
ಹೊಸದಿಲ್ಲಿ: “ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎಂಬ ಉದ್ಧಟತನದ ಹೇಳಿಕೆ ನೀಡಿ ಕನ್ನಡಿಗರನ್ನು ಕೆಣಕಿದರೂ ಬಹುಭಾಷಾ ನಟ ಕಮಲ್ ಹಾಸನ್ ಪಾರಾಗಿದ್ದಾರೆ.
ಕ್ಷಮೆ ಕೇಳುವುದಿಲ್ಲ ಎಂದು ಪಟ್ಟು ಹಿಡಿದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕಮಲ್ ಹಾಸನ್‌ಗೆ ಅಲ್ಲಿ ಗೆಲುವು ಸಿಕ್ಕಿದೆ. ಕರ್ನಾಟಕದಲ್ಲಿ ಅವರ “ಥಗ್‌ಲೈಫ್’ ಬಿಡುಗಡೆಗೆ ಸೂಕ್ತ ಭದ್ರತೆ ಒದಗಿಸುವಂತೆ ಸುಪ್ರೀಂ ಕೋರ್ಟ್ ನ್ಯಾಯಪೀಠವು ಕರ್ನಾಟಕ ಸರಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ ಕಮಲ್ ಹಾಸನ್ ಅವರು ಕನ್ನಡಿಗರ ಕ್ಷಮೆ ಕೇಳಬೇಕಾದ ಅಗತ್ಯವಿಲ್ಲ ಎಂದಿದೆ.
“ಥಗ್ ಲೈಫ್’ ಚಲನಚಿತ್ರದ ಪ್ರದರ್ಶನಕ್ಕೆ ಸಂಬಂಧಿಸಿ ಗುರುವಾರ ಸುಪ್ರೀಂ ಕೋರ್ಟ್ ಕರ್ನಾಟಕ ಸರಕಾರಕ್ಕೆ ಕೆಲವು ನಿರ್ದೇಶನ ನೀಡಿ, ಪ್ರಕರಣವನ್ನು ಇತ್ಯರ್ಥಪಡಿಸಿದೆ.
ಅಲ್ಲದೆ ಕಮಲ್ ಹೇಳಿಕೆಗೆ ಸಂಬಂಧಿಸಿ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಅಡ್ಡಿಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಲ್ಲದೆ, ಈ ವಿಷಯದಲ್ಲಿ ಕರ್ನಾಟಕ ಸರಕಾರವು ಒತ್ತಡಕ್ಕೆ ಮಣಿದಿದೆ ಎಂದು ತರಾಟೆಗೆ ತೆಗೆದು ಕೊಂಡಿದೆ. ಸರಕಾರಕ್ಕೆ ಸುಪ್ರೀಂ ಕಿವಿಮಾತು
ಕೇವಲ ಒಂದು ಅಭಿಪ್ರಾಯಕ್ಕಾಗಿ ಸಿನೆಮಾ ನಿಲ್ಲಿಸಲಾಗುತ್ತದೆ ಎಂದರೆ ನೀವು (ಸರಕಾರ) ಅವರ ಒತ್ತಡಕ್ಕೆ ಮಣಿದಿದ್ದೀರಿ ಎಂದೇ ಅರ್ಥ. ಇಂತಹ ಸಮಯದಲ್ಲಿ ಸರಕಾರ ತನ್ನ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಸಿನೆಮಾ ನಿರ್ಬಂಧಿಸಿಲ್ಲ: ರಾಜ್ಯ ಸರಕಾರ
ಥಗ್ ಲೈಫ್ ಸಿನೆಮಾ ಬಿಡುಗಡೆಗೆ ಸಂಬಂಧಿಸಿ ನಾವು ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ ಎಂದು ಕರ್ನಾಟಕ ಸರಕಾರವು ಸುಪ್ರೀಂ ಕೋರ್ಟ್‌ಗೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಿದೆ. ಒಂದು ವೇಳೆ ನಿರ್ಮಾಪಕರು ಸಿನೆಮಾವನ್ನು ಪ್ರದರ್ಶಿಸಲು ನಿರ್ಧರಿಸಿದರೆ ಸರಕಾರವು ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿದೆ. ಸಿನೆಮಾಗೆ ಸಂಬಂಧಿಸಿ ಅಗತ್ಯ ರಕ್ಷಣೆ ಮತ್ತು ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದೆ. ಈ ಭರವಸೆಯ ಬಳಿಕ ಸುಪ್ರೀಂ ಕೋರ್ಟ್ ಅರ್ಜಿಯನ್ನು ಇತ್ಯರ್ಥಗೊಳಿಸಿದೆ.













































