನಸಂಖ್ಯೆಯ ಆಧಾರದ ಮೇಲೆ ಡಿಲಿಮಿಟೇಶನ್ ಮಾಡಿದರೆ, ಉತ್ತರ ಭಾರತದ ಜನನಿಬಿಡ ಪ್ರದೇಶಗಳಿಗೆ ಹೆಚ್ಚು ಸೀಟುಗಳು ಹೋಗುತ್ತವೆ.
2011ರ ಜನಗಣತಿ ಆಧಾರದ ಮೇಲೆ ಡಿಲಿಮಿಟೇಶನ್?
ಮಹಿಳಾ ಮೀಸಲಾತಿ ಕಾಯ್ದೆಯ ಸೆಕ್ಷನ್ 5ರ ಪ್ರಕಾರ, ಡಿಲಿಮಿಟೇಶನ್ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಈ ಮೀಸಲಾತಿ ಜಾರಿಗೆ ಬರಬೇಕು. ಪ್ರಸ್ತುತ ನಿಯಮಗಳ ಪ್ರಕಾರ, 2026ರ ನಂತರ ನಡೆಯುವ ಮೊದಲ ಜನಗಣತಿಯ ಆಧಾರದ ಮೇಲೆ ಡಿಲಿಮಿಟೇಶನ್ ನಡೆಯಬೇಕು. 2027ರ ವೇಳೆಗೆ ಜನಗಣತಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅದರ ನಂತರ ಡಿಲಿಮಿಟೇಶನ್ ಆಯೋಗ ರಚನೆಯಾಗಬೇಕು. ಈ ಪ್ರಕ್ರಿಯೆ ಮುಗಿಯಲು ಮತ್ತೆ ಮೂರು ವರ್ಷ ಬೇಕಾಗಬಹುದು. ಅಂದರೆ, ಅಲ್ಲಿಯವರೆಗೆ ಕಾಯುತ್ತಾ ಕುಳಿತರೆ 2029ರ ಲೋಕಸಭಾ ಚುನಾವಣೆ ಮುಗಿದೇ ಹೋಗಿರುತ್ತದೆ. ಹೀಗಾಗಿ ಮಹಿಳಾ ಮೀಸಲಾತಿ ಜಾರಿ ಮತ್ತಷ್ಟು ವಿಳಂಬವಾಗುತ್ತದೆ. ಸಂಸತ್ತಿನಲ್ಲಿ ಈ ಮಸೂದೆ ಮಂಡನೆಯಾದಾಗಲೂ ವಿರೋಧ ಪಕ್ಷಗಳು ಇದೇ ಆಕ್ಷೇಪವನ್ನು ಎತ್ತಿದ್ದವು. ಇದಕ್ಕೆ ಪರಿಹಾರವಾಗಿ, ಕೇಂದ್ರ ಸರ್ಕಾರ ಈಗ ಹೊಸ ತಿದ್ದುಪಡಿ ಮಸೂದೆಯನ್ನು ತರಲು ಯೋಚಿಸುತ್ತಿದೆ. ಮುಂಬರುವ ಜನಗಣತಿಯ ಡೇಟಾಗಾಗಿ ಕಾಯುವ ಬದಲು, 2011 ರ ಜನಗಣತಿಯ ಆಧಾರದ ಮೇಲೆಯೇ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ನಡೆಸುವಂತೆ ಮಸೂದೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ.
ಏನಿದು ಕ್ಷೇತ್ರ ಪುನರ್‌ವಿಂಗಡಣೆ?
ಡಿಲಿಮಿಟೇಶನ್ ಆಯೋಗವು ಒಂದು ಶಾಸನಬದ್ಧ ಮತ್ತು ಸ್ವತಂತ್ರ ಸಂಸ್ಥೆಯಾಗಿದ್ದು, ಜನಗಣತಿಯ ಆಧಾರದ ಮೇಲೆ ಒಬ್ಬ ವ್ಯಕ್ತಿ, ಒಂದು ಮತ ಎಂಬ ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸಲು ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳ ಗಡಿಗಳನ್ನು ಮರುಹೊಂದಿಸುವ ಜವಾಬ್ದಾರಿ ಹೊಂದಿದೆ. ಸಂವಿಧಾನದ 82ನೇ ವಿಧಿ ಲೋಕಸಭೆಗೆ ಮತ್ತು 170ನೇ ವಿಧಿ ವಿಧಾನಸಭೆಗೆ ಪ್ರತಿ ಜನಗಣತಿಯ ನಂತರ ಡಿಲಿಮಿಟೇಶನ್ ಕಾಯ್ದೆಯನ್ನು ಜಾರಿಗೊಳಿಸಲು ಸಂಸತ್ತಿಗೆ ಅಧಿಕಾರ ನೀಡಿವೆ. ಈ ಆಯೋಗದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರು ಅಧ್ಯಕ್ಷರಾಗಿರುತ್ತಾರೆ, ಮತ್ತು ಮುಖ್ಯ ಚುನಾವಣಾ ಆಯುಕ್ತರು ಹಾಗೂ ರಾಜ್ಯ ಚುನಾವಣಾ ಆಯುಕ್ತರು ಪದನಿಮಿತ್ತ ಸದಸ್ಯರಾಗಿರುತ್ತಾರೆ. ಸಂಸದರು ಅಥವಾ ಶಾಸಕರು ಸಹವರ್ತಿ ಸದಸ್ಯರಾಗಿ ಸಲಹೆ ನೀಡಬಹುದೇ ಹೊರತು ಅವರಿಗೆ ಮತದಾನದ ಹಕ್ಕಿರುವುದಿಲ್ಲ. ಆಯೋಗದ ಆದೇಶಗಳು ಕಾನೂನಿನ ಬಲವನ್ನು ಹೊಂದಿದ್ದು, ಅದನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.













































