ಭಾರತದ ಖ್ಯಾತ ಮರಳು ಕಲಾವಿದ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುದರ್ಶನ್ ಪಟ್ನಾಯಕ್ ಅವರು ರಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಮರಳು ಶಿಲ್ಪಕಲೆ ಚಾಂಪಿಯನ್‌ಶಿಪ್‌ನಲ್ಲಿ ಪ್ರತಿಷ್ಠಿತ ‘ಗೋಲ್ಡನ್ ಸ್ಯಾಂಡ್ ಮಾಸ್ಟರ್ ಪ್ರಶಸ್ತಿ’ ಹಾಗೂ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮತ್ತೊಮ್ಮೆ ಅಪರೂಪದ ಗೌರವ ತಂದುಕೊಟ್ಟಿದ್ದಾರೆ.
ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್ ನಗರದ ಐತಿಹಾಸಿಕ ‘ಪೀಟರ್ ಆಂಡ್ ಪಾಲ್ ಫೋರ್ಟ್ರೆಸ್’ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಏಕೈಕ ಕಲಾವಿದ ಎಂಬ ಹೆಗ್ಗಳಿಕೆಗೆ ಪಟ್ನಾಯಕ್ ಪಾತ್ರರಾಗಿದ್ದಾರೆ.
ಜಗತ್ತಿನ ಗಮನ ಸೆಳೆದ ಜಗನ್ನಾಥನ ಮರಳು ರಥ!
ವಿಶ್ವದ ಅಗ್ರ 21 ಮಾಸ್ಟರ್ ಶಿಲ್ಪಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಸುದರ್ಶನ್ ಪಟ್ನಾಯಕ್ ಅವರು ಒಡಿಶಾದ ಪ್ರಸಿದ್ಧ ಪುರಿ ರಥಯಾತ್ರೆಯ 12 ಅಡಿ ಎತ್ತರದ ಭವ್ಯ ಮರಳು ರಥವನ್ನು ಸೃಷ್ಟಿಸಿದ್ದರು. ಜಗನ್ನಾಥನ ಮರಳು ಶಿಲ್ಪವು ಜಾಗತಿಕ ತೀರ್ಪುಗಾರರು ಹಾಗೂ ರಷ್ಯಾದ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಪ್ರಶಸ್ತಿ ಸ್ವೀಕರಿಸಿ ಸುದರ್ಶನ್ ಹೇಳಿದ್ದೇನು?
ರಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಮರಳು ಶಿಲ್ಪಕಲೆ ಉತ್ಸವದಲ್ಲಿ ‘ಗೋಲ್ಡನ್ ಸ್ಯಾಂಡ್ ಮಾಸ್ಟರ್’ ಪ್ರಶಸ್ತಿಯೊಂದಿಗೆ ಚಿನ್ನದ ಪದಕ ಗೆದ್ದಿರುವುದು ನನಗೆ ಅತ್ಯಂತ ಸಂತೋಷ ತಂದಿದೆ. ಜಗನ್ನಾಥ ಮಹಾಪ್ರಭುವಿನ ಆಶೀರ್ವಾದದಿಂದ ಈ ಕಲಾಕೃತಿ ಮೂಡಿಬಂದಿದೆ. ಜಾಗತಿಕ ವೇದಿಕೆಯಲ್ಲಿ ನಮ್ಮ ದೇಶದ ಕಲೆಗೆ ಇಂತಹ ದೊಡ್ಡ ಪ್ರಶಂಸೆ ಸಿಕ್ಕಿರುವುದು ಭಾರತಕ್ಕೆ ಸಂದ ಗೌರವವಾಗಿದೆ ಎಂದು ಸುದರ್ಶನ್ ಪಟ್ನಾಯಕ್ ಹರ್ಷ ವ್ಯಕ್ತಪಡಿಸಿದ್ದಾರೆ.
ಗಣ್ಯರಿಂದ ಪ್ರಶಂಸೆಯ ಮಹಾಪೂರ
ಸುದರ್ಶನ್ ಅವರ ಈ ಐತಿಹಾಸಿಕ ಸಾಧನೆಗೆ ಒಡಿಶಾ ಮುಖ್ಯಮಂತ್ರಿಗಳು ಸೇರಿದಂತೆ ದೇಶದ ಹಲವು ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಈ ಪ್ರಶಸ್ತಿಯು ಕೇವಲ ಒಡಿಶಾಗೆ ಮಾತ್ರವಲ್ಲದೆ ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಗಣ್ಯರು ಶ್ಲಾಘಿಸಿದ್ದಾರೆ.
ಯಾರು ಈ ಸುದರ್ಶನ್ ಪಟ್ನಾಯಕ್?
ಒಡಿಶಾದ ಪುರಿ ಕಡಲತೀರದವರಾದ ಸುದರ್ಶನ್ ಪಟ್ನಾಯಕ್, ತಮ್ಮ ಬಾಲ್ಯದಲ್ಲೇ ಮರಳಿನಲ್ಲಿ ಚಿತ್ರ ಬಿಡಿಸುವ ಮೂಲಕ ಕಲಾಪ್ರೇಮಿಗಳ ಗಮನ ಸೆಳೆದಿದ್ದರು.ವಿಶ್ವ ಶಾಂತಿ, ಪರಿಸರ ಸಂರಕ್ಷಣೆ ಮತ್ತು ಜಾಗತಿಕ ವಿದ್ಯಮಾನಗಳ ಕುರಿತು ಮರಳು ಶಿಲ್ಪಗಳ ಮೂಲಕ ಜಾಗೃತಿ ಮೂಡಿಸುವ ಇವರು, ಇದುವರೆಗೆ ಜಗತ್ತಿನಾದ್ಯಂತ 65ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ದೇಶಕ್ಕೆ ನೂರಾರು ಪ್ರಶಸ್ತಿಗಳನ್ನು ತಂದುಕೊಟ್ಟಿದ್ದಾರೆ.ಇವರ ಅಪೂರ್ವ ಕಲಾ ಸೇವೆಗಾಗಿ ಭಾರತ ಸರ್ಕಾರ ಇವರಿಗೆ 2014 ರಲ್ಲಿ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಶ್ರೀ’ ನೀಡಿ ಗೌರವಿಸಿದೆ. ಅಲ್ಲದೆ ಇವರು ವಿಶ್ವದ ಅತಿ ಎತ್ತರದ ಮರಳು ಶಿಲ್ಪ ನಿರ್ಮಿಸುವ ಮೂಲಕ ‘ಗಿನ್ನೆಸ್ ರೆಕಾರ್ಡ್’ ದಾಖಲೆ ಬರೆದಿದ್ದಾರೆ.












































