ಮೈಸೂರು: ‘ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಜೀವಂತವಾದ ಸಂಘಟನೆ ಹಾಗೂ ಅದೊಂದು ವಿಚಾರಧಾರೆ. ಅದನ್ನು ನೋಂದಾಯಿಸುವುದು ಹೇಗೆ? ನೀರನ್ನು, ಮನಸ್ಸನ್ನು, ವಿಚಾರವನ್ನು ನೋಂದಣಿ ಮಾಡಿಸಲು ಆದೀತೇ?’ ಎಂದು ಬಿಜೆಪಿ ರಾಜ್ಯ ಘಟಕದ ವಕ್ತಾರ ಎಂ.ಜಿ. ಮಹೇಶ್ ಕೇಳಿದರು.
ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಸೇರಿದಂತೆ ಅನೇಕರು ಶಕ್ತಿಯನ್ನೆಲ್ಲಾ ಪ್ರಯೋಗಿಸಿದರೂ ಸಂಘವನ್ನು ಮುಗಿಸಲು ಆಗಲಿಲ್ಲ. ಪ್ರಿಯಾಂಕ್ ಖರ್ಗೆ ಅಂಥವರು ಎಷ್ಟೇ ಮಂದಿ ಬಂದರೂ ಆರ್‌ಎಸ್‌ಎಸ್‌ಗೆ ಏನನ್ನೂ ಮಾಡಲಾಗದು’ ಎಂದರು.’ಪ್ರಿಯಾಂಕ್ ಖರ್ಗೆ ಅವರು ಗೃಹಮಂತ್ರಿ ಎನ್ನುವುದನ್ನು ಮರೆತು, ಕೆಲಸದ ಬಗ್ಗೆ ಗಮನಹರಿಸದೇ ಪ್ರಚಾರಕ್ಕಾಗಿ ಆರ್‌ಎಸ್‌ಎಸ್ ನಿಂದನೆಯಲ್ಲಿ ತೊಡಗಿದ್ದಾರೆ. ಟಿವಿಗಳಲ್ಲಿ ಹಾಗೂ ದೇಶದಲ್ಲಿ ಚರ್ಚೆಯ ಭಾಗವಾಗುವ ಉದ್ದೇಶದಿಂದ ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.“ಆರ್‌ಎಸ್‌ಎಸ್ ಟೀಕಿಸಿದರೆ, ಕವಡೆ ಕಾಸಿನ ಕಿಮ್ಮತ್ತೂ ಸಿಗುವುದಿಲ್ಲ. ಆರ್‌ಎಎಸ್ ಕಾರಣದಿಂದಲೇ 12 ವರ್ಷಗಳಿಂದ ನಾವು ದೇಶವನ್ನು ಆಳುತ್ತಿದ್ದೇವೆ. ಜನರು ಮನ್ನಣೆ ಕೊಡುತ್ತಿದ್ದಾರೆ’ ಎಂದು ಸಮರ್ಥಿಸಿಕೊಂಡರು.
ಚಟುವಟಿಕೆಗಳ ಪ್ರಮಾಣ ಹಿಂದಿನ ವರ್ಷಕ್ಕಿಂತ ಶೇ 10ಕ್ಕಿಂತ ಜಾಸ್ತಿಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಶೇ 15ರಷ್ಟು ಹೆಚ್ಚಾಗಿದೆ. ಇದರ ಬಗ್ಗೆ ಅವರು ಚಕಾರ ಎತ್ತುವುದಿಲ್ಲ. ಕೋಮು ಸೌಹಾರ್ದದ ಬಗ್ಗೆ ಮಾತನಾಡುವ ಅವರು, ಶಹಬಾದ್ ದಾಳಿ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಶಿವಲಿಂಗ ಅಪವಿತ್ರಗೊಳಿಸಿದ ಪ್ರಕರಣದಲ್ಲಿ ಹಾಕಿದ್ದ ಮೊಕದ್ದಮೆಯನ್ನು ವಾಪಸ್ ಪಡೆದಿದ್ದಾರೆ’ ಎಂದು ದೂರಿದರು.’ಕಲಬುರಗಿ ಸೇರಿದಂತೆ ಇಡೀ ಕರ್ನಾಟಕ ಡ್ರಗ್ಸ್, ಮಾದಕವ್ಯಸನಿಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಸ್ವತಃ ಕಾಂಗ್ರೆಸ್ ಮಂಡಲ ಅಧ್ಯಕ್ಷ ಡ್ರಗ್ಸ್ ಸಾಗಾಣಿಕೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಬಾಂಗ್ಲಾ ದೇಶದ ನುಸುಳುಕೋರರಿಗೆ ಊಟೋಪಚಾರಕ್ಕೆಂದು ಜೈಲುಗಳಿಗೆ ₹ 2 ಕೋಟಿ ಬಿಡುಗಡೆ ಮಾಡುವಂತೆ ವಿತ್ತ ಇಲಾಖೆಗೆ ಪತ್ರ ಬರೆದಿರುವ ಪ್ರಿಯಾಂಕ್, ಕರ್ತವ್ಯ ನಿರ್ವಹಣೆಯಲ್ಲಿ ಪದೇ ಪದೇ ಲೋಪ ಎಸಗುತ್ತಿದ್ದಾರೆ’ ಎಂದು ದೂರಿದರು. ‘ನುಸುಳುಕೋರರು ಎಷ್ಟು ಮಂದಿ ಇದ್ದಾರೆ ಎಂಬುದನ್ನು ಗೃಹ ಸಚಿವರೇ ಬಹಿರಂಗಪಡಿಸಬೇಕು’ ಎಂದು ಒತ್ತಾಯಿಸಿದರು.’ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಗೃಹ ಮಂತ್ರಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ’ ಎಂದು ಆರೋಪಿಸಿದರು.
‘ಕ್ಲಬ್, ಪಬ್‌ಗಳಲ್ಲಿ ಯುವಕರ ವಯಸ್ಸು ದೃಢೀಕರಿಸಿಕೊಂಡು ಪ್ರವೇಶ ನೀಡಬೇಕು ಎಂಬ ನಿಯಮ ಬೆಂಗಳೂರಿಗೆ ಸೀಮಿತಗೊಳಿಸಲಾಗಿದೆ ಏಕೆ? ರಾಜ್ಯದಾದ್ಯಂತ ಅನ್ವಯಿಸಿಲ್ಲವೇಕೆ? ಇದು ಭ್ರಷ್ಟಾಚಾರಕ್ಕೆ, ವಸೂಲಿಗೆ ಅವಕಾಶ ನೀಡಿದಂತಲ್ಲವೇ?’ ಎಂದು ಕೇಳಿದರು.ಪಕ್ಷದ ನಗರ ಜಿಲ್ಲಾ ಘಟಕದ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಸಹ ವಕ್ತಾರ ಜಯಶೇಖರ್, ಮಾಧ್ಯಮ ಸಹ ಸಂಚಾಲಕ ಸಂತೋಷ್‌ಕುಮಾರ್ ಬಿ.ಎಂ. ಇದ್ದರು.


















































