ಮೇಲುಕೋಟೆ: ಇಲ್ಲಿನ ಪ್ರಸಿದ್ದ ಬೆಟ್ಟದ ಯೋಗಾನರಸಿಂಹಸ್ವಾಮಿ ದೇವಾಲಯದ ಹುಂಡಿಯಲ್ಲಿ ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿದೆ ಎಂದು ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾರುಪತ್ತೆಗಾರ ಶ್ರೀಧರ್, ಅರ್ಚಕ ನಾರಾಯಣ ಭಟ್ಟ, ಪರಿಚಾರಕ ತಿರುವೆಂಗಡಾಚಾರ್ ಮಣೆಗಾರರಾದ ಕಸ್ತೂರಿ ಶ್ರೀನಿವಾಸ್ ಹಾಗೂ ಕಾವಲುಗಾರರಾದ ಗಂಗಾಧರ್, ಬಸವರಾಜ್ ಎಂ.ಎನ್. ವಿರುದ್ಧ ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಎಸ್. ಶೀಲಾ ದೂರು ನೀಡಿದ್ದಾರೆ.ದೇವಸ್ಥಾನದಲ್ಲಿ ಅಳವಡಿಸಿದ್ದ ರಹಸ್ಯ ಸಿಸಿಟಿವಿ ಕ್ಯಾಮೆರಾ ವೈರುಗಳನ್ನು ತುಂಡರಿಸಿ, ಡಿವಿಆರ್ ಸುಟ್ಟು ಹಾಕಿ ಹುಂಡಿಯಲ್ಲಿದ್ದ ಕಾಣಿಕೆ ಹಣ, ಚಿನ್ನ, ಬೆಳ್ಳಿ ಪದಾರ್ಥಗಳನ್ನು ಕಳ್ಳತನ ಮಾಡಲಾಗಿದೆ. ಸೇವಾ ಕೌಂಟರಿನ ಬೀಗವನ್ನು ತೆಗೆದು ಈ ಕೃತ್ಯ ಎಸಗಲಾಗಿದೆ. ದೇವಸ್ಥಾನದ ಭದ್ರತಾ ವಿಷಯಗಳನ್ನು ತಿಳಿದಿರುವ ದೇವಾಲಯದ ಸಿಬ್ಬಂದಿ ಮತ್ತು ಇವರ ನೆರವು ಪಡೆದು ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ದೇವಾಲಯ ನಿಯಮದ ಪ್ರಕಾರ ಬಾಗಿಲು ಮುಚ್ಚುವಾಗ ಮತ್ತು ತೆರೆಯುವಾಗ ಪಾರುಪತ್ತೆಗಾರರು, ಅರ್ಚಕರು, ಪರಿಕಾರರು, ಕಾವಲುಗಾರರ ಸಮಕ್ಷಮದಲ್ಲೇ ನಡೆಯಬೇಕು. ಆದರೆ ಜನವರಿ 11ರಂದು ದೇವಾಲಯದಲ್ಲಿ ಮಧ್ಯಾಹ್ನ 3 ಗಂಟೆಯಲ್ಲಿ ಬಾಗಿಲು ಮುಚ್ಚುವ ವೇಳೆ ಮತ್ತು ಬಾಗಿಲು ತೆಗೆಯುವ ವೇಳೆ ಕರ್ತವ್ಯಲೋಪ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಪದೇ ಪದೇ ಕಳ್ಳತನ:’ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹಿಂದಿನಿಂದಲೂ ಹಣ, ಚಿನ್ನ ಮತ್ತು ಬೆಳ್ಳಿ ಪದಾರ್ಥಗಳು ಕಳ್ಳತನವಾಗುತ್ತಿರುವ ಬಗ್ಗೆ ಶಂಕೆ ವ್ಯಕ್ತವಾದ ಕಾರಣ ದೇವಸ್ಥಾನದಲ್ಲಿ ₹3,500 ಮೌಲ್ಯದ ಒಂದು ರಹಸ್ಯ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಲಾಗಿತ್ತು. ದೇವಸ್ಥಾನದ ಗರ್ಭಗುಡಿ ಮುಂಭಾಗ ಮತ್ತು ದೇವಸ್ಥಾನದ ಒಳ ಮತ್ತು ಹೊರ ಆವರಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿತ್ತು’ ಎಂದು ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ತಿಳಿಸಿದ್ದಾರೆ.’ಹುಂಡಿಯಲ್ಲಿ ಚಿನ್ನಾಭರಣ ಕಳ್ಳತನವಾಗಿರುವ ಶಂಕೆಯಿಂದ ಕರ್ತವ್ಯದಲ್ಲಿ ಇದ್ದ ಸಿಬ್ಬಂದಿಗೆ ನೋಟಿಸ್ ನೀಡಲಾಗಿತ್ತು. ನಿಯಮ ಅನುಸಾರ ಮೂರು ನೋಟಿಸ್ ನೀಡಿ ಅವರಿಂದ ಯಾವುದೇ ಉತ್ತರ ಬಾರದ ಕಾರಣ ಈಗ ಪ್ರಕರಣ ದಾಖಲಿಸಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.ಮೇಲುಕೋಟೆ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಆನಂದೇಗೌಡ ನೇತೃತ್ವದಲ್ಲಿ ಸ್ಥಳ ಪರಿಶೀಲಿಸಿ, ತನಿಖೆ ಆರಂಭಿಸಲಾಗಿದೆ.












































